- ‘ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ 15% ಆರೋಪ ಸುಳ್ಳು’
- ‘ಬಿಜೆಪಿ ಟೀಕೆ ಮಾಡುವ ನೈತಿಕ ಹಕ್ಕು ಕಳೆದುಕೊಂಡಿದೆ’
ಗುತ್ತಿಗೆದಾರರಿಗೆ ಬಿಲ್ ಬಾಕಿ ಬಗ್ಗೆ ತನಿಖೆ ನಡೆಸಲು ನಾಲ್ಕು ತಂಡ ರಚನೆ ಮಾಡಲಾಗಿದೆ. ವರದಿ ಬಳಿಕ ಬಿಲ್ ಕ್ಲಿಯರ್ ಮಾಡುತ್ತೇವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, “ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರು ಮಾಡಿದ್ದ 40% ಆರೋಪ ಸತ್ಯ. ಆದರೆ ಇವಾಗ ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ 15% ಆರೋಪ ಸುಳ್ಳು” ಎಂದು ಸ್ಷಷ್ಟನೆ ನೀಡಿದರು..
“ಬಿಜೆಪಿ ಅವರ ಮಾತಿಗೆ ಕಿಮ್ಮತ್ತಿಲ್ಲ. ತಮ್ಮ ಸರ್ಕಾರದಲ್ಲಿ 40% ಕಮಿಷನ್ ಆಯಿತು. ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ಐದು ವರ್ಷ ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡಲಿ ಅಷ್ಟೇ” ಎಂದರು.
“ವರದಿ ಕೊಡುವ ಮೊದಲೇ ಕಮಿಷನ್ ಆರೋಪ ಮಾಡಲಾಗುತ್ತಿದೆ. ಅವರು ಮಾಡಿರುವ ಆಪಾದನೆ ಸತ್ಯಕ್ಕೆ ದೂರವಾಗಿದೆ. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕು. ಬೇಗ ಬಿಲ್ ಬಿಡುಗಡೆಯಾದರೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಆನ್ ಲೈನ್ ನಲ್ಲಿ ಬಿಲ್ ಪೇಮೆಂಟ್ ಮಾಡಲು ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬಿಬಿಎಂಪಿ ಗುತ್ತಿಗೆದಾರರ ಸಂಘ 15% ಕಮಿಷನ್ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದೆ. ಬಾಕಿ ಬಿಲ್ ಬಿಡುಗಡೆ ಮಾಡಲು ಗುತ್ತಿಗೆದಾರರು ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನು ಗುತ್ತಿಗೆದಾರರು ಭೇಟಿ ಮಾಡಿದ್ದಾರೆ. ಬಾಕಿ ಪಾವತಿ ಆಗದಿದ್ದಲ್ಲಿ ಕೆಲಸ ನಿಲ್ಲಿಸುವ ಬೆದರಿಕೆ ಕೂಡ ಹಾಕಿದ್ದನ್ನು ಇಲ್ಲಿ ನೆನೆಯಬಹುದು.