- ಸಿಸಿಬಿ ವಶಕ್ಕೆ ನೀಡಲಾಗಿದ್ದ ಹತ್ತು ದಿನಗಳ ಕಾಲಾವಕಾಶ ಇಂದು(ಸೆ.23) ಪೂರ್ಣ
- ಅ.6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆಂಗಳೂರಿನ 3ನೇ ಎಸಿಎಂಎಂ ನ್ಯಾಯಾಲಯ
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ನಂಬಿಸಿ ಕೋಟ್ಯಂತರ ರೂ. ವಂಚಿಸಿದ ಪ್ರಕರಣ ಸಂಬಂಧ ಚೈತ್ರಾ ಸೇರಿ ಏಳು ಮಂದಿ ಆರೋಪಿಗಳನ್ನು ಅಕ್ಟೋಬರ್ 6ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್ ಶನಿವಾರ ಆದೇಶ ಹೊರಡಿಸಿದೆ.
ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ವಶಕ್ಕೆ ನೀಡಲಾಗಿದ್ದ 10 ದಿನಗಳ ಕಾಲಾವಕಾಶ ಇಂದು(ಸೆ.23) ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಗಗನ್, ರಮೇಶ್ ಹಾಗೂ ಶ್ರೀಕಾಂತ್‌ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು, ತಪಾಸಣೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸಿಸಿಬಿ ತನಿಖಾಧಿಕಾರಿಯವರು ಚೈತ್ರಾ ಮತ್ತು ಇತರೆ ಆರೋಪಿಗಳನ್ನು ವಿಚಾರಣೆ ನಡೆಸಿ ಎಲ್ಲ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಎ3 ಆರೋಪಿ ಅಭಿನವ ಹಾಲಶ್ರೀ
ನ್ಯಾಯಾಲಯದಲ್ಲಿ ಸಿಸಿಬಿ ಪೊಲೀಸರು ಕಸ್ಟಡಿಗೆ ನೀಡಲು ಮನವಿ ಮಾಡಿದ ಕಾರಣ ನ್ಯಾಯಾಲಯವು ಚೈತ್ರಾ ಕುಂದಾಪುರ ಮತ್ತು ಇತರೆ ಆರು ಮಂದಿ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ, ಆದೇಶ ನೀಡಿದೆ.
ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ಏಳು ಮಂದಿ ಆರೋಪಿಗಳಾದ ಚೈತ್ರಾ ಕುಂದಾಪುರ, ಚಿಕ್ಕಮಗಳೂರು ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು, ರಮೇಶ್, ಪ್ರಜ್ವಲ್, ಧನರಾಜ್, ಶ್ರೀಕಾಂತ್, ಚನ್ನಾನಾಯ್ಕ್ ಎಂಬುವವರನ್ನು ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಈ ನಡುವೆ ಸೆ.29ರವರೆಗೆ ಸಿಸಿಬಿ ಕಸ್ಟಡಿಯಲ್ಲಿರುವ ಪ್ರಕರಣದ ಎ3 ಆರೋಪಿ ಅಭಿನವ ಹಾಲಶ್ರೀ ಅವರ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದು, ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಚೈತ್ರಾ ಹಾಗೂ ಅಭಿನವ ಹಾಲಶ್ರೀ ಆಪ್ತರಿಗೆ ನೋಟಿಸ್ ಜಾರಿ ಮಾಡಲಾಗಿದೆ.