ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮುಖ್ಯಮಂತ್ರಿಗಳು 2024-25ನೇ ಸಾಲಿನ ಆಯವ್ಯಯದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆ ಘೋಷಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ/ವೇತನ ಪತ್ರ/ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಲ್ಲಿ ಯಾವುದಾದರೂ ದಾಖಲೆಗಳನ್ನು ಸೇವಾನುಭವಕ್ಕಾಗಿ ಒದಗಿಸಬೇಕು.
ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಜಿಲ್ಲಾ ವ್ಯಾಪ್ತಿಗೆ ಉಚಿತವಾಗಿ ಸಂಚರಿಸಬಹುದು. ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಒದಗಿಸಬೇಕು.
ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ ಪ್ರತಿ ತಾಲ್ಲೂಕಿಗೆ ಸಂಪಾದಕರು ಸೂಚಿಸುವ ಒಬ್ಬರಿಗೆ,
ಜಿಲ್ಲಾ ಮಟ್ಟದ ಪತ್ರಿಕೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಒಬ್ಬರಿಗೆ, ಆರು ಪುಟಗಳಲ್ಲಿ ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ಓರ್ವ ವರದಿಗಾರರು ಹಾಗೂ ಓರ್ವ ಫೋಟೋಗ್ರಾಫರ್, ಎಂಟು ಅಥವಾ ಹೆಚ್ಚು ಪುಟಗಳಲ್ಲಿ ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ಇಬ್ಬರು ವರದಿಗಾರರು ಹಾಗೂ ಓರ್ವ ಫೋಟೋಗ್ರಾಫರ್‌ಗೆ ಬಸ್ ಪಾಸ್ ಪಡೆಯಲು ಅವಕಾಶವಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ಬೆಳೆಸಿದ ಮಧ್ಯಮವರ್ಗ; ಮಧ್ಯಮವರ್ಗ ಮುಗಿಸಿದ ಮೋದಿ
ವಿದ್ಯುನ್ಮಾನ ವಾಹಿನಿಗಳ ವರದಿಗಾರರು ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಪ್ರತಿ ತಾಲ್ಲೂಕಿಗೆ ಓರ್ವ ಕ್ಯಾಮರಾಮ್ಯಾನ್ ಹಾಗೂ ಓರ್ವ ವರದಿಗಾರರು ಬಸ್ ಪಾಸ್ ಪಡೆಯಬಹುದಾಗಿದೆ. ದಿನಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳ ಸಂಪಾದಕರು ನೀಡುವ ನೇಮಕಾತಿ ಪತ್ರ ಹಾಗೂ ಶಿಫಾರಸ್ಸು ಆಧರಿಸಿ ಅರ್ಹ ಪತ್ರಕರಿಗೆ ಬಸ್ ಪಾಸ್‌ಗಳನ್ನು ನೀಡಲಾಗುವುದು.
ಆಸಕ್ತ ಹಾಗೂ ಅರ್ಹ ಪತ್ರಕರ್ತರು ತಮ್ಮ ಸಮೀಪದ ಗ್ರಾಮ ಒನ್,ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಸೇವಾಸಿಂಧು ಪೋರ್ಟಲ್ ನಲ್ಲಿ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಅಪ್‌ಲೋಡ್ ಮಾಡಿದ ದಾಖಲೆಗಳು ಹಾಗೂ ಆನ್‌ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ತಮ್ಮ ಜಿಲ್ಲೆಯ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.