- ಬೆಂಗಳೂರಿನಲ್ಲಿ ಕಾನೂನು ನೆರವು ಕಚೇರಿ ತೆರೆಯುತ್ತೇನೆ
- ಬಿಜೆಪಿ-ಹಿಂದೂ ಕಾರ್ಯಕರ್ತರಲ್ಲಿ ಧೈರ್ಯ ತುಂಬುವೆ
ರಾಜ್ಯದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಹಿಂದೂ ಸಂತ್ರಸ್ತರಿಗೆ ಕಾನೂನು ನೆರವು ನೀಡುವುದಕ್ಕಾಗಿ ಬೆಂಗಳೂರಿನಲ್ಲಿ ಕಚೇರಿ ತೆರೆಯುತ್ತೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಿಸಿದರು.
ಶನಿವಾರ ವಿಜಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡರೂ ಪೊಲೀಸರು ಪ್ರಕರಣ ದಾಖಲಿಸುವ, ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಬರೆಸಿಕೊಳ್ಳುವ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯದ ಹರಣ ನಡೆಯುತ್ತಿದೆ. ಇಂಥ ದೌರ್ಜನ್ಯದಿಂದ ಬಾಧಿತರಿಗೆ ಉಚಿತವಾಗಿ ಕಾನೂನು ನೆರವು ನೀಡುವುದಕ್ಕಾಗಿ ಎರಡು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಚೇರಿ ತೆರೆಯುವೆ” ಎಂದರು.
“ಉಚಿತ ಕಾನೂನು ನೆರವು ನೀಡಲು ಹಲವು ವಕೀಲರು ಮುಂದೆ ಬಂದಿದ್ದಾರೆ. ಬಾಧಿತರಿಗೆ ಉಚಿತ ಕಾಲಿಂಗ್ ಸೇವೆ ಆರಂಭಿಸಿ, ಭಯದಿಂದ ಬಳಲಿರುವ ಬಿಜೆಪಿ-ಹಿಂದೂ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಕೆಲಸ ಮಾಡಲಿದ್ದೇನೆ” ಎಂದು ಹೇಳಿದರು.
“ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ ಹೆಸರು ಇಡುವುದು ಸೂಕ್ತವಲ್ಲ. ಆದಿಲ್ ಶಾಹಿ, ನಿಜಾಮ ಶಾಹಿ ವ್ಯವಸ್ಥೆಯಿಂದ ನಮ್ಮ ಭಾಗ ಅಭಿವೃದ್ಧಿಯಾಗಿಲ್ಲ. ಬದಲಾಗಿ ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಜಯಚಾಮರಾಜೇಂದ್ರ ಒಡೆಯರ್ ಅಥವಾ ಮೈಸೂರು ರಾಜ ಮನೆತನದ ಮಹಾರಾಜರ ಹೆಸರು ಇಡಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಟ್ಟು ಅಂಗವೈಕಲ್ಯವಲ್ಲ; ಸ್ಮೃತಿ ಇರಾನಿ ಹೇಳಿಕೆ ಯಾರನ್ನು ಮೆಚ್ಚಿಸಲು?
“ಭ್ರಷ್ಟಾಚಾರ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ಸಿಬಿಐ ತನಿಖೆ ವಾಪಸ್ ಪಡೆದಿರುವ ಕ್ರಮ ಅರಾಜಕತೆಗೆ ನಾಂದಿ ಹಾಡಲಿದೆ. ಭವಿಷ್ಯದಲ್ಲಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧವೂ ಪ್ರಕರಣ ವಾಪಸ್ ಪಡೆಯುತ್ತೇವೆ ಎಂದರೆ ಅರಾಜಕತೆ ಉಂಟಾಗಲಿದೆ” ಎಂದು ಹೇಳೀದರು.
“ಇದೇ ಕಾರಣಕ್ಕೆ ನಾನು ಕಾನೂನು ಹೋರಾಟಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದು, ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಜನವರಿ 5 ರಂದು ಮತ್ತೆ ವಿಚಾರಣೆ ಇದ್ದು, ನ್ಯಾಯಕ್ಕೆ ಜಯ ಸಿಗಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
“ವಿಜಯಪುರ ನಗರದ ಓರ್ವ ಇಸ್ಲಾಂ ಧರ್ಮಗುರು ವಿರುದ್ಧ ನಾನು ಮಾಡಿರುವ ಆರೋಪಿಗಳ ಕುರಿತು ತನಿಖೆ ನಡೆಯುವುದು ಖಚಿತ. ಆದರೆ ಈ ಕುರಿತು ಬಹಿರಂಗವಾಗಿ ಮಾಹಿತಿ ಹಂಚಿಕೊಳ್ಳಲಾರೆ” ಎಂದರು.