- ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡುತ್ತದೆ : ಪರಮೇಶ್ವರ್
- ಬಿಜೆಪಿಯಲ್ಲಿ ವಿಕೃತ ಮನಸ್ಸಿನವರು ತುಂಬಿ ತುಳುಕುತ್ತಿದ್ದಾರೆ : ಬಿ.ಕೆ.ಹರಿಪ್ರಸಾದ್
‘ಜಿ ಪರಮೇಶ್ವರ್ ಮಗ ಲಿಂಗ ಬದಲಾಯಿಸಿಕೊಂಡಿದ್ದು ಮಕ್ಕಳಾಟ’ ಎಂದು ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ತಮ್ಮ ಮಗನ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ಗೃಹ ಸಚಿವ ಜಿ ಪರಮೇಶ್ವರ್ ನಿರಾಕರಿಸಿದ್ದಾರೆ.
ತುಮಕೂರಿನಲ್ಲಿದ್ದ ಸಚಿವರ ಬಳಿ ಮಾಧ್ಯಮದ ಪ್ರತಿನಿಧಿಗಳು ಯಶ್ಪಾಲ್ ಸುವರ್ಣ ಹೇಳಿಕೆ ಬಗ್ಗೆ ಕೇಳಿದಾಗ, ‘ನಾನ್ಯಾಕೆ ಪ್ರತಿಕ್ರಿಯಿಸಬೇಕು’ ಎಂದು ಹೇಳಿದ್ದಾರೆ.
‘ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಅವರಿಗೆ ಏನು ಹೇಳುವುದಕ್ಕೂ ಸ್ವಾತಂತ್ರ್ಯ ಇದೆ’ ಎಂದಷ್ಟೇ ಹೇಳಿದ್ದರು.
ಉಡುಪಿ ಕಾಲೇಜಿನ ವಿದ್ಯಾರ್ಥಿನಿ ಶೌಚೌಲಯಕ್ಕೆ ತೆರಳಿದ್ದಾಗ ವಿಡಿಯೋ ಚಿತ್ರೀಕರಣ ಘಟನೆ ಬಗ್ಗೆ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳುತ್ತದೆ. ಘಟನೆಗೆ ರಾಜಕೀಯ ಬಣ್ಣ ಕೊಡುವ ಅಗತ್ಯವಿಲ್ಲ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
‘ಸರ್ಕಾರ ನಡೆಸುವಂತವರು ಇಂತಹ ಘಟನೆಗಳನ್ನು ಲಘುವಾಗಿ ತೆಗೆದುಕೊಂಡಿಲ್ಲ. ಆದರೆ ಬಿಜೆಪಿಯವರು ಬೇರೆ ಅರ್ಥ, ವ್ಯಾಖ್ಯಾನದಲ್ಲಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಜನರು ಕೊಟ್ಟ ತೀರ್ಪಿನಂತೆ ಜವಾಬ್ದಾರಿಯಿಂದ ಸರ್ಕಾರ ನಡೆಸುತ್ತೇವೆ’ ಎಂದರು.
ಇದನ್ನು ಓದಿದ್ದೀರಾ? ‘ಜಿ ಪರಮೇಶ್ವರ್ ಮಗ ಲಿಂಗ ಬದಲಾಯಿಸಿಕೊಂಡಿದ್ದು ಮಕ್ಕಳಾಟ’: ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಯಶ್ಪಾಲ್ ಸುವರ್ಣ
‘ಜನ ಕಾಂಗ್ರೆಸ್ ಪರವಾಗಿ ತೀರ್ಪು ಕೊಟ್ಟು 136 ಸೀಟು ಗೆಲ್ಲಿಸಿದ್ದಾರೆ. ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಮಾತು ಕೊಟ್ಟಿದ್ದೇವೆ, ಅದನ್ನು ಜಾರಿಗೆ ತರುತ್ತಿದ್ದೇವೆ. ಅದಕ್ಕೆ ಹೊಟ್ಟೆ ಉರಿಯಿಂದ ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ. ಕೇವಲ 65 ಸೀಟು ಗೆದ್ದಿದ್ದರೂ ಇವರಿಗೆ ಬುದ್ಧಿ ಬಂದಿಲ್ಲ ಅಂತ ಅನಿಸುತ್ತಿದೆ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.
ಈ ನಡುವೆ ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆಯೇ ಮತ್ತೆ ಹೇಳಿಕೆ ನೀಡಿ, ಸಮರ್ಥನೆ ಮಾಡಿಕೊಂಡಿರುವ ಉಡುಪಿಯ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿಯ ಮಕ್ಕಳನ್ನು ಮಕ್ಕಳಾಟ ಎಂದು ಉಲ್ಲೇಖಿಸಿ ಹೇಳಿಕೆ ನೀಡಿದ್ದಕ್ಕೆ ಈ ರೀತಿ ಹೇಳಿದ್ದೇನೆ. ಗೃಹ ಸಚಿವರಾಗಿ ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕಿತ್ತು. ಸಂತ್ರಸ್ತ ಹೆಣ್ಣು ಮಕ್ಕಳ ನೋವು ಗೊತ್ತಾಗಲಿ ಅಂತ ಹೇಳಿದ್ದೇನೆಯೇ ಹೊರತು ಅವರ ವೈಯಕ್ತಿಕ ವಿಚಾರಗಳನ್ನು ಟೀಕೆ ಮಾಡಿದ್ದಲ್ಲ’ ಎಂದಿದ್ದಾರೆ.
ಬಿಜೆಪಿಯಲ್ಲಿ ವಿಕೃತ ಮನಸ್ಸಿನವರು ತುಂಬಿ ತುಳುಕುತ್ತಿದ್ದಾರೆ : ಬಿ.ಕೆ.ಹರಿಪ್ರಸಾದ್
ಡಾ.ಪರಮೇಶ್ವರ್ ಕುಟುಂಬದ ಬಗ್ಗೆ ಯಶ್ಪಾಲ್ ಹೇಳಿಕೆ ವಿಚಾರದ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದರ ಜೊತೆಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಗೃಹ ಸಚಿವರು ದಲಿತ ಸಮುದಾಯಕ್ಕೆ ಸೇರಿದವರು. ಅವರ ವಿರುದ್ಧ ಕೆಟ್ಟದಾಗಿ ಮಾತನಾಡಿ ಅವಹೇಳನ ಮಾಡಿದ್ದಾರೆ. ಬಿಜೆಪಿಯಲ್ಲಿ ವಿಕೃತ ಮನಸ್ಸಿನವರು ತುಂಬಿ ತುಳುಕುತ್ತಿದ್ದಾರೆ ಖುದ್ದು ಪ್ರಧಾನಿ ಮೋದಿಯವರು ಈ ಬಗ್ಗೆ ಗೃಹ ಸಚಿವರ ಬಳಿ ಕ್ಷಮೆ ಕೇಳಬೇಕು. ಯಶ್ಪಾಲ್‌ನಂಥವರು ಇಂತಹ ಹೇಳಿಕೆ ನೀಡಿ ಕೇವಲ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ಯಾರಾದರೂ ತಾಲಿಬಾನ್‌ಗಳಿದ್ದರೆ ಬಿಜೆಪಿಯ ಇಂತಹ ಶಾಸಕರು ಮತ್ತು ನಾಯಕರು ಎಂದು ಕಿಡಿಕಾರಿದರು.