- ‘ಕಾಂಗ್ರೆಸ್‌ನಲ್ಲಿ ಮೂಲ-ವಲಸಿಗರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ’
- ‘ಚುನಾವಣೆಯಲ್ಲಿ ಜೆಡಿಎಸ್ ಸೋತಿರಬಹುದು ಸತ್ತಿಲ್ಲ, ಸಾಯುವುದೂ ಇಲ್ಲ’
ಜೆಡಿಎಸ್ ಮುಳುಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಸುಭದ್ರವಾಗಿಲ್ಲ ಎಂಬುದನ್ನು ಪಕ್ಷದಲ್ಲಿಯೇ ಸ್ಫೋಟಗೊಂಡಿರುವ ಅಸಮಾಧಾನವೇ ಹೇಳುತ್ತಿದೆ. ನಾವ್ಯಾರು ಸರ್ಕಾರವನ್ನು ಕೆಡವುವ ಅಗತ್ಯವಿಲ್ಲ ಎಂದು ಶಾಸಕ ಜಿ ಟಿ ದೇವೇಗೌಡ ಟೀಕಿಸಿದರು.
ಜೆಡಿಎಸ್ ರಾಜ್ಯ ಕಚೇರಿ ಜೆ ಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಗೆದ್ದಲು ಹುತ್ತ ಕಟ್ಟಿ ವಾಸ ಮಾಡುತ್ತಿರುತ್ತದೆ. ಬಳಿಕ ಅಲ್ಲಿಗೆ ಹಾವು ಬಂದು ಸೇರಿಕೊಂಡು ಹುತ್ತವನ್ನು ತನ್ನದಾಗಿಸಿಕೊಳ್ಳುತ್ತದೆ. ಹೀಗೆ ಕಾಂಗ್ರೆಸ್‌ನಲ್ಲಿಯೂ ಅಸಮಾಧಾನ ಸ್ಪೋಟಗೊಂಡಿದೆ. ‘ನನಗೆ ಸಿಎಂ ಮಾಡಲೂ ಗೊತ್ತು, ಇಳಿಸಲು ಗೊತ್ತ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ. ಹೀಗೆ ಹೇಳಿದ್ದು, ಮೂಲ ಕಾಂಗ್ರೆಸ್‌ನ ಒಬ್ಬ ಹಿಂದುಳಿದ ಸಮುದಾಯದ ನಾಯಕ” ಎಂದು ತಿಳಿಸಿದರು.
“ಕರ್ನಾಟಕವೇ ಭಾರತ ದೇಶ ಅಲ್ಲ. ಐದು ವರ್ಷ ಗೆದ್ದವರು ಮತ್ತೆ ಐದು ವರ್ಷ ಅವರ ಸರ್ಕಾರ ಬರಲೇ ಇಲ್ಲ. ಕಾಂಗ್ರೆಸ್‌ಗೆ ರಾಜ್ಯದಲ್ಲಿ ಭದ್ರ ಕೋಟೆ ಇಲ್ಲ ಎಂಬುದಕ್ಕೆ ಇದು ಉದಾಹರಣೆ. 300 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತಳಹದಿಯೇ ಸಿಕ್ಕಿಲ್ಲ. ಕರ್ನಾಟಕ ಒಂದೇ ಭಾರತ ದೇಶ ಅಲ್ಲ, ನೀವು ಅಧಿಕಾರದಲ್ಲಿ ಇರುವುದು ಕೇವಲ ನಾಲ್ಕು ರಾಜ್ಯಗಳಲ್ಲಿ ಅಷ್ಟೇ. ಅದರಲ್ಲಿಯೂ ಎರಡು ರಾಜ್ಯಗಳಲ್ಲಿ ಹೊಂದಾಣಿಕೆಯಲ್ಲಿ ಇದ್ದೀರಿ” ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
“ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಅಧಿಕಾರಕ್ಕೆ ತರುವುದಷ್ಟೇ ನಮ್ಮ ಗುರಿ. ಅದೇ ನಮ್ಮ ಹೋರಾಟ. ನಾವು ಒಟ್ಟಾಗಿ ಒಗ್ಗಟ್ಟಿನಿಂದ ಇದ್ದೇವೆ. ರಾಜ್ಯದಲ್ಲಿ ಜೆಡಿಎಸ್ ಗೆ ಸೋಲು ಆಗಿರಬಹುದು. ಅದೇನು ದೊಡ್ಡದಲ್ಲ. ರೈತ ಪರವಾದ ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಈಗಲೂ ಮಹತ್ವ ಇದೆ. ಮಹಿಳೆಯರು, ಯುವಕರು, ರೈತರ ಬೆಂಬಲ ಇದ್ದೇ ಇದೆ. ಕುಮಾರಸ್ವಾಮಿ ನಾಯಕತ್ವದಲ್ಲಿಯೇ ಪಕ್ಷವನ್ನು ಮತ್ತೆ ಕಟ್ಟುತ್ತೇವೆ. ಜೆಡಿಎಸ್ ಸೋತಿರಬಹುದು ಸತ್ತಿಲ್ಲ, ಸಾಯುವುದೂ ಇಲ್ಲ” ಎಂದು ವಿಶ್ವಾಸವ್ಯಕ್ತಪಡಿಸಿದರು.
“ಬಿಜೆಪಿ ಜೊತೆಗೆ ಮೈತ್ರಿ ಹೋಗುವಂತಹ ವಿಚಾರ ರಾಷ್ಟ್ರೀಯ ಅಧ್ಯಕ್ಷರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ‘ನಮ್ಮ ಗುರಿ ಒಂದೆ ನಾನು ಕಟ್ಟಿರುವ ಈ ಪಕ್ಷವನ್ನು ಸ್ವತಂತ್ರವಾಗಿ ಕಟ್ಟಬೇಕು. ಅದಕ್ಕಾಗಿ ಸೈನ್ಯ ಸಿದ್ಧ ಆಗಬೇಕು. ನನಗೆ ನಂಬಿಕೆ ಇದೆ, ರಾಜ್ಯದ ಜನ ನಮ್ಮನ್ನು ಕೈ ಬಿಡುವುದಿಲ್ಲ. ಸಮಾಜದ ಎಲ್ಲ ವರ್ಗ, ಸಮುದಾಯಗಳಿಗೂ ನಾನು ಒಳ್ಳೆಯದು ಮಾಡಿದ್ದೇನೆ. ಯಾವುದೇ ಒಂದು ಜಾತಿಗೆ ಮಾಡಿಲ್ಲ’ ಎಂದು ವರಿಷ್ಠರು ಹೇಳಿದ್ದರು. ಸರ್ವಾ ಜನಾಂಗದ ಶಾಂತಿಯ ತೋಟವನ್ನು ಮಾಡಿರುವವರು ದೇವೇಗೌಡರು ಮಾತ್ರ. ಆದರೆ, ಈಗ ಕಾಂಗ್ರೆಸ್ ಒಂದೊಂದೆ ಸಮುದಾಯವನ್ನು ಓಲೈಕೆ ಮಾಡುವ ಮೂಲಕ ಸಮುದಾಯಗಳು ಧಂಗೆ ಏಳುವಂತೆ ಮಾಡುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಜೆಡಿಎಸ್ ಅಳಿಸಿಹಾಕಲು ಯಾರಿಂದಲೂ ಸಾಧ್ಯವಿಲ್ಲ: ಎಚ್ ಡಿ ದೇವೇಗೌಡ ತಿರುಗೇಟು
“ಜೆಡಿಎಸ್ ಪಕ್ಷದಲ್ಲಿ ದೇವೇಗೌಡರಿಗೆ ವಯಸ್ಸಾಯಿತು. ಅವರು ಇಲ್ಲದಿದ್ದರೆ ಈ ಪಕ್ಷ ಉಳಿಯುವುದಿಲ್ಲ. ಅವರಿಗೆ ಓಡಾಡಲು ಆಗುವುದಿಲ್ಲ. ಬಹಳ ಕಷ್ಟ ಇದೆ ಎಂದು ಎಲ್ಲರೂ ಭಾವಿಸಿದ್ದಾರೆ. ದೇವೇಗೌಡರು ದೆಹಲಿಯಲ್ಲಿ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಂದರ್ಭದ ಭಾಷಣದಲ್ಲಿ ‘ನಾನು ಮತ್ತೆ ಫಿನಿಕ್ಸ್ ರೀತಿ ಮೇಲೆ ಬರುತ್ತೇನೆ’ ಎಂದು ಮಾತಾಡಿದ ಭಾಷಣ ದಾಖಲೆಯನ್ನು ಸೇರಿದೆ. ನನ್ನ ಪಕ್ಷ ನಾನು ಬದುಕಿರುವಾಗಲೇ ಮುಳುಗಿ ಹೋಯಿತು ಎಂದು ಹೇಳುತ್ತಿದ್ದಾರಲ್ಲಾ. ಎಂದು ಯೋಚಿಸಿ ಮತ್ತೊಮ್ಮೆ ಸಿಡಿದೆದ್ದು ಬಂದು ನಮ್ಮೆಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮುಖಂಡರ ಸಭೆ ಕರೆದು ಶಾಸಕಾಂಗ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಕೇಳಿದರು. ದೇವೇಗೌಡರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧ ಎಂದು ಏಕ ಮನಸ್ಸಿನಿಂದ ಎಲ್ಲರೂ ಒಪ್ಪಿ ತೀರ್ಮಾನ ಮಾಡಿದೆವು” ಎಂದು ತಿಳಿಸಿದರು.