ವಿಜಯನಗರ ಜಿಲ್ಲೆಯ ಐತಿಹಾಸಿಕ ತಾಣ ಹಂಪಿಯಲ್ಲಿ ಜುಲೈ 9 ರಿಂದ 16ರವರೆಗೆ ಜಿ20 ಶೃಂಗಸಭೆ (ಸಾಂಸ್ಕೃತಿಕ ಕಾರ್ಯಕಾರಿ ಸಮಿತಿ ಮತ್ತು ಶೆರ್ಪಾ ಸಭೆ) ನಡೆಯಲಿದೆ. ಶೃಂಗಸಭೆಗಾಗಿ ರಾಜ್ಯ ಸರ್ಕಾರವು 47 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸಾಧ್ಯತೆ ಇದೆ.
ಶುಕ್ರವಾರ ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಎಚ್‌ಕೆ ಪಾಟೀಲ್ ಅವರು ಸಭೆಯ ಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಒಟ್ಟಾಗಿ ಸುಮಾರು 46.7 ಕೋಟಿ ರೂ. ಖರ್ಚು ಮಾಡಲಿದ್ದು, ರಸ್ತೆಗಳ ದುರಸ್ತಿ, ಇಂಟರ್ನೆಟ್ ಸಂಪರ್ಕ, ಚರಂಡಿ ವ್ಯವಸ್ಥೆ, ಪೊಲೀಸ್ ಔಟ್‌ಪೋಸ್ಟ್, ವಾಹನ ವ್ಯವಸ್ಥೆಗೆ ಹೆಚ್ಚು ಖರ್ಚಾಗುತ್ತದೆ ಎಂದು ಹೇಳಲಾಗಿದೆ.
ಇದಲ್ಲದೇ, ಹಂಪಿಯಲ್ಲಿ ಮುಂದಿನ ಎಂಟು ತಿಂಗಳವರೆಗೆ ಮಾಸಿಕ 2 ಕೋಟಿ ರೂಪಾಯಿ ವೆಚ್ಚದಲ್ಲಿ ಕಣ್ಗಾವಲು ಕ್ಯಾಮೆರಾಗಳು ಮತ್ತು ಇತರ ರಸ್ತೆ ಸುರಕ್ಷತಾ ಸಾಧನಗಳನ್ನು ಅಳವಡಿಸಲು ಗೃಹ ಇಲಾಖೆ ಮುಂದಾಗಿದೆ. ಆದರೆ, ಇಲಾಖೆಯ ಸಂಪೂರ್ಣ ಪ್ರಸ್ತಾವನೆಯನ್ನು ಅಂಗೀಕರಿಸಲಾಗುವುದಿಲ್ಲ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
47 ಕೋಟಿ ರೂ. ವೆಚ್ಚವು ಜಿ20 ಶೃಂಗಸಭೆಗಾಗಿ ಮಾತ್ರವಲ್ಲ, ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ವ್ಯಯಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ, ಸಭೆಗಳಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ‘ಹಂಪಿ ವೀಕ್ಷಣೆ’ ಕಾರ್ಯಕ್ರಮವನ್ನು ರಾಜ್ಯ ಪ್ರಸ್ತಾಪಿಸಿದೆ. ಇವುಗಳಲ್ಲಿ ಎರಡು ದಿನಗಳ ಕಾಲ ಸ್ಮಾರಕಗಳ ವೀಕ್ಷಣೆ, ಯೋಗ ಕಾರ್ಯಕ್ರಮ, ತುಂಗಭದ್ರಾ ನದಿ ದಡದಲ್ಲಿ ಚಾರಣ ನಡೆಯಲು ಸರ್ಕಾರ ಯೋಜಿಸಿದೆ.