ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸ್ಥಗಿತಗೊಂಡಿತ್ತು. ಆ ಕಾರ್ಯಕ್ರಮವನ್ನು ಜನವರಿ 21ರಂದು ಮರು ಆರಂಭಿಸುವಾಗಿ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯವಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
‘1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ ಬೆಳಗಾವಿಯಲ್ಲಿ ಡಿಸೆಂಬರ್ 25 ಮತ್ತು 26ರಂದು ‘ಶತಮಾನೋತ್ಸ’ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಒಂದು ದಿನ ನಡೆದಿದ್ದ ಕಾರ್ಯಕ್ರಮ, ಮನಮೋಹನ್ ಸಿಂಗ್ ಅವರ ಮರಣದಿಂದಾಗಿ ರದ್ದಾಗಿತ್ತು. ಇದೀಗ, ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡುವುದಾಗಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರಿ, “ಜನವರಿ 21ರಂದು ಕಾರ್ಯಕ್ರಮವನ್ನು ಮತ್ತೆ ನಡೆಸಲಾಗುತ್ತಿದೆ. ಬೆಳಗಾವಿಯಲ್ಲಿ ಬೃಹತ್ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮವೂ ಜರುಗಲಿದೆ” ಎಂದು ತಿಳಿಸಿದ್ದಾರೆ.
“ಗಾಂಧಿ ಭಾರತ ಅಭಿಯಾನದಡಿ ‘ಜೈ ಬಾವು, ಜೈ ಭೀಮ್, ಜೈ ಸಂವಿಧಾನ್’ ಕಾರ್ಯಕ್ರಮವನ್ನು ರಾಷ್ಟ್ರೀಯ ಕಾಂಗ್ರೆಸ್ ಘೋಷಿಸಿದೆ. ಈ ಕಾರ್ಯಕ್ರಮಕ್ಕೂ ಬೆಳಗಾವಿಯ ಕಾರ್ಯಕ್ರಮದಲ್ಲಿ ಚಾಲನೆ ದೊರೆಯಲಿದೆ. ಈ ಬಗ್ಗೆ ಎಲ್ಲ ಕಾಂಗ್ರೆಸ್ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಾಹಿತಿ ನೀಡಲಾಗಿದೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?
“ಗಾಂಧಿ ಅವರ ಹೋರಾಟ, ಚರಿತ್ರೆಗಳ ಬಗ್ಗೆ ನಾವು ಅಧ್ಯಯನ ನಡೆಸಿದ್ದೇವೆ. ಗಾಂಧಿ ಹೋರಾಟ ಮತ್ತು ಬೆಳಗಾವಿ ಅಧಿವೇಶದ ಕುರಿತಾದ ಪುಸ್ತಕವನ್ನು ಹೊರತರಲು ಕಾಂಗ್ರೆಸ್ ಮುಂದಾಗಿದೆ. ಅದಕ್ಕಾಗಿ ಅಗತ್ಯವಿರುವ ಎಲ್ಲ ಮಾಹಿತಿಗಳನ್ನ ಸಂಗ್ರಹಿಸಲಾಗಿದ್ದು, ಕಾರ್ಯಕ್ರಮದಲ್ಲಿ ಪುಸ್ತಕವನ್ನೂ ಬಿಡುಗಡೆ ಮಾಡಲಾಗುತ್ತದೆ” ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಹೆಚ್ ಮುನಿಯಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಕೇಂದ್ರ ಮಾಜಿ ಸಚಿವ ಕೆ ರೆಹಮಾನ್ ಖಾನ್ ಇದ್ದರು.