- ಸಂಘ ಪರಿವಾರದ ಕಾರ್ಯಕರ್ತರಿಂದ ಕೃತ್ಯ
- ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆ ಆರೋಪದಡಿ ದೂರು
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಮಸೀದಿಗೆ ಮಂಗಳಾರತಿ ಮಾಡಿದ್ದು, ಅವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಂಗಾವತಿ ನಗರ ಠಾಣೆ ಪೊಲೀಸರು, ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆ ಆರೋಪದ ಅಡಿ ಸ್ವಯಂಪ್ರೇರಿತ ದೂರು ದಾಲಿಸಿಕೊಂಡಿದ್ದಾರೆ. ಶ್ರೀಕಾಂತ್ ಹೊಸಕೇರಿ, ಯಮನೂರು ರಾಠೋಡ್, ಕುಮಾರ್ ಹೂಗಾರ, ಚನ್ನಬಸವ ಹೂಗಾರ ಹಾಗೂ ಸಂಗಮೇಶ ಅಯೋಧ್ಯಾ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.
2023ರ ಸೆಪ್ಟೆಂಬರ್ 28 ರಂದು ಗಂಗಾವತಿ ನಗರದಲ್ಲಿ ಹಿಂದೂ ಮಹಾ ಮಂಡಳಿಯ ಗಣೇಶ ವಿಸರ್ಜನಾ ಮೆರವಣಿಗೆ ನಡೆದಿತ್ತು. ಮೆರವಣಿಗೆಯು ಸಾಯಂಕಾಲ 4 ಗಂಟೆಗೆ ಗಂಗಾವತಿ ಬಸ್ ನಿಲ್ದಾಣದಿಂದ ಪ್ರಾರಂಭವಾಗಿದ್ದು, ಕೋರ್ಟಿ ಸರ್ಕಲ್, ಪಂಪಾನಗರ ಸರ್ಕಲ್, ಬಸವಣ್ಣ ಸರ್ಕಲ್ ಮೂಲಕ ಸಾಗಿ ರಾತ್ರಿ 9.45ರ ಸುಮಾರಿಗೆ ಗಾಂಧಿ ವೃತ್ತದ ಬಳಿ ಇದ್ದ ದೊಡ್ಡ ಜಾಮೀಯಾ ಮಸೀದಿ ಬಳಿ ಮೆರವಣಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ ಗಲಾಟೆ | ಪರಿಸ್ಥಿತಿ ನಿಯಂತ್ರಣದಲ್ಲಿದೆ: ಸಚಿವ ಪರಮೇಶ್ವರ್
ಈ ಸಂದರ್ಭದಲ್ಲಿ ಕಿಡಿಗೇಡಿಗಳು ಗಲಭೆಯನ್ನು ಸೃಷ್ಟಿ ಮಾಡುವ ಉದ್ದೇಶದಿಂದಲೇ ಜೈ ಶ್ರೀರಾಮ, ಜೈ ಶ್ರೀರಾಮ, ಭೋಲೋ ಭಾರತ ಮಾತಾಕಿ ಜೈ, ಗವಿ ಗಂಗಾಧರೇಶ್ವರ ಮಹಾರಾಜಕಿ ಜೈ ಅಂತಾ ಘೋಷಣೆ ಕೂಗಿ, ಮಂಗಳಾರತಿ ಮಾಡಿದ್ದಾರೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಯಮನೂರ ರಾಠೋಡ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಮಸೀದಿಗೆ ಮಂಗಳಾರತಿ ಮಾಡಿರುವ ವಿಡಿಯೋವನ್ನು ಹಂಚಿಕೊಂಡು ಧರ್ಮೋ ರಕ್ಷತಿ ರಕ್ಷಿತಃ ಅಂತ ಕ್ಯಾಪ್ಷನ್ ಬರೆದು ವೈರಲ್ ಮಾಡಿದ್ದಾರೆ.