ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಡೆದಿರುವ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಮತ್ತು ಬಿ ಎಸ್ ಯಡಿಯೂರಪ್ಪ ಶಾಮೀಲಾಗಿದ್ದಾರೆ. ಒಂಭತ್ತು ವರ್ಷಗಳಿಂದ ಡಿನೋಟಿಫೈ ಹಗರಣ ಲೋಕಾಯುಕ್ತದಲ್ಲಿ ಯಾಕೆ ಮೂಲೆಗುಂಪಾಗಿದೆ? ಇದರ ಹಿಂದೆ ಯಾರ ಒತ್ತಡವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿ ಎಸ್ ಯಡಿಯೂರಪ್ಪ ಅವರು ಜಂಟಿಯಾಗಿ ನಡೆಸಿದ ಹಗರಣ ಬಗ್ಗೆ ಈ ದಿನ.ಕಾಮ್ ದಾಖಲೆ ಸಮೇತ ವರದಿ ಮಾಡಿದ್ದನ್ನು ಉಲ್ಲೇಖಿಸಿ ಸಚಿವರು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
“ಬಿಡಿಎಗೆ ಸೇರಿದ ನೂರಾರು ಕೋಟಿ ಬೆಲೆಬಾಳುವ 55,000 ಚದರ ಅಡಿ ಭೂಮಿಯ ಡಿನೋಟಿಫೈ. ಒಂಭತ್ತು ವರ್ಷಗಳ ಹಿಂದೆಯೇ ಲೋಕಾಯುಕ್ತದಲ್ಲಿ ದಾಖಲಾದ ಈ ಪ್ರಕರಣದಲ್ಲಿ ಮೊದಲ ಆರೋಪಿ ಯಡಿಯೂರಪ್ಪ. ಎರಡನೇ ಆರೋಪಿ ಕುಮಾರಸ್ವಾಮಿ. ನೂರಾರು ಕೋಟಿ ಮೌಲ್ಯದ ಜಮೀನು ಡಿನೋಟಿಫೈ ಮಾಡುವಲ್ಲಿ ಯಡಿಯೂರಪ್ಪ ಹಿಂದೆ ಇದ್ದದ್ದು ಬಿಜೆಪಿ ರಾಜ್ಯಾಧ್ಯಕ್ಷ, ಭ್ರಷ್ಟಾಚಾರದ ಪಿತಾಮಹ ವಿಜಯೇಂದ್ರ ಅವರೇ ಅಲ್ಲವೇ? ಪ್ರಕರಣದಲ್ಲಿ ಎರಡನೇ ಆರೋಪಿ ಆಗಿರುವ ಕುಮಾರಸ್ವಾಮಿ ರಾಜೀನಾಮೆ ನೀಡುವುದು ಯಾವಾಗ” ಎಂದು ಕೇಳಿದ್ದಾರೆ.
“ಮುಡಾ ಹಗರಣದಲ್ಲಿ ಬೀದಿಗಿಳಿದು ಹೋರಾಟ ಮಾಡಿದವರು, ಪಾದಯಾತ್ರೆ ಮಾಡಿದವರು ಈ ಪ್ರಕರಣದ ಬಗ್ಗೆ ಏನು ಹೇಳುತ್ತಾರೆ? ಈ ಬಗ್ಗೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರು ರಾಜ್ಯದ ಜನತೆಗೆ ಉತ್ತರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಬಿಡಿಎಗೆ ಸೇರಿದ ಬೆಂಗಳೂರು ಮಹಾನಗರದ ನಟ್ಟನಡುವೆ ಸುಮಾರು 55,000 ಚದರ ಅಡಿ ಭೂಮಿಯನ್ನು ಡಿನೋಟಿಫೈ ಮಾಡಿ ಗುಳುಂ ಮಾಡಲಾಗಿದೆ. ಆ ಭೂಮಿಯ ಇವತ್ತಿನ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ ರೂ ಆಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಪ್ರಧಾನಿಯಾಗಿ ನೂರು ದಿನ: ಹಿನ್ನಡೆಯೋ, ಮುನ್ನಡೆಯೋ?
ಈ ಹಗರಣದ ಬಗ್ಗೆ 9 ವರ್ಷಗಳ ಹಿಂದೆ ಲೋಕಾಯುಕ್ತದಲ್ಲಿ ದಾಖಲಾದ ಎಫ್‌ಐಆರ್‌ನ ಆರೋಪಿ ನಂ.1 ಯಡಿಯೂರಪ್ಪ, ನಂ. 2 ಕುಮಾರಸ್ವಾಮಿ. ಈ ಕೇಸು ಸದ್ಯ ಯಾವ ಹಂತದಲ್ಲಿದೆ? ರೆಡ್ ಹ್ಯಾಂಡ್ ದಾಖಲೆಗಳಿದ್ದಾಗ್ಯೂ ಲೋಕಾಯುಕ್ತ ಸಂಸ್ಥೆ ಮಾಡಿದ್ದೇನು? ಅಂತಿಮವಾಗಿ ಈ ಭೂಮಿ ಯಾರ ಕೈಸೇರಿದೆ? ಸಂಪೂರ್ಣ ದಾಖಲೆಗಳೊಡನೆ ಈ ದಿನ.ಕಾಮ್ ವಿಡಿಯೋ ವರದಿ ಪ್ರಕಟಿಸಿದೆ. ಎಲ್ಲ ಸ್ಫೋಟಕ ಮಾಹಿತಿಗಳಿಗಾಗಿ ಕೆಳಗಿರುವ ವಿಡಿಯೋ ನೋಡಿ…