ಕಳೆದ ವರ್ಷ ನಡೆದ ಮಹಾರಾಷ್ಟ್ರದ ಚುನಾವಣೆ ಹಲವು ಕಾರಣಗಳಿಂದ ಇಡೀ ದೇಶದ ಗಮನ ಸೆಳೆದಿತ್ತು. ವಿಧಾನಸಭಾ ಚುನಾವಣಾ ಫಲಿತಾಂಶ ಆಶ್ಚರ್ಯ ಉಂಟು ಮಾಡಿದ್ದರೆ, ಆಡಳಿತ ವಿರೋಧಿ ಅಲೆ ಇದ್ದಾಗಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಹಲವರಲ್ಲಿ ಗಂಭೀರ ಪ್ರಶ್ನೆ ಹುಟ್ಟುಹಾಕಿತ್ತು. ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್, ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಆರೋಪಿಸುತ್ತಲೇ ಬಂದಿದ್ದವು. ಇದೀಗ, ಆ ಆರೋಪಕ್ಕೆ ದೊಡ್ಡ ತಿರುವು ಸಿಕ್ಕಿದ್ದು, ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿ ಕೇವಲ ಐದು ತಿಂಗಳ ಅವಧಿಯಲ್ಲಿ 39 ಲಕ್ಷಕ್ಕೂ ಹೆಚ್ಚು ಮತದಾರರು ಹೊಸದಾಗಿ ಸೇರಿಕೊಂಡಿದ್ದಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಶುಕ್ರವಾರ, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿಯ ಶರದ್ ಪವಾರ್ ಬಣ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್‌ಗಾಂಧಿಯವರು ಮಹಾರಾಷ್ಟ್ರ ಚುನಾವಣೆಯಲ್ಲಿ ನಡೆದ ಭಾರೀ ಅಕ್ರಮದ ಬಗ್ಗೆ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.
2019ರ ವಿಧಾನಸಭೆಯಿಂದ 2024ರಲ್ಲಿ ನಡೆದ ಲೋಕಸಭೆ ಚುನಾವಣೆ ಈ ಐದು ವರ್ಷಗಳ ಅಂತರದಲ್ಲಿ ಮಹಾರಾಷ್ಟ್ರದಲ್ಲಿ 32 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಆದರೆ, 2024 ಲೋಕಸಭಾ ಚುನಾವಣೆ ನಂತರ ಐದು ತಿಂಗಳಲ್ಲಿ 39 ಲಕ್ಷ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಸೇರಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಸೇರ್ಪಡೆಯಾದ ಒಟ್ಟು ಮತದಾರರ ಸಂಖ್ಯೆ ಹಿಮಾಚಲ ಪ್ರದೇಶದಂತಹ ರಾಜ್ಯದ ಜನಸಂಖ್ಯೆಗೆ ಸಮನಾಗಿದೆ.
ಮಹರಾಷ್ಟ್ರದಲ್ಲಿ ಇದ್ದಕ್ಕಿಂದ್ದಂತೆ ಇಷ್ಟೊಂದು ಸಂಖ್ಯೆಯಲ್ಲಿ ಹೊಸದಾಗಿ ಮತದಾರರು ಸೇರ್ಪಡೆಯಾಗಿರುವ ಬಗ್ಗೆ ಆತಂಕ ಮತ್ತು ಆಶ್ಚರ್ಯ ವ್ಯಕ್ತ ಪಡಿಸಿರುವ ಅವರು ಪರಿಷ್ಕೃತ ಮತದಾರರ ಪಟ್ಟಿಯನ್ನು ಒದಗಿಸುವಂತೆ ಚುನಾವಣಾ ಆಯೋಗವನ್ನು ಕೇಳಿದ್ದಾರೆ.
ರಾಹುಲ್ ಗಾಂಧಿ ಆರೋಪಗಳಿಗೆ ಚುನಾವಣಾ ಆಯೋಗವು ಪ್ರತಿಕ್ರಿಯೆ ನೀಡಿದ್ದು, ಸಂಪೂರ್ಣ ವಾಸ್ತವಾಂಶಗಳೊಂದಿಗೆ ಲಿಖಿತವಾಗಿ ಈ ಆರೋಪಕ್ಕೆ ಪ್ರತಿಕ್ರಿಯಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಆರೋಪ ಮಾಡಿದ ಕೂಡಲೇ ಚುನಾವಣಾ ಆಯೋಗ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ರಾಜಕೀಯ ಪಕ್ಷಗಳನ್ನು ಆದ್ಯತೆಯ ಪಾಲುದಾರರು ಎಂದು ಚುನಾವಣಾ ಆಯೋಗ ಪರಿಗಣಿಸುತ್ತದೆ. ಸಹಜವಾಗಿ ಮತದಾರರು ಕೂಡ ಪ್ರಧಾನರಾಗಿದ್ದಾರೆ ಮತ್ತು ರಾಜಕೀಯ ಪಕ್ಷಗಳಿಂದ ಬರುವ ಅಭಿಪ್ರಾಯಗಳು, ಸಲಹೆಗಳು ಮತ್ತು ಪ್ರಶ್ನೆಗಳನ್ನು ಆಯೋಗ ಗೌರವಿಸುತ್ತದೆ. ‘ದೇಶದಾದ್ಯಂತ ಏಕರೂಪವಾಗಿ ಅಳವಡಿಸಿಕೊಂಡಿರುವ ಸಂಪೂರ್ಣ ವಾಸ್ತವಿಕ ಮತ್ತು ಕಾರ್ಯವಿಧಾನ ಸಂಪೂರ್ಣ ಮಾಹಿತಿಯೊಂದಿಗೆ ಆಯೋಗವು ಲಿಖಿತವಾಗಿ ಪ್ರತಿಕ್ರಿಯಿಸುತ್ತದೆ’ ಎಂದು ತಿಳಿಸಿದೆ.