ಹಿಂದು ಭಾವನೆಗೆ ಶಿಕ್ಷಕಿ ಧಕ್ಕೆ ತಂದಿಲ್ಲ; ಬಿಜೆಪಿ ಶಾಸಕನ ಒತ್ತಡದಿಂದ ಅಮಾನತು: ಜೆರೋಸಾ ಶಾಲೆ ಮುಖ್ಯಶಿಕ್ಷಕಿ

Date:

Advertisements

ಹಿಂದು ಧಾರ್ಮಿಕ ಭಾವನೆಗೆ ಶಿಕ್ಷಕಿ ಪ್ರಭಾ ಅವರು ಧಕ್ಕೆ ತಂದಿಲ್ಲ. ಆದರೆ, ಅವರನ್ನು ಅಮಾನತು ಮಾಡುವಂತೆ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಒತ್ತಡ ಹಾಕಿದರು ಎಂದು ಮಂಗಳೂರಿನ ಸೈಂಟ್ ಜೆರೋಸಾ ಶಾಲೆಯ ಮುಖ್ಯಶಿಕ್ಷಕಿ ಅನಿತಾ ಹೇಳಿದ್ದಾರೆ.

ಸೈಂಟ್ ಜೆರೋಸಾ ಶಾಲೆಯಲ್ಲಿ ಫೆಬ್ರವರಿ 8 ಪಾಠ ಮಾಡುವಾಗ ಶಿಕ್ಷಕಿ ಹಿಂದು ಭಾವನೆಗೆ ಧಕ್ಕೆ ತಂದಿದ್ದಾರೆಂದು ವಿವಾದ ಎದ್ದಿತ್ತು. ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯಶಿಕ್ಷಕಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

“ರವೀಂದ್ರನಾಥ ಠಾಗೋರ್ ರಚಿಸಿದ ‘ವರ್ಕ್‌ ಈಸ್‌ ವರ್ಷಿಪ್’ ಕವನವನ್ನು ಬೋಧಿಸುವಾಗ ಸಿ. ಪ್ರಭಾ ಅವರು ಹಿಂದೂ ಧರ್ಮ ಮತ್ತು ಪ್ರಧಾನಿ ವಿರುದ್ಧ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಶಿಕ್ಷಕಿ ಹಿಂದು ಭಾವನೆಗಳಿಗೆ ಧಕ್ಕೆ ತಂದಿಲ್ಲ” ಎಂದು ಹೇಳಿದ್ದಾರೆ.

Advertisements

“ಕವಿತೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವಾಗ ಶಿಕ್ಷಕಿ, ‘ದೇವಾಲಯಗಳು, ಚರ್ಚುಗಳು ಮತ್ತು ಮಸೀದಿಗಳು ಕೇವಲ ಕಟ್ಟಡಗಳು. ದೇವರು ಮಾನವ ಹೃದಯದಲ್ಲಿ ನೆಲೆಸಿದ್ದಾನೆ. ಆದ್ದರಿಂದ ದೇವರ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲಬಾರದು. ನಾವು ಕೆಲಸ ಮತ್ತು ಮನುಷ್ಯರನ್ನು ಗೌರವಿಸಬೇಕು ಮತ್ತು ಅವರಲ್ಲಿ ದೇವರನ್ನು ಕಾಣಬೇಕು. ದೇವರು ರಚನೆಗಳಲ್ಲಿ ಅಸ್ತಿತ್ವದಲ್ಲಿಲ್ಲ. ಆದರೆ ಮಾನವ ಹೃದಯದಲ್ಲಿ ಮತ್ತು ನಾವೆಲ್ಲರೂ ದೇವರ ದೇವಾಲಯಗಳು’ ಎಂದು ಬೋಧಿಸಿದ್ದರು. ಇದರಲ್ಲಿ, ಶಿಕ್ಷಕಿ ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಮಾತನ್ನಾಡಿಲ್ಲ. ಕವಿತೆಯ ಅರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ್ದಾರೆ” ಎಂದು ಹೇಳಿದ್ದಾರೆ.

“ಆಡಿಯೋ ಸಂದೇಶದಲ್ಲಿ ಅನಾಮಧೇಯ ಮಹಿಳೆ ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ, ಶಿಕ್ಷಕಿ ಪ್ರಭಾ ಅವರು ಕವಿತೆಯನ್ನು ವಿವರಿಸುವಾಗ ಹಿಂದು ಅಥವಾ ಯಾವುದೇ ಇತರ ಧರ್ಮದ ವಿರುದ್ಧ ಅಥವಾ ಪ್ರಧಾನಿಯ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿಲ್ಲ. ಶಾಲಾ ಆಡಳಿತ ಮಂಡಳಿಯು ಜಿಲ್ಲಾಡಳಿತವನ್ನು ಸಂಪರ್ಕಿಸಿ ಆಡಿಯೋ ಸಂದೇಶವು ಸತ್ಯಕ್ಕೆ ದೂರವಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ರಕ್ಷಣೆ ಕೋರಿದೆ. ವೈರಲ್ ಆಗಿರುವ ಮಹಿಳೆಯ ಆಡಿಯೋ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

“ಫೆಬ್ರವರಿ 12ರಂದು ಶಿಕ್ಷಣ ಇಲಾಖೆಯಿಂದ, ಬಿಇಒ ಕಚೇರಿಯಿಂದ ವಿಷಯ ಪರಿವೀಕ್ಷಕರು, ಡಿಡಿಪಿಐ ಕಚೇರಿಯ ಸಮನ್ವಯಾಧಿಕಾರಿ, ಬಿಇಒ, ಇಸಿಒ ಮತ್ತು ಸಿಆರ್‌ಪಿ ಶಾಲೆಗೆ ಭೇಟಿ ನೀಡಿದ್ದು, ಅವರ ಕೋರಿಕೆಯ ಮೇರೆಗೆ ಸತ್ಯವನ್ನು ವಿವರಿಸಲಾಗಿದೆ. ಇದಾದ ಬಳಿಕ ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಅವರು ಹಿಂದು ಸಂಘಟನೆಗಳೊಂದಿಗೆ ಬಂದು ಶಾಲೆಯ ವಿರುದ್ಧ ಘೋಷಣೆ ಕೂಗಿದರು. ಆಡಳಿತವು ಅವರನ್ನು ಗುರುತಿಸಿ, ಅವರಿಗೆ ಅರ್ಹ ಗೌರವ ನೀಡಿ ಶಾಲೆಯೊಳಗೆ ಆಹ್ವಾನಿಸಿತು. ಆದರೆ, ಅವರು ಒಳಗೆ ಬರಲು ನಿರಾಕರಿಸಿದರು. ಅವರು ಶಾಲೆ ಮತ್ತು ಆಡಳಿತದ ವಿರುದ್ಧ ಪ್ರತಿಭಟಿಸಿದರು. ಸರ್ವಜನಾಂಗದವರನ್ನು ಗೌರವಿಸಬೇಕಿದ್ದ ಶಾಸಕರು ಶಾಲೆಯ ಮಕ್ಕಳನ್ನೇ ಶಾಲೆ ವಿರುದ್ಧ ಘೋಷಣೆ ಕೂಗಲು ಪ್ರಚೋದಿಸಿದರು. ಅವರ ವರ್ತನೆ ನೋವು ತಂದಿದೆ” ಎಂದು ಮುಖ್ಯಶಿಕ್ಷಕಿ ವಿವರಿಸಿದ್ದಾರೆ.

“ಶಾಲೆಯ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಶಾಸಕರನ್ನು ಭೇಟಿ ಮಾಡುವಂತೆ ಬಿಇಒ ಹಾಗೂ ಇತರ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ ಮೇರೆಗೆ ಬಳಿಕ ನಾನು ಅವರನ್ನು ಭೇಟಿ ಮಾಡಿದೆ. ಅವರು ಶಿಕ್ಷಕಿಯನ್ನು ತತ್‌ಕ್ಷಣ ವಜಾಗೊಳಿಸುವಂತೆ ನನಗೆ ಒತ್ತಡ ಹಾಕಿದರು. ಅಮಾನತು ಮಾಡದಿದ್ದರೆ, ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಬೆದರಿಕೆ ಹಾಕಿದರು. ಶಿಕ್ಷಣ ಸಂಸ್ಥೆಯ ನಿಯಮಗಳ ಪ್ರಕಾರ ವಿಚಾರಣೆಯಿಲ್ಲದೆ ಶಿಕ್ಷಕರನ್ನು ಅಮಾನತು ಮಾಡಲು ಸಾಧ್ಯವಿಲ್ಲವೆಂದು ತಿಳಿಸದರೂ, ಅವರು ಕೇಳಲಿಲ್ಲ. ಬೇರೆ ದಾರಿಯಿಲ್ಲದೆ ಮತ್ತು ಕಾನೂನು-ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಸೇರಿದ್ದ ಗುಂಪನ್ನು ಚದುರಿಸಲು, ಶಿಕ್ಷಕಿ ಪ್ರಭಾ ಅವರನ್ನು ಅನಿವಾರ್ಯವಾಗಿ ಅಮಾನತು ಮಾಡಬೇಕಾಯಿತು” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ | ಶಿಕ್ಷಕಿಯಿಂದ ಧರ್ಮ ಅವಹೇಳನ ಪ್ರಕರಣ; ಸತ್ಯಶೋಧನಾ ತನಿಖೆಗೆ ಕಾಂಗ್ರೆಸ್ ಆಗ್ರಹ

“ಶಿಕ್ಷಕಿ ಪ್ರಭಾ ಅವರಿಗೆ ಜೆರೋಸಾ ಶಾಲೆಯಲ್ಲಿ ಐದು ವರ್ಷ ಅನುಭವ ಸೇರಿದಂತೆ 16 ವರ್ಷಗಳ ಬೋಧನಾನುಭವ ಇದೆ. ಅವರ ವಿರುದ್ಧ ಇದುವರೆಗೆ ಯಾವುದೇ ದೂರು ಬಂದಿಲ್ಲ. ಇಡೀ ಪ್ರಕರಣದಲ್ಲಿ ಗಮನಿಸುವ ನಿರ್ಣಾಯಕ ಅಂಶವೆಂದರೆ – ವೈರಲ್ ಆಡಿಯೋದಲ್ಲಿ ಶಾಲೆಯ ಬಗ್ಗೆ ಮಾತನಾಡಿದ ಮಹಿಳೆ ನಿಜವಾಗಿಯೂ ಜೆರೋಸಾ ವಿದ್ಯಾರ್ಥಿಯ ಪೋಷಕರೇ ಎಂಬುದು. ಆಕೆ ಪೋಷಕಿಯಾಗಿಲ್ಲದಿದ್ದರೆ, ಇಂತಹ ಸುಳ್ಳು ಆರೋಪಗಳನ್ನು ಮಾಡುವ ಹಿಂದೆ ಆಕೆಯ ಅಜೆಂಡಾ ಏನು. ಆಕೆ ಪೋಷಕರಾಗಿದ್ದರೆ ಶಾಲೆಯ ಆಡಳಿತ ಮಂಡಳಿಗೆ ಈ ಬಗ್ಗೆ ಲಿಖಿತ ದೂರು ಏಕೆ ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಕನಿಷ್ಠ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಶಾಲೆಯ ಪ್ರತಿಷ್ಠೆಯನ್ನು ಹಾಳುಗೆಡಹಲು ಈ ಘಟನೆ/ಪ್ರತಿಭಟನೆಯನ್ನು ಆಯೋಜಿಸಿದಂತೆ ತೋರುತ್ತದೆ. ನಾವು ಜಾತ್ಯತೀತರಾಗಿದ್ದೇವೆ ಮತ್ತು ಯಾವಾಗಲೂ ಎಲ್ಲಾ ವಿದ್ಯಾರ್ಥಿಗಳನ್ನು ಗೌರವಿಸುತ್ತೇವೆ ಮತ್ತು ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಯಾರನ್ನೂ ತಾರತಮ್ಯ ಮಾಡುವುದಿಲ್ಲ. ಪ್ರತಿ ವರ್ಷ ನಾವು ದೀಪಾವಳಿ, ಕ್ರಿಸ್ಮಸ್ ಮತ್ತು ಈದ್ ಆಚರಿಸುತ್ತೇವೆ.
ಅಹಿತಕರ ಘಟನೆ ನಡೆದಾಗ ಪೊಲೀಸರು ಮಾಧ್ಯಮದವರನ್ನು ಜೆರೋಸಾ ಆವರಣದೊಳಗೆ ಬಿಡಲಿಲ್ಲ ಎಂದು ಹೇಳಲಾಗಿದೆ. ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ” ಎಂದು ಮುಖ್ಯಶಿಕ್ಷಕಿ ಅನಿತಾ ಹೇಳಿದ್ದಾರೆ.

ಶಿಕ್ಷಕಿ ಭೋಧಿಸಿದ್ದ ಕವನ ಹೀಗಿದೆ:
‘ತೊರೆದು ಬಿಡು ಆ ನಿನ್ನ ಮಂತ್ರ ಪಠಣಗಳನ್ನು
ಸುಮ್ಮನೆ ಕುಳಿತುಕೊಳ್ಳಬೇಡ
ದೇವರು ಗುಡಿ ಚರ್ಚು ಮಸೀದಿಗಳಲ್ಲಿ ಇಲ್ಲ
ಕಣ್ಣನ್ನು ತೆರೆದು ನೋಡು, ಇಲ್ಲಿ ಇದ್ದಾನೆ
ನೇಗಿಲ ಯೋಗಿಯೊಳಗೆ ಇದ್ದಾನೆ
ಕಠಿಣ ಪರಿಶ್ರಮಿಯಲ್ಲಿ ಇದ್ದಾನೆ
ಶುದ್ಧತೆಯ ಹೆಸರಲ್ಲಿ ಮೈಗೆ ಸ್ನಾನ ಮಾಡುವವನಲ್ಲಿ ಇಲ್ಲ
ಮೂಢ ಮಡಿವಂತಿಕೆಯಲ್ಲಿ ಇಲ್ಲ
ಮೂಢ ಸಂಪ್ರದಾಯದಲ್ಲಿ ಇಲ್ಲ
ಇಳಿದು ಬಾ ಈ ದೂಳಿನ ಮಣ್ಣಿಗೆ
ಪರಿಶ್ರಮ ಪಟ್ಟು ದುಡಿದು ಕೆಲಸ ಮಾಡಿದರೆ ನೀನು ದೇವರ ಕೃಪೆಗೆ ಪಾತ್ರನಾಗುತ್ತಿ’

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X