- ಹುತಾತ್ಮ ಯೋಧರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ
- ಜುಲೈ 31ಕ್ಕೆ ವಿವಿಧ ಜಿಲ್ಲೆಗಳ ಪ್ರವಾಸ ಮಾಡಿ ಪರಿಶೀಲನೆ
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಚುರುಕಾಗಿ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಶೇ.100 ರಷ್ಟು ಬಿತ್ತನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಹುತಾತ್ಮ ಯೋಧರ ಪ್ರತಿಮೆಗೆ ಬುಧವಾರ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
“ಮಳೆಯಿಂದಾಗಿ ಕೈ ಮೀರಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಕೆ.ಆರ್.ಎಸ್, ಕಬಿನಿ, ಹಾರಂಗಿ, ಹೇಮಾವತಿ, ಆಲಮಟ್ಟಿ, ಸೇರಿದಂತೆ ಎಲ್ಲ ಜಲಾಶಯಗಳಿಗೆ ನೀರು ಬರುತ್ತಿರುವುದು ರೈತರಿಗೆ ಹಾಗೂ ಸರ್ಕಾರಕ್ಕೆ ಸಂತೋಷ ತಂದಿದೆ. ಹಾವೇರಿಯಲ್ಲಿ ಶೇ.87 ಬಿತ್ತನೆಯಾಗಿದೆ” ಎಂದರು.
ಜುಲೈ 31ಕ್ಕೆ ವಿವಿಧ ಜಿಲ್ಲೆಗಳ ಪ್ರವಾಸ
“ಸೋಮವಾರ ಮಂಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಲಿದ್ದು, ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಜನರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸಲಾಗುವುದು. ಸಚಿವ ಕೃಷ್ಣಭೈರೇಗೌಡರು ನಿನ್ನೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ” ಎಂದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ
“ಎಲ್ಲೆಡೆ ಮಳೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಟ್ಯಾಂಕರ್ ನೀರಿನ ಸರಬರಾಜು ಮಾಡಲಾಗುತ್ತಿತ್ತು. ಆದರೆ ಈಗ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ” ಎಂದರು.
ಅಮಾಯಕರ ಮೇಲಿನ ಕೇಸ್ ವಾಪಸ್
“ಡಿ ಜೆ ಹಳ್ಳಿ ಹಾಗೂ ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಅಮಾಯಕರ ಮೇಲಿನ ಕೇಸ್ ಹಿಂಪಡೆಯುವ ಬಗ್ಗೆ ಪ್ರತಿಕ್ರಿಯೆ ನೀಡಿ ಹಿಂದಿನ ಸರ್ಕಾರದ ಅವಧಿಯಲ್ಲಿ ಏಕೆ ಹಿಂಪಡೆಯಲಿಲ್ಲ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಆಮೆಗತಿಯಲ್ಲಿದೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ; ಅಭ್ಯರ್ಥಿಗಳ ಗೋಳು ಕೇಳುವವರಾರು?
ಶಾಸಕರ ಹೆಸರಿನಲ್ಲಿ ನಕಲಿ ಪತ್ರ
“ಶಾಸಕರು ಸಚಿವರ ಮೇಲೆ ದೂರು ನೀಡಿ ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಶಾಸಕ ಬಿ.ಆರ್.ಪಾಟೀಲ್ ಅವರೇ ನಕಲಿ ಪತ್ರ ಎಂದು ಹೇಳಿದ್ದಾರೆ. ಆದರೂ ಪತ್ರಿಕೆಗಳಲ್ಲಿ ಪ್ರಚಾರ ಮಾಡಲಾಗಿದೆ. ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಬರೆದಿದ್ದಾರೆ. ಇಂತಹ ಮಂತ್ರಿ ಎಂದು ಹೆಸರಿಸಿಲ್ಲ” ಎಂದರು.
ಕಾರ್ಗಿಲ್ ಯೋಧರ ಬದುಕು ಯುವಕರಿಗೆ ಸ್ಫೂರ್ತಿ
“ಕಾರ್ಗಿಲ್ ಯುದ್ಧದಲ್ಲಿ ಸುಮಾರು 524 ಯೋಧರು ದುರ್ಗಮ ಸ್ಥಳದಲ್ಲಿ ಹೋರಾಡಿ ದೇಶವನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ತ್ಯಾಗ, ಬಲಿದಾನ ಮಾಡಿದ ಎಲ್ಲರ ಆತ್ಮಕ್ಕೆ ಶಾಂತಿ ಕೋರಿ ಸ್ಮರಿಸುವುದು ನಮ್ಮ ಕರ್ತವ್ಯ. ಅವರ ಜೀವನ ಇಂದಿನ ಯುವಕರಿಗೆ ಸ್ಫೂರ್ತಿ ಹಾಗೂ ಮಾರ್ಗದರ್ಶನ ನೀಡುವಂತಹದ್ದು” ಎಂದರು.