ದೀಪಾವಳಿ ಹಬ್ಬದ ಒಳಗೆ ಕಾಂಗ್ರೆಸ್ ಸರ್ಕಾರ ಬೀಳಲಿದೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದಿನೇ ದಿನೆ ಹೆಚ್ಚುತ್ತಿದೆ. ಒಳಜಗಳದಿಂದನೇ ಸರ್ಕಾರ ಪತನವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಹೇಳಿದರು.
ಹುಬ್ಬಳ್ಳಿ ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, “ಏನೇ ಮುಚ್ವಿಟ್ಟರೂ ಇದು ಭ್ರಷ್ಟಾಚಾರದ ಸರ್ಕಾರ. ಸಿದ್ದರಾಮಯ್ಯರ ವಿರುದ್ಧ ಇರುವ ಮುಡಾ ಹಗರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಅಲ್ಲಿ ಸತ್ಯ ಹೊರಗೆ ಬರಲಿದೆ. ಸರ್ಕಾರ ಏನೇ ಮಾಡಿದರೂ ಕಳ್ಳನ ಹೆಂಡತಿ ಡ್ಯಾಶ್ ಡ್ಯಾಶ್..” ಎಂದು ವ್ಯಂಗ್ಯವಾಡಿದರು.
“ಕಾಂಗ್ರೆಸ್ ಶಾಸಕರು, ಸಚಿವರು ಹಾಗೂ ಮುಖಂಡರು ಸಿದ್ದರಾಮಯ್ಯ ಅವರ ರಾಜೀನಾಮೆ ಎದುರು ನೋಡುತ್ತಿದ್ದಾರೆ. ಹೀಗಾಗಿಯೇ ಕೆಲವು ಸಚಿವರು ತಾವು ಸಹ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದಾರೆ. ನ್ಯಾಯಾಲಯದಲ್ಲಿ ತೀರ್ಪು ಹೊರಬರುವ ಮುನ್ನವೇ ಸಿಎಂ ರಾಜೀನಾಮೆ ನೀಡುವುದು ಒಳಿತು” ಎಂದರು.
“ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಕರಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ನಮ್ಮ ಹೋರಾಟದ ಫಲವಾಗಿ ಮೂರು ವರ್ಷದಿಂದ ಇದೇ ಮೈದಾನದಲ್ಲಿ ಗಣೇಶೋತ್ಸವ ಯಶಸ್ವಿಯಾಗಿ ಆಚರಿಸುತ್ತ ಬಂದಿದ್ದೇವೆ. ರಾಷ್ಟ್ರಧ್ವಜದ ಜೊತೆಗೆ ಭಗವಾಧ್ವಜವನ್ನು ಸಹ ಇಲ್ಲಿ ಹಾರಿಸುತ್ತಿದ್ದೇವೆ. ಹುಬ್ಬಳ್ಳಿಯ ಮಣ್ಣಿನಲ್ಲಿ ಹೋರಾಟದ ಕಿಚ್ಚು ಇನ್ನೂ ಜೀವಂತವಾಗಿದೆ” ಎಂದು ಹೇಳಿದರು.
“ಭಾರತ ಬಿಟ್ಟು ಹಿಂದುತ್ವ ಇಲ್ಲ, ಹಿಂದುತ್ವ ಬಿಟ್ಟು ಭಾರತ ಇಲ್ಲ. ಆದರೆ, ಕೆಲವರು ಹಿದುತ್ವವನ್ನು ದುರ್ಬಲಗೊಳಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ನಮ್ಮದು ಉದಾತ್ ಸಂಸ್ಕೃತಿಯಾಗಿದ್ದು, ಹಿಂದುಗಳೆಲ್ಲ ಸಂಘಟಿತರಾಗಬೇಕಿದೆ”‘ ಎಂದರು.
ಕೋವಿಡ್ ಭ್ರಷ್ಟಾಚಾರ ಆರೋಪ ವಿಚಾರವಾಗಿ ಮಾತನಾಡಿ, “ತಮ್ಮ ತಪ್ಪನ್ನು ಮರೆಮಾಚಿ ಜನರ ದಿಕ್ಕು ತಪ್ಪಿಸಲು, ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ವಾಲ್ಮೀಕಿ ಹಗರಣ, ಮುಡಾ ಹಗರಣ, ಅರ್ಕಾವತಿ ಡಿ ನೋಟಿಫಿಕೇಷನ್ ಹೀಗೆ ಸಾಲು ಸಾಲು ಹಗರಣಗಳು ಸಿದ್ದರಾಮಯ್ಯರ ಅಧಿಕಾರದ ಅವಧಿಯಲ್ಲಿ ನಡೆದಿದೆ. ನೈತಿಕತೆಯಿಲ್ಲದ ಸರ್ಕಾರ ಇದು” ಎಂದು ಟೀಕಿಸಿದರು.