ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಬುಧವಾರ ನ್ಯಾಯಮೂರ್ತಿ ನಾಗಮೋಹನದಾಸ್ ಅವರೊಂದಿಗೆ ಚರ್ಚಿಸಲಾಗಿದೆ. ಅವರು ಒದಗಿಸಿದ ಎಲ್ಲ ಮಾಹಿತಿಗಳನ್ನು ಕಲೆಹಾಕಿ, ಶೀಘ್ರವೇ ದಲಿತ ಶಾಸಕರು, ಸಚಿವರು ಮತ್ತು ದಲಿತ ಮುಖಂಡರೊಂದಿಗೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ‘ಮಾದಿಗ ಸಮುದಾಯಗಳ ಸ್ವಾಭಿಮಾನ ಒಕ್ಕೂಟ’ ನಡೆಸಿದ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಭೇಟಿ ನೀಡಿದ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ್ ಪ್ರತಿಭಟನಾಕಾರರಿಂದ ಹಕ್ಕೊತ್ತಾಯ ಪತ್ರ ಸ್ವೀಕರಿಸಿದರು. ಬಳಿಕ, ಮುಖ್ಯಮಂತ್ರಿಗಳ ಭೇಟಿಗಾಗಿ ಒಕ್ಕೂಟದ ಮುಖಂಡರನ್ನು ವಿಧಾನಸೌಧಕ್ಕೆ ಕರೆದೊಯ್ದಿದ್ದರು.
ಭೇಟಿಯ ವೇಳೆ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಕೂಡ ಇದ್ದರು. ಹೋರಾಟಗಾರರ ನಿಯೋಗದೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಒಳ ಮೀಸಲಾತಿ ಜಾರಿಗೆ ತಾವು ಬದ್ಧ” ಎಂದು ಹೇಳಿದ್ದಾರೆ.
“ಒಳಮೀಸಲಾತಿ ಜಾರಿಯಾಗುವ ತನಕ ಹೊಸ ನೇಮಕಾತಿಯನ್ನಾಗಲೀ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುವುದಾಗಲೀ ಮಾಡುವುದಿಲ್ಲ” ಎಂದು ಸಚಿವ ಮಹೇದೇವಪ್ಪ ಭರವಸೆ ನೀಡಿದ್ದಾರೆ.
ಪ್ರತಿಭಟನಾಕಾರರ ನಿಯೋಗದಲ್ಲಿ ಆಲ್ ಇಂಡಿಯ ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಎಂ ಗೋಪಿನಾಥ್, ರಾಜ್ಯ ಸಂಯೋಜಕ ಆರ್ ಮುನಿಯಪ್ಪ, ಆರ್‌ಪಿಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎನ್ ಮೂರ್ತಿ, ಡಿಎಸ್ಎಸ್ ರಾಜ್ಯ ಸಂಚಾಲಕ ಶಿವಮೊಗ್ಗ ಗುರುಮೂರ್ತಿ, ಎಂಆರ್‌ಎಚ್‌ಎಸ್‌ನ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ, ಕಾರ್ಯಾಧ್ಯಕ್ಷ ಕೇಶವಮೂರ್ತಿ, ಸಮಗಾರ ಹರಳಯ್ಯ ಸಮಾಜದ ರಾಜ್ಯ ಸಂಚಾಲಕ ವೈ.ಸಿ ಕಾಂಬಳೆ, ಡೋಹರ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಕ್ರವರ್ತಿ, ಅಲೆಮಾರಿ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ, ಮಾದಿಗ ದಂಡೋರಾದ ಶ್ರೀನಿವಾಸ್ ಮತ್ತು ಕೆ.ವಿ ರಾಜು, ದಕ್ಕಲಿಗ ಸಂಘಟನೆ ಶಾಂತರಾಜು, ಅಹಿಂದ ಸಂಘದ ರಾಜ್ಯಾಧ್ಯಕ್ಷ ಮುತ್ತುರಾಜು ಇದ್ದರು.