ರಾಜ್ಯ ಸರ್ಕಾರದ ಸಾಲವನ್ನು ಟೀಕಿಸುವ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ ಲಕ್ಷ ಲಕ್ಷ ಕೋಟಿ ಸಾಲದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಟೀಕಿಸುವ ಕಾಂಗ್ರೆಸ್ ನಾಯಕರು ಸ್ವಪಕ್ಷದ ಸಾಲದ ಬಗ್ಗೆಯೂ ಧ್ವನಿ ಎತ್ತುತ್ತಿಲ್ಲ.
1947ರಿಂದ 2014ರ ತನಕದ 68 ವರ್ಷಗಳ ಅವಧಿಯಲ್ಲಿದ್ದ ದೇಶದ ಆಂತರಿಕ, ಬಾಹ್ಯ ಸಾಲದ ಪ್ರಮಾಣ 54 ಲಕ್ಷ ಕೋಟಿ ರೂಪಾಯಿ ಇತ್ತು. ಮೂರನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಸಾಲ ಬರೋಬ್ಬರಿ 200 ಲಕ್ಷ ಕೋಟಿ ರೂ.ಗಳ ಗಡಿ ದಾಟಲಿದೆ.
ಅಂದರೆ, ಮೋದಿ ಸರ್ಕಾರ ಕಳೆದ 11 ವರ್ಷಗಳಲ್ಲಿ ಬರೋಬ್ಬರಿ 145 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಮೋದಿ ಅವರ ಅಚ್ಛೇ ದಿನ್, ಸಬ್ ಕಾ ಸಾತ್ – ಸಬ್ ಕಾ ವಿಕಾಸ್ ಘೋಷಣೆಯಲ್ಲಿ ದೇಶದ ಸಾಲ ಸರಾಸರಿ ಮೂರು ಪಟ್ಟು ಹೆಚ್ಚಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭಾರತವನ್ನು ಮತ್ತಷ್ಟು ಹಿಂದಕ್ಕೆ ಎಳೆದೊಯ್ಯುತಿದೆ ಎನ್ನುವ ಭಯ ಸಾಲದ ಅಂಕಿ-ಅಂಶಗಳಿಂದ ಮೂಡುತ್ತಿದೆ.
2025-26ನೇ ಸಾಲಿಗೆ ಬಿಜೆಪಿ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 50,65,345 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಸಾಲದ ಪ್ರಮಾಣವೇ 15,68,936 ಕೋಟಿ ರೂ. ಇದೆ. ಬಡ್ಡಿಗೆ 12,70,000 ಕೋಟಿ ಹೋಗಲಿದೆ. 2026ರ ಮಾರ್ಚ್ ವೇಳೆಗೆ ದೇಶದ ಸಾಲ ಅಂದಾಜಿನ ಪ್ರಕಾರ 202 ರಿಂದ 205 ಲಕ್ಷ ಕೋಟಿ ರೂ. ಮುಟ್ಟಲೂಬಹುದು.
ಇದು ದೇಶದ ಕಥೆಯಾದರೆ ಕರ್ನಾಟಕ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರು 2025-26ನೇ ಸಾಲಿಗೆ ತಮ್ಮ ರಾಜಕೀಯ ಜೀವನದ 16ನೇ ದಾಖಲೆ ಬಜೆಟ್ ಅನ್ನು ಮಂಡಿಸಿದ್ದು, ಆಯವ್ಯಯ ಗಾತ್ರವೇ 4.09 ಲಕ್ಷ ಕೋಟಿ ರೂ. ಇದೆ. ಇದೇ ಮೊದಲ ಬಾರಿಗೆ ರಾಜ್ಯದ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ. ಮೀರಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರು 1.16 ಲಕ್ಷ ಕೋಟಿ ರೂ. ಸಾಲ ಪಡೆಯುವುದಾಗಿ ಘೋಷಿಸಿದ್ದಾರೆ. ಇಲ್ಲಿಗೆ ರಾಜ್ಯ ಸರ್ಕಾರದ ಒಟ್ಟು ಸಾಲ 7.81 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ಸಿಎಂ ಸಿದ್ದರಾಮಯ್ಯ ಅವರೇ ಹೇಳುವ ಹಾಗೆ, “ನಾನು ಸಿಎಂ ಆಗಿ ಅಧಿಕಾರದಿಂದ ಕೆಳಗಿಳಿಯುವಾಗ ರಾಜ್ಯದ ಸಾಲ 2,42,000 ಕೋಟಿ ರೂ. ಇತ್ತು. ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರಲ್ಲಿ 41,914 ಕೋಟಿ ರೂ. ಸಾಲ ಮಾಡಲಾಗಿದೆ. ಬಳಿಕ ಆಪರೇಷನ್ ಕಮಲದಿಂದ ಅಧಿಕಾರಕ್ಕೆ ಏರಿದ ಬಿಜೆಪಿಯ ಸರ್ಕಾರದ ಮೂರು ವರ್ಷದಲ್ಲಿ 2,54,760 ಕೋಟಿ ರೂಪಾಯಿ ಸಾಲ ಮಾಡಿದೆ. ನನ್ನ 5 ವರ್ಷಗಳ ಅವಧಿಯಲ್ಲಿ 1,16,512 ಕೋಟಿ ಸಾಲವಾಗಿತ್ತು. ಬಿಜೆಪಿಯವರು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದು, 5,64,896 ಕೋಟಿ ರೂ. ಸಾಲಕ್ಕೆ 34,000 ಕೋಟಿ ರೂ. ಬಡ್ಡಿ ಕಟ್ಟಬೇಕಿದೆ” ಎಂದಿದ್ದನ್ನು ಇಲ್ಲಿ ನೆನೆಯಬಹುದು. ಈಗ ಸಿದ್ದರಾಮಯ್ಯ ಅವರ ಎರಡು ವರ್ಷದ ಆಡಳಿತದ ಅವಧಿಯಲ್ಲೇ ರಾಜ್ಯದ ಒಟ್ಟು ಸಾಲ 7.81 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ.
ಕೇಂದ್ರ ಸರ್ಕಾರದ 200 ಲಕ್ಷ ಕೋಟಿ ರೂ. ಸಾಲವನ್ನು ದೇಶದ ಜನಸಂಖ್ಯೆಗೆ (140 ಕೋಟಿ) ತಾಳೆ ಹಾಕಿನೋಡಿದರೆ, ಎಲ್ಲ ಭಾರತೀಯರ ಮೇಲೆ ತಲಾ ಸರಾಸರಿ 1,42,857 ರೂ. ಸಾಲ ಇದೆ. ಅಂದರೆ, ಭಾರತೀಯ ತಲಾ ಸಾಲ ₹1,42,857 ರೂ.ಗಳು. ರಾಜ್ಯ ಸರ್ಕಾರದ 7.81 ಲಕ್ಷ ಕೋಟಿ ರೂ. ಸಾಲವನ್ನು ಕರ್ನಾಟಕದ ಜನಸಂಖ್ಯೆಗೆ (7 ಕೋಟಿ) ತಾಳೆ ಹಾಕಿದರೆ, ಕನ್ನಡಿಗರ ತಲಾ ಸಾಲ 1,11,571 ರೂ.ಗಳು. ಕೇಂದ್ರ ಮತ್ತು ರಾಜ್ಯದ ತಲಾ ಸಾಲವನ್ನು ಕೂಡಿಸಿದರೆ; ಕರ್ನಾಟಕದಲ್ಲಿರುವ ಪ್ರತಿಯೊಬ್ಬರ ತಲಾ ಸಾಲವು ಒಟ್ಟು 2,54,428 ರೂ.!
ನಮ್ಮನ್ನು ಆಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಪ್ರತಿಯೊಬ್ಬರ ಮೇಲೆ ಹೇರಿರುವ ಸಾಲದ ಹೊರೆ 2,54,428 ರೂ. ಇರುವಾಗ ಸಾಲ ಮಾಡಿ ತುಪ್ಪ ತಿಂದವರು ಹಾಯಾಗಿ ಇದ್ದಾರೆ. ಪ್ರಭುತ್ವದ ಹೊಣೆಗೇಡಿತನದಿಂದ ದೇಶ ಮತ್ತು ರಾಜ್ಯದಲ್ಲಿ ಜನಿಸುವ ಪ್ರತೀ ಮಗು ಸಹ ಈಗ ಸಾಲದ ಹೊರೆ ಹೊತ್ತುಕೊಂಡೇ ಹುಟ್ಟಬೇಕಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚಿನ್ನ ಕಳ್ಳಸಾಗಣೆಗೆ ಶಿಷ್ಟಾಚಾರ ಸೌಲಭ್ಯ ದುರುಪಯೋಗ! ಕಳ್ಳ-ಪೊಲೀಸ್ ಆಟವೇ?
ಹೆಚ್ಚು ಸಾಲ ಹೊಂದಿರುವ ರಾಜ್ಯಗಳು
ಕಳೆದ ಐದು ವರ್ಷಗಳಲ್ಲಿ ಭಾರತೀಯ ರಾಜ್ಯಗಳ ಸಾಲವು ವೇಗವಾಗಿ ಹೆಚ್ಚಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂಕಿ ಅಂಶಗಳ ಪ್ರಕಾರ, 2019ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟು 47.9 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದ್ದವು. ಇದು 2024ರ ವೇಳೆಗೆ 83.3 ಲಕ್ಷ ಕೋಟಿ ರೂ.ಗೆ ತಲುಪಿದೆ.
ಈ ಹೆಚ್ಚಳವು ಶೇ. 74 ರಷ್ಟು ಹೆಚ್ಚಾಗಿದೆ. ಈ ಸಾಲದ ಹೆಚ್ಚಳದಲ್ಲಿ ತಮಿಳುನಾಡು, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ದೊಡ್ಡ ರಾಜ್ಯಗಳು ಪ್ರಮುಖ ಪಾಲನ್ನು ಹೊಂದಿವೆ. ಆರ್ಥಿಕ ಸವಾಲುಗಳನ್ನು ಎದುರಿಸಲು ರಾಜ್ಯಗಳು ಹೆಚ್ಚು ಸಾಲ ಮಾಡಬೇಕಾಗಿ ಬಂದಿದೆ.
2024ರ ಅಂಕಿ ಅಂಶಗಳ ಪ್ರಕಾರ ತಮಿಳುನಾಡು ಅತಿ ಹೆಚ್ಚು ಸಾಲವನ್ನು ಹೊಂದಿದೆ (8.3 ಲಕ್ಷ ಕೋಟಿ ರೂ.) ಇದರ ನಂತರ ಉತ್ತರ ಪ್ರದೇಶ (ರೂ. 7.7 ಲಕ್ಷ ಕೋಟಿ) ಮತ್ತು ಮಹಾರಾಷ್ಟ್ರ (ರೂ. 7.2 ಲಕ್ಷ ಕೋಟಿ) ಇವೆ. ಸಾಲದಲ್ಲಿ ಪಶ್ಚಿಮ ಬಂಗಾಳ (6.6 ಲಕ್ಷ ಕೋಟಿ), ರಾಜಸ್ಥಾನ (5.6 ಲಕ್ಷ ಕೋಟಿ), ಆಂಧ್ರಪ್ರದೇಶ (4.9 ಲಕ್ಷ ಕೋಟಿ), ಗುಜರಾತ್ (4.7 ಲಕ್ಷ ಕೋಟಿ), ಕೇರಳ (4.3 ಲಕ್ಷ ಕೋಟಿ) ಮತ್ತು ಮಧ್ಯಪ್ರದೇಶ (4.2 ಲಕ್ಷ ಕೋಟಿ) ಸೇರಿವೆ.

ತಜ್ಞರು ಹೇಳುವುದೇನು?
ದೇಶ ಮತ್ತು ರಾಜ್ಯದ ಸಾಲದ ವಿಚಾರವಾಗಿ ಸಾಮಾಜಿಕ ಹೋರಾಟಗಾರ ಮತ್ತು ಶಿಕ್ಷಣತಜ್ಞ ಬಿ ಶ್ರೀಪಾದ್ ಭಟ್ ಅವರು ‘ಈ ದಿನ.ಕಾಂ’ ಜೊತೆ ಮಾತನಾಡಿ, “ಸಾಲವಿಲ್ಲದೇ ಸರ್ಕಾರಗಳು ನಡೆಯದ ಸ್ಥಿತಿಗೆ ದೇಶ ಮತ್ತು ರಾಜ್ಯಗಳು ಬಂದಿವೆ. ಆದರೆ, ಮೋದಿ ಪ್ರಧಾನಿಯಾದ ಮೇಲಂತೂ ದೇಶದ ಸಾಲದ ಪ್ರಮಾಣ ಶೇ. ಮೂರರಷ್ಟು ಹೆಚ್ಚಾಗಿದೆ. ಈಗ 200 ಲಕ್ಷ ಕೋಟಿ ದೇಶದ ಸಾಲವಿದೆ. ಮೂಲಸೌಕರ್ಯಕ್ಕಾಗಿ ಸಾಲ ಮಾಡಿದ್ದೇವೆ ಎಂದು ಮೋದಿ ಸರ್ಕಾರ ಹೇಳುತ್ತದೆ. ಯಾವ ಯಾವ ರಾಜ್ಯದ ಮೂಲ ಸೌಕರ್ಯಕ್ಕೆ ಖರ್ಚು ಮಾಡಿದೆ ಎಂಬುದಕ್ಕೆ ಉತ್ತರವಿಲ್ಲ. ಎಲ್ಲವೂ ಬರೀ ಅಕ್ರಮದೊಳಗೆ ಹೂತು ಹೋಗಿದೆ ಅಂತ ಅನ್ನಿಸುತ್ತದೆ. ಮೋದಿ ಸರ್ಕಾರ ತನ್ನ ಅವಧಿಯಲ್ಲಾದ ಸಾಲದ ಬಗ್ಗೆ ಎಲ್ಲಿ, ಹೇಗೆ ಖರ್ಚು ಮಾಡಿದೆ. ಎಲ್ಲಿ ಹೂಡಿಕೆ ಮಾಡಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ” ಎಂದು ಆಗ್ರಹಿಸಿದರು.
“ಅಂಬಾನಿ, ಅದಾನಿ ಅವರಿಗೆ ಬಹುತೇಕ ಟೆಂಡರ್‌ಗಳು ಹೋಗುತ್ತವೆ. ಮೋದಿ ಸರ್ಕಾರದ ಸಾಲದ ಹಣ ಇವರ ಹೊಟ್ಟೆಯನ್ನು ತುಂಬಿಸುತ್ತಿದೆ. ಅಭಿವೃದ್ಧಿ ಎಲ್ಲಿದೆ? ಸಾಲಕ್ಕೆ ಒಂದು ಲೆಕ್ಕ ಬೇಡವೇ? ದೇಶದ ಜನತೆ ಇದನ್ನು ಪ್ರಶ್ನಿಸಿದರೆ ಅವರು ದೇಶದ್ರೋಹಿಯಾಗುತ್ತಾರೆ. ಸರ್ಕಾರಗಳಿಗೆ ಆದಾಯದ ಮೂಲಗಳೇ ಇಲ್ಲ ಎಂಬುದನ್ನು ಮರೆಮಾಚಲಾಗಿದೆ. ಜಿಎಸ್‌ಟಿ ಸಂಗ್ರಹ ಏನು ಆಗುತ್ತಿದೆ? ತೆರಿಗೆ ಕಟ್ಟುವ ರಾಜ್ಯಗಳಿಗೂ ಆ ಹಣ ಸಿಗುತ್ತಿಲ್ಲ. ಒಂದು ರೀತಿಯಲ್ಲಿ ಇದು ಲೂಟಿ ತರ ಆಗಿಹೋಗಿದೆ. ಇಡೀ ಪಾಲಿಸಿಯೇ ಬದಲಾಗಬೇಕು. ಸಾಲದ ಪ್ರತಿ ರೂಪಾಯಿಗೂ ಲೆಕ್ಕ ಸಿಗಬೇಕು” ಎಂದು ಹೇಳಿದರು.
“ಸಿದ್ದರಾಮಯ್ಯ ಸರ್ಕಾರ ಕೂಡ ಹೆಚ್ಚಿನ ಸಾಲ ಮಾಡಿದೆ. ಯಾಕೆ ಸಾಲ ಮಾಡುತ್ತಿದ್ದೇವೆ ಎನ್ನುವುದರ ಬಗ್ಗೆ ರಾಜ್ಯದ ಜನರಿಗೆ ಉತ್ತರವಿಲ್ಲ. ಮೂಲ ಸೌಕರ್ಯ ಅಂತ ಹೆಸರು ಹೇಳಿ ಎಲ್ಲವನ್ನೂ ಮುಗುಮ್ಮಾಗಿಯೇ ಇಡಲಾಗಿದೆ. ಮನೆಯ ಯಜಮಾನ ತಿಂಗಳಿಗೆ 15 ಸಾವಿರ ದುಡಿಯುತ್ತಿದ್ದಾನೆ ಎಂದುಕೊಳ್ಳಿ. ಆತನ ಮನೆ ನಿರ್ವಹಣೆಗೆ 30 ಸಾವಿರ ಬೇಕು. ಉಳಿದ 15 ಸಾವಿರ ಸಾಲವನ್ನು ನೀವು ಆದಾಯಕ್ಕೆ ಸೇರಿಸಿದರೆ ಹೇಗೆ? ಸಿದ್ದರಾಮಯ್ಯ ಅವರ ಕಥೆಯೂ ಹೀಗೆ ಆಗಿದೆ. ರಾಜ್ಯದ ಒಟ್ಟು ಆದಾಯ 2.5 ಲಕ್ಷ ಕೋಟಿ ಇದೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ. ದಾಟಿದೆ. ವಿತ್ತಿಯ ಕೊರತೆ ಮುಂದೆ ರಾಜ್ಯದ ಜನರನ್ನೇ ಆರ್ಥಿಕವಾಗಿ ಸುಡಲಿದೆ” ಎಂದು ತಿಳಿಸಿದರು.

ಒಕ್ಕೂಟ ಸರ್ಕಾರದ ಸಾಲ ಅಪಾಯಕಾರಿ
ಅರ್ಥಶಾಸ್ತ್ರಜ್ಞ ಟಿ.ಆರ್. ಚಂದ್ರಶೇಖರ್ ಮಾತನಾಡಿ, “ಆರ್ಥಿಕ ಅಭಿವೃದ್ಧಿಗಾಗಿ ಯಾವುದೇ ಸರ್ಕಾರ ಇರಲಿ ಸಾಲ ಮಾಡುವುದು ತಪ್ಪಲ್ಲ. ಆದರೆ ಅದಕ್ಕೊಂದು ಮಿತಿ ಇರಬೇಕು ಕರ್ನಾಟಕ ಸರ್ಕಾರದ ಸಾಲದ ವಿಚಾರ ನೋಡಿದರೆ ವಿತ್ತೀಯ ಕೊರತೆಯ ಕಾಯ್ದೆಯ ಶೇ.25ರೊಳಗಿದೆ. ಅಂದರೆ ರಾಜ್ಯ ಸರ್ಕಾರ ಸಾಲದ ಮಿತಿಯನ್ನು ಮೀರಿಲ್ಲ. ಆದರೆ ಒಕ್ಕೂಟ ಸರ್ಕಾರ ದೇಶದ ಜಿಡಿಪಿಯ ಶೇ.50 ರಷ್ಟು ಮೀರಿ ಸಾಲ ಮಾಡಿದೆ. ಇದು ಅಪಾಯಕಾರಿ. ದೇಶ ಸ್ವತಂತ್ರಗೊಂಡು 65 ವರ್ಷವಾದಾಗ ಇದ್ದ ಸಾಲದ ಪ್ರಮಾಣಕ್ಕೂ ಮೋದಿ ಸರ್ಕಾರದ 11 ವರ್ಷದ ಸಾಲದ ಪ್ರಮಾಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆರ್ಥಿಕ ವಿವೇಚನೆ ಇಲ್ಲದೇ ಒಕ್ಕೂಟ ಸರ್ಕಾರ ಸಾಲ ಮಾಡುತ್ತಿದೆ. ರಾಜ್ಯ ಸರ್ಕಾರ ಸಾಲದ ಬಡ್ಡಿ ತೀರಿಸಲು 45,600 ಕೊಟಿ ತೆಗೆದಿಟ್ಟರೆ, ಒಕ್ಕೂಟ ಸರ್ಕಾರ 12,70,000 ತೆಗೆದಿಟ್ಟಿದೆ. ಬಡ್ಡಿಗೆ ಹೆಚ್ಚು ಹಣ ಕೊಟ್ಟರೆ ಆರ್ಥಿಕವಾಗಿ ಅಭಿವೃದ್ಧಿ ಕಷ್ಟ ಸಾಧ್ಯ” ಎಂದು ಹೇಳಿದರು.
“ರಾಜ್ಯದ ಸಾಲವನ್ನು ಸಮರ್ಥಿಸಿಕೊಂಡು ನಾನು ಮಾತನಾಡುತ್ತಿಲ್ಲ. ರಾಜ್ಯದ ಆರ್ಥಿಕ ಬೆಳವಣಿಗೆ 7.5 ಇದ್ದರೆ, ದೇಶದ ಆರ್ಥಿಕ ಬೆಳವಣಿಗೆ ದರ 6.4ರಷ್ಟಿದೆ. ರಾಜ್ಯವೇ ಆರ್ಥಿಕ ಶಿಸ್ತಿನಲ್ಲಿ ಮುಂದುವರಿಯುತ್ತಿದೆ. ಯಾವುದೇ ಸಾಲ ಬಂಡವಾಳ ನಿರ್ಮಾಣಕ್ಕೆ ಉಪಯೋಗವಾಗಬೇಕು. ಅದನ್ನು ಬಿಟ್ಟು ಅನುಭೋಗಕ್ಕೆ ಖರ್ಚಾದರೆ ಅದು ದೇಶಕ್ಕೆ ಆರ್ಥಿಕ ಹೊರೆಯಾಗಿಯೇ ಪರಿಣಮಿಸಲಿದೆ. ಒಕ್ಕೂಟ ಸರ್ಕಾರ ಆರ್ಥಿಕ ಶಿಸ್ತನ್ನು ಮರೆತು ಸಾಲ ಮಾಡುತ್ತಿದೆ. ಬಂಡವಾಳ ನಿರ್ಮಾಣಕ್ಕೆ ಬಳಸಿದ್ದು ಸ್ಪಷ್ಟವಾಗಿ ಕಾಣುತ್ತಿಲ್ಲ. ಬಂಡವಾಳಕ್ಕೆ ಹೂಡಿಕೆಯಾದರೆ ಮುಂದೆ ಅದನ್ನು ಮಾರಿಯಾದರೂ ಸಾಲ ತೀರಿಸಬಹುದು. ಹೀಗೆ ದೇಶದ ಸಾಲ ಮುಂದುವರಿದರೆ ದೊಡ್ಡ ಅಪಾಯವೇ ಕಾದಿದೆ” ಎಂದು ವಿಶ್ಲೇಷಿಸಿದರು.
ರಾಜ್ಯ ಸರ್ಕಾರದ ಸಾಲವನ್ನು ಟೀಕಿಸುವ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ ಲಕ್ಷ ಲಕ್ಷ ಕೋಟಿ ಸಾಲದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಟೀಕಿಸುವ ಕಾಂಗ್ರೆಸ್ ನಾಯಕರು ಸ್ವಪಕ್ಷದ ಸಾಲದ ಬಗ್ಗೆಯೂ ಧ್ವನಿ ಎತ್ತುತ್ತಿಲ್ಲ. ಕೇಂದ್ರ ಆಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಅಲ್ಲಿರುವ ಬಲಾಢ್ಯ ಸಚಿವರು ತಮ್ಮ ತಮ್ಮ ಇಲಾಖೆಗಳ ಪೂರ್ಣ ಅನುದಾನವನ್ನು ಯಥೇಚ್ಛವಾಗಿ ಬಳಸಿಕೊಂಡು ತಮ್ಮ ತಮ್ಮ ಆದಾಯ ಸಂಪತ್ತಿನ ಬೆಟ್ಟವನ್ನು ವರ್ಷದಿಂದ ವರ್ಷಕ್ಕೆ ಬೆಳೆಸುತ್ತಲೇ ಇದ್ದಾರೆ. ಇವರ ಜೊತೆ ಕೈ ಜೋಡಿಸಿದ ಉದ್ಯಮಿಗಳು ಕೂಡ ಸಂಪತ್ತಿನ ಸುಖದಲ್ಲಿ ಬಿದ್ದು ಹೊರಳಾಡುತ್ತಿದ್ದಾರೆ. ದೇಶದ ಕಥೆ ಹೇಗಾಗಿದೆ ಎಂದರೆ; ಸಾಲ ಮಾಡಿದವರೇ ಬೇರೆ.. ತುಪ್ಪ ತಿಂದವರೇ ಬೇರೆ!

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.