ಶಕ್ತಿ ಯೋಜನೆಯನ್ನು ರಾಜ್ಯದ ಮಹಿಳೆಯರು ಬಹಳ ಸಂತೋಷದಿಂದ ಸ್ವಾಗತಿಸಿದ್ದಾರೆ. ಒಂದು ತಿಂಗಳಲ್ಲಿ 18 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಕೆಲವು ಕಡೆ ಬಸ್‌ಗಳ ಕೊರತೆ ಇದೆ ಎಂಬ ಮಾಹಿತಿ ಬಂದಿದೆ. ಇದಕ್ಕಾಗಿ ಸಾರಿಗೆ ಇಲಾಖೆಯಲ್ಲಿ 13 ಸಾವಿರ ಹುದ್ದೆ ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯಪಾಲರ ಭಾಷಣದ ಮೇಲೆ ಗುರುವಾರದ ಕಲಾಪದಲ್ಲಿ ಮುಖ್ಯಮಂತ್ರಿ ಉತ್ತರಿಸಿ, “ಕುಮಾರಸ್ವಾಮಿ ಅವರು ಶಕ್ತಿ ಯೋಜನೆಯಿಂದಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಯಾರಿಗೂ ಸಮಸ್ಯೆಯಾಗಬಾರದು. ಪುರುಷ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಹೊಸದಾಗಿ ನಾಲ್ಕು ಸಾವಿರ ಬಸ್‌ಗಳ ಖರೀದಿ ಮಾಡಲು ನಿರ್ಧರಿಸಲಾಗಿದೆ” ಎಂದು ಸದನಕ್ಕೆ ಮಾಹಿತಿ ನೀಡಿದರು.