- ಸಂಪುಟ ಸಭೆ ಬಳಿಕ ಗ್ಯಾರಂಟಿ ಜಾರಿ ಮಾಡಿದ ಕೈ ಸರ್ಕಾರ
- ಕೊಟ್ಟ ಮಾತಿನಂತೆ ನಡೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ, ನುಡಿದಂತೆ ನಡೆಯುವ ಹಾದಿಯಲ್ಲಿ ಮೊದಲ ಹೆಜ್ಜೆ ಇಟ್ಟಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಒಪ್ಪಿಗೆ ನೀಡಿರುವ ಸರ್ಕಾರ ಅದನ್ನು ಇಂದಿನಿಂದಲೇ ಅನುಷ್ಠಾನ ಮಾಡುವುದಾಗಿ ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸದ್ಯದ ಆರ್ಥಿಕ ಲೆಕ್ಕಾಚಾರಗಳನ್ನು ನೋಡಿಕೊಂಡು ಯೋಜನೆಗಳನ್ನು ಜಾರಿ ಮಾಡಲು ಮಂತ್ರಿಮಂಡಲ ಒಪ್ಪಿಗೆ ನೀಡಿದೆ.
ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, 200ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿ ಯೋಜನೆ ಹಾಗೂ 10ಕೆ ಜಿ ಅಕ್ಕಿ ವಿತರಣೆ ಮಾಡುವ ಅನ್ನಭಾಗ್ಯ, ನಿರುದ್ಯೋಗಿ ಭತ್ಯೆ, ಮನೆಯೊಡತಿಗೆ 2000 ಸಹಾಯಧನ ನೀಡುವ ಯೋಜನೆಗಳಿಗೆ ಅಸ್ತು ಎಂದಿದೆ.
ಹೀಗೆ ಸರ್ಕಾರ ನೀಡಿರುವ ಈ ಯೋಜನೆಗಳು ಕೆಲ ಷರತ್ತುಗಳೊಂದಿಗೆ ಜಾರಿಯಾಗುತ್ತಿವೆ. ಬಿಪಿಎಲ್ ಕುಟುಂಬಗಳಿಗೆ ಯೋಜನೆಯ ಪೂರ್ಣ ಲಾಭ ದೊರಕಲಿದ್ದು, ಉಳಿದಂತೆ ಕೆಲ ನಿಯಮಗಳೊಂದಿಗೆ ಇತರ ಕುಟುಂಬಗಳಿಗೂ ಇದು ದೊರಕಲಿದೆ.
ಒಟ್ಟಾರೆ ಮೂರು ಯೋಜನೆಗಳ ಜಾರಿಯಿಂದ ಸರ್ಕಾರದ ಬೊಕ್ಕಸಕ್ಕೆ ಒಂದು ಲಕ್ಷ ಕೋಟಿಗೂ ಅಧಿಕ ಹೊರೆಯಾಗಲಿದೆ. ಇಷ್ಟಿದ್ದರೂ ಕೊಟ್ಟ ಮಾತಿನಂತೆ ಯೋಜನೆ ಜಾರಿ ಮಾಡಿದ ಸರ್ಕಾರ ಇದಕ್ಕಾಗಿನ ಆರ್ಥಿಕ ಹೊಂದಾಣಿಕೆಗೆ ಹೊಸ ಮಾರ್ಗೋಪಾಯಗಳನ್ನು ಹುಡುಕಿಕೊಂಡಿದೆ.
ಈ ಸುದ್ದಿ ಓದಿದ್ದೀರಾ?:ಗ್ಯಾರಂಟಿ ಯೋಜನೆಗಳಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಆದ್ಯತೆ: ಸಚಿವ ಪ್ರಿಯಾಂಕ್ ಖರ್ಗೆ
ಐದೂ ಯೋಜನೆಗಳು ಇದೇ ವರ್ಷ ಜಾರಿಗೆ ಬರಲಿವೆ. ಯೋಜನೆ ಜಾರಿಗೂ ಮುನ್ನ ಮೂರು ದಿನಗಳ ಕಾಲ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಯೋಜನೆಗಳ ಜಾರಿ ಸಾಧ್ಯತೆ ಮತ್ತು ಆರ್ಥಿಕ ಹೊಣೆಗಾರಿಕೆ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದು ಈಗ ಅವುಗಳನ್ನು ಅನುಷ್ಥಾನಕ್ಕೆ ತಂದಿದ್ದಾರೆ.