ರೈತರ ಕಲ್ಯಾಣಕ್ಕಾಗಿ ತನ್ನ ಭರವಸೆಯನ್ನು ಈಡೇರಿಸುವಲ್ಲಿ ಸರ್ಕಾರ ಬದ್ಧವಾಗಿದೆ. ಕಬ್ಬಿನ ಬೆಲೆಯಲ್ಲಿ ‘ಐತಿಹಾಸಿಕ’ ಹೆಚ್ಚಳವು ಅಂತಹ ಪ್ರಯತ್ನಗಳ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಅಕ್ಟೋಬರ್‌ನಿಂದ ಪ್ರಾರಂಭವಾಗುವ 2024-25ರ ಕೃಷಿ ಹಂಗಾಮಿಗೆ ಕಬ್ಬು ಬೆಳೆಗಾರರಿಗೆ ಪಾವತಿಸುವ ‘ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ’ (ಎಫ್‌ಆರ್‌ಪಿ)ಯನ್ನು 25 ರೂ.ನಿಂದ 340 ರೂ.ವರೆಗೆ ಹೆಚ್ಚಿಸಿದೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಕಬ್ಬು ಬೆಲೆ ಏರಿಕೆಯಿಂದ ಕೋಟ್ಯಂತರ ಕಬ್ಬು ರೈತರಿಗೆ ಅನುಕೂಲವಾಗಲಿದೆ” ಎಂದು ಹೇಳಿದ್ದಾರೆ.
ನಿರ್ಧಾರದ ನಂತರ ಅಧಿಕೃತ ಹೇಳಿಕೆಯು, “ಕಬ್ಬುಬೆಳೆಯುವ ರೈತರ ಏಳಿಗೆಯನ್ನು ಹೊಸ ಎಫ್‌ಆರ್‌ಪಿ ಖಚಿತಪಡಿಸುತ್ತದೆ. ಭಾರತವು ಈಗಾಗಲೇ ವಿಶ್ವದಲ್ಲಿಯೇ ಕಬ್ಬಿಗೆ ಅತ್ಯಧಿಕ ಬೆಲೆಯನ್ನು ಪಾವತಿಸುತ್ತಿದೆ ಎಂಬುದು ಗಮನಾರ್ಹ. ಅದರ ಹೊರತಾಗಿಯೂ ಸರ್ಕಾರವು ದೇಶೀಯ ಗ್ರಾಹಕರಿಗೆ ಅಗ್ಗದ ಬೆಲೆಗೆ ಸಕ್ಕರೆ ದೊರೆಯುವಂತೆ ಮಾಡಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ‘ರೈತರ ಹತ್ಯೆ’ಗೆ ಇತಿಹಾಸ ಬಿಜೆಪಿಯಿಂದ ಉತ್ತರ ಕೇಳುತ್ತದೆ; ರೈತನ ಸಾವಿಗೆ ರಾಹುಲ್ ಗಾಂಧಿ ಸಂತಾಪ
ಅಂದಹಾಗೆ, ಕೇಂದ್ರ ಸರ್ಕಾರ ಲಿಖಿತವಾಗಿ ಭರವಸೆ ನೀಡಿದ್ದ ಎಂಎಸ್‌ಪಿ, ರೈತ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ‘ದೆಹಲಿ ಚಲೋ’ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್‌ನಿಂದ ದೆಹಲಿಗೆ ಬರುತ್ತಿದ್ದ ರೈತರನ್ನು ಹರಿಯಾಣ ಗಡಿಯಲ್ಲಿ ತಡೆಯಾಗಿದೆ. ರೈತರ ಹಾದಿಗೆ ಬ್ಯಾರಿಕೇಡ್‌ಗಳು, ಸಿಮೆಂಟ್ ಬ್ಲಾಕ್‌ಗಳು, ಮುಳ್ಳಿನ ತಂತಿಗಳು, ಕಬ್ಬಿಣದ ಮೊಳೆಗಳನ್ನು ಹಾಕಲಾಗಿದೆ. ಅದನ್ನೂ ಮೀರಿ ದೆಹಲಿಯತ್ತ ಹೊರಟಿದ್ದ ರೈತರ ಮೇಲೆ ಪೊಲೀಸರು ಟಿಯರ್ ಗ್ಯಾಸ್, ರಬ್ಬರ್ ಗುಂಡಿನ ದಾಳಿ ಮಾಡಿದ್ದಾರೆ. ಬುಧವಾರ ನಡೆದ ರಬ್ಬರ್ ಗುಂಡಿನ ದಾಳಿಯಲ್ಲಿ ರೈತರೊಬ್ಬರು ಸಾವನ್ನಪ್ಪಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿರುವ ವೇಳೆ, ಅವರನ್ನು ದೆಹಲಿಗೂ ಬರಲು ಬಿಡದೆ, ದೌರ್ಜನ್ಯ ಎಸಗುತ್ತಿರುವ ಕೇಂದ್ರ ಸರ್ಕಾರ, ಕಬ್ಬು ಬೆಳಗಾರರಿಗೆ ನೀಡುವ ದರದ ಬೆಲೆ ಹೆಚ್ಚಿಸಿ, ತಾವು ರೈತರ ಪರವಾಗಿದ್ದೇವೆ. ರೈತರ ಹಿತಾಸಕ್ತಿಗೆ ಬದ್ದರಾಗಿದ್ದೇವೆ ಎಂದು ಹೇಳಿಕೊಂಡಿದೆ.