ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದ ವಕ್ಫ್ ಗಲಾಟೆಗೆ ಸರ್ಕಾರವೇ ನೇರ ಕಾರಣ. ಜನರ ಮೇಲೆ ಕಾನೂನು ಹೇರುವ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಜೀವನ ನಡೆಸುತ್ತಾರೆ. ಸೌಹಾರ್ದತೆ ಕಲುಕುವ ಕೆಲಸ ನಡೆದಿದೆ, ಈ ಸರ್ಕಾರ ಬಂದಾಗಿನಿಂದ ತುಷ್ಟೀಕರಣ ನಡೆದಿದೆ ಎಂದು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಶಿಗ್ಗಾಂವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಗೆಜೆಟ್ ನೋಟಿಫಿಕೇಶನ್ ಆದ ಬಳಿಕ ತರಾತುರಿಯಲ್ಲಿ ಡಿಸಿಗಳು ಕಾರ್ಯ ಪೃವೃತ್ತರಾಗಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಅವರಿಗೆ ಅಷ್ಟಾದರೂ ಜ್ಞಾನ ಇರಬೇಕಲ್ವಾ? ಮೊದಲು ಇದರ ಬಗ್ಗೆ ಸಮಗ್ರವಾಗಿ ಪರಿಶೀಲನೆ ಆಗಬೇಕು. ಮುಖ್ಯಮಂತ್ರಿಗಳು ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಆದರೆ, ಇನ್ನೂ ವಾಪಸ್ ಪಡೆಯುವ ಕೆಲಸ ಆಗಿಲ್ಲ. ಸಿಎಂ ನೇರವಾಗಿ ಮಧ್ಯ ಪ್ರವೇಶ ಮಾಡಬೇಕು” ಎಂದು ಆಗ್ರಹಿಸಿದರು.
“ರಾಜ್ಯದಲ್ಲಿ ವಕ್ಪ್ ಕಾನೂನು ದುರುಪಯೋಗ ಆಗುತ್ತಿದ್ದು, ಕಂದಾಯ, ಕಾನೂನು ಕಡೆಗಣಿಸಿ ವಿನಾಕಾರಣ ಇಡೀ ರಾಜ್ಯದ ರೈತರ ಸಾಗುವಳಿ ಜಮೀನುಗಳಿಗೆ ವಕ್ಪ್ ಪ್ರಾಪರ್ಟಿ ಅಂತ ಮಾಡಲು ಹೊರಟಿದ್ದಾರೆ. ಸರ್ಕಾರ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದು, ರಾಜ್ಯದ ಸಮಗ್ರ ದಾಖಲೆಗಳನ್ನು ಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಕ್ಫ್ ಆಸ್ತಿ ವಿವಾದ | ಫಲಿಸಿತು ಬಿಜೆಪಿ (ಕು)ತಂತ್ರ; ಕಡಕೋಳದಲ್ಲಿ ಭುಗಿಲೆದ್ದ ಕೋಮು ಗಲಭೆ
“ಭೂಮಿ ವಿಚಾರದಲ್ಲಿ ಕಂದಾಯ ಕಾನೂನು ದಾಖಲೆಗಳೇ ಅಂತಿಮ. ಆದರೆ, ಆ ಕಾನೂನು ಕಡೆಗಣಿಸಿ ಅದಾಲತ್ ಪ್ರಕಾರ ಆಗಿದ್ದೇ ಅಂತಿಮ ಅಂತ ಮಾಡುತ್ತಿದ್ದಾರೆ. ಹಿಂದೆ ಇಂತ ಪ್ರಕರಣ ಆದಾಗ ಯಾರೆಲ್ಲ ಯಾಲಯಕ್ಕೆ ಹೋಗಿದ್ದಾರೆ ಅವರಿಗೆಲ್ಲ ನ್ಯಾಯ ಸಿಕ್ಕಿದೆ. ಯಾರೋ ಒಬ್ಬರು ಅರ್ಜಿ ಹಾಕಿದರೆ ಇಡೀ ರಾಜ್ಯದ ರೈತರ ಆಸ್ತಿಗೆ ವಕ್ಪ್ ಆಸ್ತಿಯೆಂದು ರೈತರಿಗೆ ನೋಟಿಸ್ ನೀಡುವ ಮೂಲಕ ಸರ್ಕಾರದಿಂದ ಅರಾಜಕತೆ, ಗಾಬರಿ ಉಂಟು ಮಾಡುವ ಕೆಲಸ ನಡೆದಿದೆ” ಎಂದು ಆರೋಪಿಸಿದರು.
“ಈಗ ಎಲ್ಲಿಯಾದರೂ ಪೂಜೆ ಮಾಡಿ ನಮ್ಮದೇ ಭೂಮಿ ಅಂದರೆ ಹೇಗೆ? ಇಲ್ಲಿಯ ಕೃಷ್ಣಾ ನಗರ, ತಾಂಡಾ, ವಕ್ಪ್ ಪ್ರಾಪರ್ಟಿ ಅಂತ ಮಾಡಿದ್ದಾರೆ. ಸರ್ಕಾರಕ್ಕೆ ಕನಿಷ್ಠ ತಿಳುವಳಿಕೆಯೂ ಇಲ್ಲ. ನಾಯಕತ್ವ ಭಪಡಿಸಿಕೊಳ್ಳಲು ಸಿಎಂ ಅವರಿಂದ ತುಷ್ಟೀಕರಣ ರಾಜಕೀಯ ನಡೆದಿದೆ. ಈಗ ಉಪ ಚುನಾವಣೆಯಲ್ಲಿ ಲಾಭ ಪಡೆಯುವ ಯತ್ನ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.