- ‘ರಾಜ್ಯದಲ್ಲಿ ಆಪರೇಷನ್ ಕಮಲ ಆಗಲು ಸಾಧ್ಯವಿಲ್ಲ’
- ‘ಶೆಟ್ಟರ್ ಸರಿಯಾದ ಸಮಯಕ್ಕೆ ನಿರ್ಣಯ ತೆಗೆದುಕೊಳ್ಳುತ್ತಾರೆ’
ರಾಜ್ಯದಲ್ಲಿ ಆಪರೇಷನ್ ಕಮಲ ಆಗಲು ಸಾಧ್ಯವಿಲ್ಲ. ಡಿಕೆ ಶಿವಕುಮಾರ್ರಿಂದಲೇ ಸರ್ಕಾರ ಬೀಳುತ್ತದೆ. ಮಹಾರಾಷ್ಟ್ರ ಮಾದರಿಯಲ್ಲಿ ಈ ಸರ್ಕಾರ ಬದಲಾಗುವುದು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಡಿರುವ ಆರೋಪಕ್ಕೆ ರಮೇಶ್ ಜಾರಕಿಹೊಳಿ ಸಿಡಿದೆದ್ದಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
“ನೋಡುತ್ತೀರಿ, ಒಂದು ರಾತ್ರಿಯಲ್ಲಿ ಎಲ್ಲವೂ ಬದಲಾಗಲಿದೆ. ಅತೀ ಶೀಘ್ರದಲ್ಲಿ ಡಿಕೆ ಶಿವಕುಮಾರ್ ಮಾಜಿ ಮಂತ್ರಿ ಆಗಲಿದ್ದಾರೆ. ರಾಜಕೀಯ ವ್ಯವಸ್ಥೆಯಿಂದ ಇದೆಲ್ಲ ಗೊತ್ತಾಗುತ್ತಿದೆ. ಹೈಕೋರ್ಟ್ ಹಿನ್ನಡೆಯಿಂದ ಅವರು ಮಾಜಿ ಆಗಲಿದ್ದಾರೆ “ಎಂದರು.
”ಡಿಕೆ ಶಿವಕುಮಾರ್ ನಾಟಕ ಮಂಡಳಿ ಬಿಜೆಪಿ ಹೆಸರು ಕೆಡಿಸುತ್ತಿದೆ. ಡಿಕೆ ಆ್ಯಂಡ್ ಕಂಪನಿ ಆಪರೇಷನ್ ಕಮಲ ಮಾಡುತ್ತಿದೆ. ಆಪರೇಷನ್ ಕಮಲದ ಬಗ್ಗೆ ನಮ್ಮಲ್ಲಿ ಯಾವುದೇ ಚರ್ಚೆ ಆಗಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹುಲಿಯುಗುರು ಲಾಕೆಟ್ ; ಸಂತೋಷನಿಗೇನೋ ಸುಣ್ಣ, ಸೆಲೆಬ್ರಿಟಿಗಳಿಗೇಕೆ ಬೆಣ್ಣೆ?
“ಡಿಕೆ ಶಿವಕುಮಾರ್ ಸರ್ವಾಧಿಕಾರಿ ಧೋರಣೆ, ಸೊಕ್ಕಿನಿಂದ 2019ರಲ್ಲಿ ಅನಿವಾರ್ಯವಾಗಿ ಆಪರೇಷನ್ ಮಾಡಿದ್ದೆವು. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ವಿರುದ್ಧ ನಮ್ಮ ಸಿಟ್ಟಿಲ್ಲ. ಗ್ಯಾರಂಟಿ ಈಡೇರಿಸಲು ಆಗದಿದ್ದಕ್ಕೆ ಆಪರೇಷನ್ ಕಮಲ ಆರೋಪ ಮಾಡುತ್ತಿದ್ದಾರೆ” ಎಂದು ಹರಿಹಾಯ್ದರು.
ಡಿಕೆ ಶಿವಕುಮಾರ್ ಸಿಡಿ ಮಾಸ್ಟರ್
”ಸಿಡಿ ಮಾಸ್ಟರ್ ಡಿಕೆ ಶಿವಕುಮಾರ್, ಎಲ್ಲರ ಸಿಡಿ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಾನೆ. ಅವನೇನೂ ದೊಡ್ಡವನಲ್ಲ. ಧೈರ್ಯಶಾಲಿ ಅಲ್ಲ ಪುಕ್ಕಲು. ಡಿಕೆ ಶಿವಕುಮಾರ್ ಯಾವಾಗಲೂ ಮೋಸಗಾರ. ಹೋರಾಟ ಮಾಡುವ ಶಕ್ತಿ ಅವನಿಗಿಲ್ಲ” ಎಂದು ಕುಟುಕಿದರು.
“ಜಗದೀಶ್ ಶೆಟ್ಟರ್ ಅವರನ್ನ ನಿನ್ನೆಯೂ ಭೇಟಿ ಮಾಡಿದ್ದೆ. ಶೆಟ್ಟರ್ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆ” ಎನ್ನುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.