ಕೇಂದ್ರ ಕಾನೂನು ಸಚಿವಾಲಯವು , ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ, ಸೇವಾ ಶರತ್ತುಗಳು ಮತ್ತು ಅಧಿಕಾರದ ಅವಧಿಯನ್ನು ನಿಯಂತ್ರಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ.
ಸಚಿವಾಲಯ ಬಿಡುಗಡೆ ಮಾಡಿರುವ ಮಸೂದೆಯ ಕರಡು ಪಟ್ಟಿಯಲ್ಲಿರುವಂತೆ ಚುನಾವಣಾ ಮುಖ್ಯ ಆಯುಕ್ತರು ಹಾಗೂ ಇತರ ಆಯುಕ್ತರನ್ನು ರಾಷ್ಟ್ರಪತಿಗೆ ಶಿಫಾರಸ್ಸು ಮಾಡುವ ನೇಮಕಾತಿ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಹೊರಗಿಡಲಾಗಿದೆ.
ಹೊಸ ಮಸೂದೆಯಲ್ಲಿ ಪ್ರಧಾನಮಂತ್ರಿಯವರು ಅಧ್ಯಕ್ಷರಾಗಿರುತ್ತಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನ ಮಂತ್ರಿಯಿಂದ ನಾಮನಿರ್ದೇಶನಗೊಂಡ ಸಂಪುಟ ಸಚಿವರ ಸಮಿತಿ ಸದಸ್ಯರಾಗಿರುತ್ತಾರೆ.
ಮಾರ್ಚ್‌ನಲ್ಲಿ ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಸರ್ವಾನುಮತದ ತೀರ್ಪಿನಲ್ಲಿ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು(ಸಿಇಸಿ) ಮತ್ತು ಇತರ ಮುಖ್ಯ ಆಯುಕ್ತರ ನೇಮಕಾತಿ ಕುರಿತ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉನ್ನತ ಅಧಿಕಾರದ ಸಮಿತಿಯು ಸಿಇಸಿ ಅವರನ್ನು ಆಯ್ಕೆ ಮಾಡುತ್ತದೆ ಎಂದು ತೀರ್ಪು ನೀಡಿತ್ತು. ಸಿಇಸಿ ಮತ್ತು ಇಸಿಗಳ ನೇಮಕವನ್ನು ನಿಯಂತ್ರಿಸುವ ಕಾನೂನನ್ನು ಸಂಸತ್ತು ಅಂಗೀಕರಿಸುವವರೆಗೆ ಇದು ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಆದರೆ ಈಗ ಮಂಡಿಸಲಾಗುತ್ತಿರುವ ಮಸೂದೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಕೈಬಿಡುತ್ತಿರುವುದು ವಿವಾದಕ್ಕೆ ಈಡಾಗುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ? ಮಣಿಪುರದಿಂದ ‘ಈ ದಿನ’ ವರದಿ-1 | ಬಿಜೆಪಿ ಆರಂಭಿಸಿರುವ ’ಮೈತೇಯಿ ಗರ್ಭಿಣಿಯರ ಶಿಬಿರ’ದಲ್ಲಿ…
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ಸೇವಾ ನೇಮಕಾತಿ ನಿಯಮಗಳು ಮತ್ತು ಅಧಿಕಾರವಧಿ ಅವಧಿ) ಮಸೂದೆ, 2023 ಅನ್ನು ರಾಜ್ಯಸಭೆಯಲ್ಲಿ ಪರಿಚಯಿಸಲು ಕರಡು ಸಿದ್ಧಪಡಿಸಲಾಗಿದೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಅಥವಾ ಇತರ ಆಯುಕ್ತರ ಹುದ್ದೆಯು ಕೇಂದ್ರ ಸರ್ಕಾರದ ಕಾರ್ಯದರ್ಶಿಗೆ ಸಮನಾದ ಅಧಿಕಾರ ಹೊಂದಿರುತ್ತದೆ ಎಂದು ಮಸೂದೆ ಹೇಳುತ್ತದೆ. ಇವರು ‘ಚುನಾವಣೆಗಳ ನಿರ್ವಹಣೆ ಮತ್ತು ನಡವಳಿಕೆಯ ಬಗ್ಗೆ ಜ್ಞಾನ ಮತ್ತು ಅನುಭವ ಹೊಂದಿರುವ ಸಮಗ್ರತೆಯ ವ್ಯಕ್ತಿಗಳಾಗಿರಬೇಕು’ ಎಂದು ಹೇಳುತ್ತದೆ.
ಮೊದಲನೆಯದಾಗಿ, ಸಂಪುಟ ಕಾರ್ಯದರ್ಶಿ ನೇತೃತ್ವದ ಶೋಧನಾ ಸಮಿತಿ ಮತ್ತು “ಚುನಾವಣೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜ್ಞಾನ ಮತ್ತು ಅನುಭವ ಹೊಂದಿರುವ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆಯಿಲ್ಲದ ಇಬ್ಬರು ಸದಸ್ಯರನ್ನು ಒಳಗೊಂಡಂತೆ ಐದು ಸದಸ್ಯರ ಸಮಿತಿಯನ್ನು ಸಿದ್ಧಪಡಿಸಬೇಕು”.
ಇದನ್ನು ನಂತರ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಥವಾ ಏಕೈಕ ದೊಡ್ಡ ಪಕ್ಷದ ನಾಯಕ ಮತ್ತು ಪ್ರಧಾನ ಮಂತ್ರಿಯಿಂದ ನಾಮನಿರ್ದೇಶನಗೊಂಡ ಕೇಂದ್ರ ಕ್ಯಾಬಿನೆಟ್ ಸಚಿವರನ್ನು ಒಳಗೊಂಡ ಸಮಿತಿಗೆ ಕಳಿಸಬೇಕು ಎಂಬ ಅಂಶಗಳು ಮಸೂದೆಯಲ್ಲಿವೆ.

ಆಯ್ಕೆ ಸಮಿತಿಯು ತನ್ನ ಕಾರ್ಯವಿಧಾನವನ್ನು “ಪಾರದರ್ಶಕ ರೀತಿಯಲ್ಲಿ” ನಿಯಂತ್ರಿಸುತ್ತದೆ ಮತ್ತು ಅದು ಶೋಧನಾ ಸಮಿತಿಯ ಸಮಿತಿಯಲ್ಲಿ ಸೇರಿಸಲ್ಪಟ್ಟವರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಯನ್ನು ಪರಿಗಣಿಸಬಹುದು ಎಂದು ಮಸೂದೆ ಹೇಳುತ್ತದೆ.
ಸಿಇಸಿ ಮತ್ತು ಇಸಿಗಳ ಅವಧಿಯು ಆರು ವರ್ಷಗಳವರೆಗೆ ಅಥವಾ ಅವರು 65 ವರ್ಷ ವಯಸ್ಸನ್ನು ತಲುಪುವವರೆಗೆ ಬದಲಾಗದೆ ಉಳಿಯುತ್ತದೆ. ಅವರ ವೇತನವು ಸಂಪುಟ ಕಾರ್ಯದರ್ಶಿಗೆ ಸಮನಾಗಿರುತ್ತದೆ.
ಕಳೆದ ವಾರ, ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರ ನೇಮಕವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. 37 ವರ್ಷಗಳ ವೃತ್ತಿ ಜೀವನದ ನಂತರ ಭಾರತೀಯ ಆಡಳಿತ ಸೇವೆಯಿಂದ ಸ್ವಯಂ ನಿವೃತ್ತಿಯನ್ನು ಪಡೆದ ಒಂದು ದಿನದ ನಂತರ, ನವೆಂಬರ್ 19, 2022 ರಂದು ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿತ್ತು.