- ‘ವರ್ಗಾವಣೆ ವಿಚಾರ ಬೀದಿಯಲ್ಲಿ ಚರ್ಚೆ ಮಾಡಲು ಆಗುತ್ತಾ?’
- ‘ಸಿಎಂ ಸಿದ್ದರಾಮಯ್ಯ ಜೊತೆ ರಹಸ್ಯವಾಗಿ ಮಾತನಾಡಿದ್ದೇನೆ’
ವರ್ಗಾವಣೆ ವಿಚಾರಗಳನ್ನು ಬೀದಿಯಲ್ಲಿ ಕುಳಿತು ಮಾತನಾಡಲು ಆಗುತ್ತಾ? ರಹಸ್ಯವಾಗಿ ಮಾತನಾಡುವ ವಿಚಾರಗಳನ್ನು ಹಾಗೇ ಮಾತನಾಡಬೇಕು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, “ವರ್ಗಾವಣೆ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ರಹಸ್ಯವಾಗಿ ಮಾತನಾಡಿದ್ದೇನೆ. ಹಿಂದೆಯೂ ಮಾತನಾಡಿದ್ದೇವೆ. ಮುಂದೆಯೂ ರಹಸ್ಯವಾಗಿಯೇ ಮಾತನಾಡುತ್ತೇವೆ” ಎಂದರು.
ಹೈಕಮಾಂಡ್ ಬುಲಾವ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, “ಬುಧವಾರ (ಆಗಸ್ಟ್ 2) ದೆಹಲಿಯಲ್ಲಿ ನಡೆಯಲಿರುವ ಸಭೆಯ ಕಾರ್ಯಸೂಚಿಯಲ್ಲಿ ಏನಿದೆ ಗೊತ್ತಿಲ್ಲ. ಈ ಹಿಂದೆ ಪಕ್ಷದ ನಾಯಕರು ಕೆಲವೊಮ್ಮೆ ನಮ್ಮನ್ನು ದೆಹಲಿಗೆ ಕರೆಸಿಕೊಳ್ಳುತ್ತಿದ್ದರು” ಎಂದು ಹೇಳಿದರು.
“ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಗುಲಾಂ ನಬಿ ಆಜಾದ್ ಅವರು ಈ ಹಿಂದೆ ಸಚಿವರ ಜೊತೆಗೆ ಪ್ರತ್ಯೇಕವಾಗಿ ಮಾಹಿತಿ ಪಡೆಯುತ್ತಿದ್ದರು. ದೆಹಲಿ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಸಿದ್ಧತೆ ಬಗ್ಗೆ ಚರ್ಚೆ ಆಗಬಹುದು. ಸಚಿವರ ಕಾರ್ಯ ಪರಿಶೀಲನೆ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಸೌಜನ್ಯಳಿಗೆ ನ್ಯಾಯ ಸಿಗುವವರೆಗೆ ಮಂಜುನಾಥನ ದರ್ಶನ ಮಾಡಲ್ಲ : ದುನಿಯಾ ವಿಜಯ್
ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆ ನಮ್ಮ ಮುಂದಿಲ್ಲ
ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆಯನ್ನು ಸರ್ಕಾರ ನಡೆಸುತ್ತಾ ಎಂದು ಪ್ರಶ್ನಿಸಿದಾಗ, “ಈ ಪ್ರಕರಣದ ಮರು ತನಿಖೆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಅಂತಹ ಯೋಚನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಮುಖ್ಯಮಂತ್ರಿಯಿಂದಲೂ ಯಾವುದೇ ಸೂಚನೆ ಬಂದಿಲ್ಲ” ಎಂದು ಹೇಳಿದರು.
ಮತೀಯ ಗೂಂಡಾಗಿರಿ ನಿಯಂತ್ರಣ
ಮತೀಯ ಗೂಂಡಾಗಿರಿ ಪ್ರಕರಣ ರಾಜ್ಯದಲ್ಲಿ ನಡೆಯಬಾರದೆಂದು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಮತೀಯ ಗೂಂಡಾಗಿರಿ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಪ್ರತ್ಯೇಕ ಘಟಕ ಸ್ಥಾಪಿಸಿದ್ದೇವೆ. ಯಾವುದೇ ಧರ್ಮದವರು ಇಂಥ ಪ್ರಕರಣಗಳಲ್ಲಿ ಭಾಗಿಯಾದರೂ ಅವರ ಮೇಲೆ ಕ್ರಮ ಆಗಲಿದೆ” ಎಂದರು.
ಖುಷ್ಬೂ ಹೇಳಿಕೆಯನ್ನೇ ಬಿಜೆಪಿಯವರು ನಂಬುತ್ತಿಲ್ಲ
ಉಡುಪಿ ಕಾಲೇಜು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಬಿಜೆಪಿ ಆಗ್ರಹಿಸಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, “ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾರೆ. ಅವರು ಒತ್ತಾಯಿಸಲೇಬೇಕು. ಅವರು ಹೇಳಿದರು ಎಂದು ನಾವು ಅದನ್ನು ಕೇಳಬೇಕು ಎನ್ನುವ ರೂಲ್ ಇಲ್ಲ” ಎಂದು ಹೇಳಿದರು.
ಬಿಜೆಪಿಯವರು ಬೇಕಾದರೆ ರಚನಾತ್ಮಕವಾಗಿ ಸಲಹೆ ಕೊಟ್ಟರೆ ಪರವಾಗಿಲ್ಲ. ಅದು ಬಿಟ್ಟು ಪ್ರತಿಭಟನೆ ಮಾಡುತ್ತಾರೆ ಎಂದರೆ ಮಾಡಲಿ. ಉಡುಪಿ ಪ್ರಕರಣ ಬಗ್ಗೆ ಅವರ ಪಕ್ಷದ ಖುಷ್ಬೂ ಅವರೇ ಹೇಳಿಕೆ ನೀಡಿದ್ದಾರೆ. ಇದರ ಮೇಲೂ ಅವರು ನಂಬಲಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.