ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ. ನಿರುದ್ಯೋಗ ಸಮಸ್ಯೆಯನ್ನು ತೊಡೆದು ಹಾಕುತ್ತೇನೆಂದು 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಬ್ಬರದ ಭಾಷಣ ಮಾಡಿದ್ದರು. ಈ ಭಾಷಣ ಮಾಡಿ 10 ವರ್ಷಗಳು ಕಳೆದಿವೆ. ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಆದರೆ, ಇಂದಿಗೂ ಕೂಡ ನಿರುದ್ಯೋಗಿ ಯುವಜನರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ. ನಿರುದ್ಯೋಗದ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ, ಮೋದಿ ಸೃಷ್ಠಿಸಿದ ಉದ್ಯೋಗಗಳು ಮಾತ್ರ ಕಾಣುತ್ತಿಲ್ಲ.
ಅದೇನೇ ಇರಲಿ, ಮೋದಿ ಅವರ ಸುಳ್ಳು ಭಾಷಣಕ್ಕೆ ಮರಳಾಗಿ ಓಟ್ ಹಾಕಿರುವ ಪದವಿ, ಸ್ನಾತಕೋತರ ಪದವಿ ಪಡೆದಿದ್ದ ಯುವಜನರು ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಈಗಿನ ಮುಖ್ಯ ವಿಚಾರ. ಹರಿಯಾಣದಲ್ಲಿ ಸುಮಾರು 46,102 ಪದವೀಧರರು ಮತ್ತು ಸ್ನಾತಕೋತರ ಪದವೀಧರರು ಗುತ್ತಿಗೆ ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇದು ದೇಶದ ಗಮನ ಸೆಳೆಯುತ್ತಿದೆ.
ಅಂದಹಾಗೆ, ಪೌರಕಾರ್ಮಿಕ ಹುದ್ದೆಯೇ ಆಗಿರಲಿ ಅಥವಾ ಬೇರಾವ ಹುದ್ದೆಯೇ ಆಗಿರಲಿ ಯಾವುದು ಅಪಮಾನಕರ, ಅವಮಾನಕರ ಹುದ್ದೆಗಳಲ್ಲ. ಆದರೆ, ಪದವೀಧರರು ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಹಾಕುವುದು ಶಿಕ್ಷಣಕ್ಕೆ ತಕ್ಕ ಉದ್ಯೋಗವಲ್ಲ ಎಂಬುದು ಗಮನಾರ್ಹ ಸಂಗತಿ.
ಹರಿಯಾಣ ಸರ್ಕಾರದಲ್ಲಿ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು ಮತ್ತು ನಾಗರಿಕ ಸಂಸ್ಥೆಗಳಲ್ಲಿ ಕಚೇರಿಗಳನ್ನು ಸ್ವಚ್ಛಗೊಳಿಸಲು ಸ್ವೀಪರ್ ಕೆಲಸಗಳು ಅಂದರೆ ಕಸ ಗುಡಿಸುವ ಗ್ರೂಪ್ ಡಿ ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳನ್ನು ಭರ್ತಿ ಮಾಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಹೊರಗುತ್ತಿಗೆ ಸಂಸ್ಥೆ ‘ಹರಿಯಾಣ ಕೌಶಲ್ ರೋಜಗಾರ್ ನಿಗಮ್ ಲಿಮಿಟೆಡ್’ ಪಡೆದುಕೊಂಡಿದೆ. ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದೆ. ಆ ಹುದ್ದೆಗಳಿಗೆ ಬರೋಬ್ಬರಿ 3.95 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ, 39,990 ಪದವೀಧರರು ಮತ್ತು 6,112ಕ್ಕೂ ಹೆಚ್ಚು ಸ್ನಾತಕೋತ್ತರ ಪದವೀಧರರು (ಒಟ್ಟು 46,102 ಮಂದಿ) ಅಭ್ಯರ್ಥಿಗಳಾಗಿದ್ದಾರೆ. ಈ ಬಗ್ಗೆ ಅಂಕಿಅಂಶಗಳನ್ನು ಏಜೆನ್ಸಿಯೇ ಬಹಿರಂಗಪಡಿಸಿದೆ. ಮತ್ತೊಂದು ಗಮನಾರ್ಹ ವಿಚಾರವೆಂದರೆ, ಅರ್ಜಿ ಸಲ್ಲಿಸಿರುವವರಲ್ಲಿ 1,17,144 ಅಭ್ಯರ್ಥಿಗಳು 12ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್‌ನ ವರದಿಯ ಪ್ರಕಾರ, ಇಷ್ಟೊಂದು ದೊಡ್ಡ ಸಂಖ್ಯೆಯ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಪೌರ ಕಾರ್ಮಿಕರ ಹುದ್ದೆಗೆ ಅರ್ಜಿ ಸಲ್ಲಿಸಲು ಕಾರಣ. ಹರಿಯಾಣವು ದೀರ್ಘಕಾಲದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವುದನ್ನು ಸೂಚಿಸುತ್ತದೆ. ಓದಿಗೆ ತಕ್ಕ ಉದ್ಯೋಗ ಸಿಗದೆ, ಯುವಜನರು ಜೀವನ ನಡೆಸಲು ಕಷ್ಟದ ಪರಿಸ್ಥಿತಿಯಲ್ಲಿದ್ದು, ಅನಿವಾರ್ಯವಾಗಿ ಸಿಗುವ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
”ಯಾವುದೇ ಉದ್ಯೋಗ ದೊರೆಯುತ್ತಿಲ್ಲ. ವ್ಯಾಸಂಗ ಮುಗಿಸಿ ನಾಲ್ಕೈದು ವರ್ಷಗಳು ಕಳೆದರೂ, ಮನೆಯಲ್ಲಿಯೇ ಕುಳಿತಿದ್ದೇನೆ. ಆದ್ದರಿಂದ ನಾನು ಪೌರ ಕಾರ್ಮಿಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ,” ಎಂದು ಸಿರ್ಸಾದ 29 ವರ್ಷದ ರಚನಾ ದೇವಿ ಹೇಳಿಕೊಂಡಿದ್ದಾರೆ. ಅವರು ನರ್ಸರಿ ಶಿಕ್ಷಕರ ತರಬೇತಿಯಲ್ಲಿ ಪದವಿ ಪಡೆದಿದ್ದು, ಪ್ರಸ್ತುತ ರಾಜಸ್ಥಾನದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆಯುತ್ತಿದ್ದಾರೆ.
ಮತ್ತೋರ್ವ ಅರ್ಜಿದಾರರಾದ ಮನೀಶಾ ಮತ್ತು ಅವರ ಪತಿ ಡ್ಯಾನಿಶ್ ಕುಮಾರ್ ಅವರು, BEd ಪದವಿ ಪಡೆದಿದ್ದಾರೆ. ಆದಾಗ್ಯೂ, ಯಾವುದೇ ಕೆಲಸ ದೊರೆಯದೆ ನಿರುದ್ಯೋಗಿಗಳಾಗಿದ್ದಾರೆ. ಅವರು ತಮ್ಮ ಆರ್ಥಿಕ ಸ್ಥಿತಿಯಿಂದಾಗಿ ಪೌರ ಕಾರ್ಮಿಕರಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಫತೇಹಾಬಾದ್‌ನ 34 ವರ್ಷದ ಸುಮಿತ್ ಶರ್ಮಾ ಅವರು ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾತ್ರವಲ್ಲದೆ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾರೆ. ಅವರೂ ಕೂಡ ಪೌರಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಇಂತಹ ಹಲವಾರು ನಿದರ್ಶನಗಳು ಹರಿಯಾಣದಲ್ಲಿ ನಿರುದ್ಯೋಗದ ಪರಿಸ್ಥಿತಿಯನ್ನು ಸೂಚಿಸುತ್ತವೆ. ಮಾತ್ರವಲ್ಲದೆ, ಹರಿಯಾಣವು ಹಣದುಬ್ಬರ, ಭ್ರಷ್ಟಾಚಾರದಿಂದಲೂ ಬಳಲುತ್ತಿದೆ. ಹರಿಯಾಣದ ಈ ದುರ್ಗತಿಗೆ ಆಡಳಿತಾರೂಢ ಬಿಜೆಪಿಯೇ ಕಾರಣವೆಂದು ಕಳೆದ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಆರೋಪಿಸಿದ್ದರು. ಇಡೀ ದೇಶದಲ್ಲಿಯೇ ನಿರುದ್ಯೋಗ ಇದೆ. ಆದರೆ, ಹರಿಯಾಣದಲ್ಲಿ ಅತಿ ಹೆಚ್ಚು ನಿರುದ್ಯೋಗವಿದೆ. ಅದಕ್ಕೆ ಇಲ್ಲಿನ ಯುವಕರು ಬೆಲೆ ತೆರುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ಕ್ಷಮೆ ಕೇಳೋದು ಯಾವಾಗ? – ಯಾಕೆ?
ಆಗಸ್ಟ್ 16ರಂದು ಪಿರಿಯಾಡಿಕ್ ಲೇಬರ್ ಫೋರ್ಸ್ ಸಮೀಕ್ಷೆ (PLFS) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಹರಿಯಾಣದಲ್ಲಿ ನಿರುದ್ಯೋಗ ಬಿಕ್ಕಟ್ಟು ಹೇರಳವಾಗಿದೆ.
ಪಿರಮಿಡ್ಸ್ ಹೌಸ್ ಹೋಲ್ಡ್ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ನಿರುದ್ಯೋಗ ದರವು 2024ರ ಜೂನ್‌ನಲ್ಲಿ 9.2% ಏರಿಕೆಯಾಗಿದೆ. ಭಾರತದ ನಗರ ಮತ್ತು ಗ್ರಾಮೀಣ ಭಾರತದಲ್ಲಿ ನಿರುದ್ಯೋಗ ದರ ಹೆಚ್ಚುತ್ತಿದೆ. ಗ್ರಾಮೀಣ ನಿರುದ್ಯೋಗ ದರವು 2024ರ ಮೇ ತಿಂಗಳಲ್ಲಿ 6.3% ಇತ್ತು. ಅದು ಜೂನ್‌ನಲ್ಲಿ 9.3%ಗೆ ಏರಿಕೆಯಾಗಿದೆ. ಅಂತೆಯೇ, ನಗರದ ಪ್ರದೇಶದ ನಿರುದ್ಯೋಗ ದರವು 8.6%ನಿಂದ 8.9%ಗೆ ಏರಿಕೆಯಾಗಿದೆ.
ವರದಿಯ ಪ್ರಕಾರ, ಹರಿಯಾಣದ ನಗರ ಪ್ರದೇಶಗಳಲ್ಲಿ 15 ಮತ್ತು 29ರ ನಡುವಿನ ವಯಸ್ಸಿನ ಯುವಜನರು ಉದ್ಯೋಗವಿಲ್ಲದೆ ಒದ್ದಾಡುತ್ತಿದ್ದಾರೆ. ಹರಿಯಾಣದಲ್ಲಿ ನಿರುದ್ಯೋಗ ದರ ಜನವರಿಯಿಂದ ಮಾರ್ಚ್ ವೇಳೆಗೆ 9.5%ಕ್ಕೆ ಏರಿಕೆಯಾಗಿದೆ. ಇದೇ ದರವು ಏಪ್ರಿಲ್-ಜೂನ್ ನಡುವಿನ ತ್ರೈಮಾಸಿಕದಲ್ಲಿ 11.2% ಕ್ಕೆ ಏರಿಕೆಯಾಗಿದೆ.
ಈ ಎಲ್ಲ ಅಂಕಿ ಅಂಶಗಳು ಹೇಳುತ್ತಿರುವುದು ಇಷ್ಟೇ… ಮೋದಿ ಅವರ ಅಬ್ಬರದ ಭಾಷಣಗಳು ಬರೀ ಜನರನ್ನ ಚುನಾವಣೆಯ ಸಮಯದಲ್ಲಿ ಸೆಳೆಯುವುದಕ್ಕೆ ಮಾತ್ರವೇ ಸೀಮಿತವಾಗಿದೆ. ಅದರ ಹೊರತಾಗಿ ಮೋದಿ ತಮ್ಮ ಭರವಸೆಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ವಿಫಲರಾಗಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೊಗ ಕೊಡುವುದಾಗಿ ಹೇಳಿದ್ದ ಮೋದಿ ಸರ್ಕಾರ ಕಳೆದ 9 ವರ್ಷಗಳಲ್ಲಿ ಕೇವಲ 1.5 ಕೋಟಿ ಉದ್ಯೋಗಗಳನ್ನು ಮಾತ್ರ ಸೃಷ್ಟಿಸಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳೇ ಹೇಳುತ್ತವೆ. ಮೋದಿ ಮತ್ತು ಬಿಜೆಪಿ ನಾಯಕರು ಹಿಂದುತ್ವ, ಕೋಮುವಾದದಂತಹ ಭಾವನಾತ್ಮಕ ವಿಷಯಗಳ ಮೇಲೆ ಯುವಜನರನ್ನು ಬಿಜೆಪಿಯತ್ತ ಸೆಳೆಯುತ್ತಿದ್ದಾರೆ. ಕೋಮು ದ್ವೇಷವನ್ನು ಯುವಜನರ ತಲೆಗೆ ತುಂಬಿ ಸಂಘಪರಿವಾರದ ಕಾಲಾಳುಗಳನ್ನಾಗಿ ಮಾಡುತ್ತಿದ್ದಾರೆ.
ನೀವು ಶಿಕ್ಷಣ ಪಡೆದರೂ, ನಿಮ್ಮಲ್ಲಿ ಕೌಶಲ್ಯವಿಲ್ಲ. ಕೌಶಲ್ಯ ಕೊಡುತ್ತೇವೆಂದು ಉನ್ನತ ಶಿಕ್ಷಣ ಪಡೆದಾಗಿಯೂ ಉದ್ಯೋಗಕ್ಕೆ ಯುವಜನರು ಅರ್ಹರಲ್ಲ ಎಂಬಂತಹ ವಾದವನ್ನು ಮುನ್ನೆಲೆಗೆ ತಂದು, ಯುವಜನರನ್ನೇ ದೂಷಿಸುತ್ತಿದ್ದಾರೆ. ತಮಗೆ ಉದ್ಯೋಗ ದೊರೆಯದೇ ಇರುವುದಕ್ಕೆ ತಮ್ಮಲ್ಲಿಯೇ ಕೌಶಲ್ಯ ಕೊರತೆ ಇದೆ ಎಂಬ ಭಾವನೆಯನ್ನು ಯುವಜನರಲ್ಲಿ ಹುಟ್ಟುಹಾಕಿ, ನಿರುದ್ಯೋಗವನ್ನು ಪ್ರಶ್ನಿಸದಂತೆ ಮಾಡಲಾಗುತ್ತಿದೆ.
ಬಿಜೆಪಿ, ಮೋದಿ, ಕೇಂದ್ರ ಸರ್ಕಾರದ ಈ ಹುನ್ನಾರವನ್ನು ಯುವಜನರು ಅರಿತುಕೊಳ್ಳಬೇಕಿದೆ. ಶಿಕ್ಷಣಕ್ಕೆ ತಕ್ಕಂತೆ, ತಮ್ಮ ಅರ್ಹತೆಗೆ ತಕ್ಕಂತೆ ಉದ್ಯೋಗಗಳಿಗಾಗಿ, ಉದ್ಯೋಗ ಸೃಷ್ಟಿಗಾಗಿ ಧ್ವನಿ ಎತ್ತಬೇಕಿದೆ. ನಿರುದ್ಯೋಗದ ವಿರುದ್ಧ ಬೃಹತ್ ಹೋರಾಟಗಳು ನಡೆಯಬೇಕಿದೆ.