ಯಾವ ಪುರುಷಾರ್ಥಕ್ಕೆ ನೀವು ಸಾಧನಾ ಸಮಾವೇಶ ಮಾಡುತ್ತಿದ್ದೀರಿ ಮುಖ್ಯಮಂತ್ರಿಗಳೇ? ಇವತ್ತು ಗ್ರೇಟರ್ ಬೆಂಗಳೂರು ವಾಟರ್ ಬೆಂಗಳೂರಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಸ್ವಲ್ಪ ಮಳೆಯಾದರೂ ಬೆಂಗಳೂರು ಮಹಾನಗರ ನೀರಿನಲ್ಲಿ ಮುಳುಗುವಂತಾಗಿದೆ. ಡಿ.ಕೆ.ಶಿವಕುಮಾರ್ ಅವರು ದೊಡ್ಡ ಯೋಜನೆಗಳ ಮಾತನಾಡುತ್ತಾರೆ. ಬೆಂಗಳೂರು ನಗರದಲ್ಲಿ ವೇಗದಿಂದ ಮತ್ತು ಸಕಾಲದಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿಲ್ಲ. ಮೆಟ್ರೊವನ್ನು ತುಮಕೂರಿಗೆ ಒಯ್ಯುವ ಮಾತನಾಡುತ್ತಾರೆ” ಎಂದರು.
“ರಾಜ್ಯ ಸರಕಾರ, ಮುಖ್ಯಮಂತ್ರಿಗಳು ನಾಳೆ ಎರಡು ವರ್ಷಗಳ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ನಿರಂತರವಾಗಿ ಬೆಲೆ ಏರಿಕೆ ಮಾಡುತ್ತ ಬಂದಿದ್ದೀರಿ. ರಾಜ್ಯದಲ್ಲಿ ಭ್ರಷ್ಟಾಚಾರ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಸತತವಾಗಿ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಕ್ಕೆ ರೈತರಿಗೆ ಯಾವುದೇ ಹೊಸ ಯೋಜನೆ ನೀಡಲು ಸಾಧ್ಯವಾಗಿಲ್ಲ. ಮಹಿಳೆಯರಿಗೆ ಯಾವುದೇ ಅಭಿವೃದ್ಧಿ ಯೋಜನೆ ಪ್ರಕಟಿಸಿಲ್ಲ; ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿ ಸ್ವಾಭಿಮಾನದ ಬದುಕನ್ನು ನೀಡಿಲ್ಲ” ಎಂದು ಆಕ್ಷೇಪಿಸಿದರು.
ಅಭಿವೃದ್ಧಿ ಸಂಪೂರ್ಣ ಸ್ಥಗಿತ
“ಅಭಿವೃದ್ಧಿ ಎಂಬುದು ಸಂಪೂರ್ಣವಾಗಿ ನಿಂತುಹೋಗಿದೆ. ಎರಡು ವರ್ಷದಲ್ಲಿ ಏನು ಮಾಡಿದ್ದಾರೆ? ಆಡಳಿತ ಪಕ್ಷದ ಶಾಸಕರು ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂದು ಬೇಸತ್ತಿರುವುದು ಜಗಜ್ಜಾಹೀರಾಗಿದೆ. ಮೊದಲ ಬಾರಿ ಗೆದ್ದ ಶಾಸಕರಾದ ನಾವು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಶಾಲಾ ಕೊಠಡಿ ಕಟ್ಟಿಸಲೂ ಸಾಧ್ಯವಾಗುತ್ತಿಲ್ಲ. ಶಾಸಕರಿಗೆ ಆಸ್ಪತ್ರೆಗಳಿಗೆ ಮೂಲಸೌಕರ್ಯ ಕೊಡಲಾಗುತ್ತಿಲ್ಲ. ನೀರಾವರಿ ಸೌಕರ್ಯ ನೀಡಲು ಆಗುತ್ತಿಲ್ಲ. ಇಷ್ಟೆಲ್ಲ ಇದ್ದರೂ ರಾಜ್ಯ ಸರಕಾರ ದುಂದು ವೆಚ್ಚ ಮಾಡುತ್ತಿದೆ. ಸರಕಾರದ ಬಗ್ಗೆ ರಾಜ್ಯದ ಜನರು ನಗುತ್ತಿದ್ದಾರೆ. ಸರಕಾರದ ನಡವಳಿಕೆಯನ್ನು ಜನರು ಟೀಕಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಶೂನ್ಯ ಸಾಧನೆಯ ಸಾಧನಾ ಸಮಾವೇಶ
“ಇದೊಂದು ಭಂಡ ಸರಕಾರ. ಜಾಹೀರಾತು ನೀಡುವ ಜಾಹೀರಾತಿನ ಸರಕಾರ ಇದು. ಗ್ಯಾರಂಟಿಗಳನ್ನೂ ಸರಿಯಾಗಿ ತಲುಪಿಸದೆ ನಾಡಿನ ಜನರಿಗೆ ಮೋಸ ಮಾಡಿದ್ದಾರೆ. ಶೂನ್ಯ ಸಾಧನೆಯ ಸಾಧನಾ ಸಮಾವೇಶ. ರಾಜ್ಯದ ಜನರಿಗೆ ಈ ಸರಕಾರದ ಬಗ್ಗೆ ಏನೂ ಒಳ್ಳೆಯ ಅಭಿಪ್ರಾಯ ಇಲ್ಲ. ಗ್ಯಾರಂಟಿಗಳನ್ನು ಪೂರೈಸಲು ಹಣ ಹೊಂದಿಸುವುದನ್ನು ಸರಕಾರ ಮಾಡಲೇಬೇಕು. ಆದರೆ, ಗ್ಯಾರಂಟಿ ಕೊಡುವುದೇ ಸಾಧನೆಯೇ? ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸ ಆಗಬಾರದೇ? ಶಾಸಕರು ತಲೆ ಎತ್ತಿಕೊಂಡು ಓಡಾಡಲು ಆಗದ ಸ್ಥಿತಿ ಬಂದಿದೆ” ಎಂದರು.