ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಲೇ ಬಂದಿದೆ. ಈಗಾಗಲೇ ‘ಅನ್ನಭಾಗ್ಯ’, ‘ಗೃಹ ಜ್ಯೋತಿ’ ಮತ್ತು ‘ಶಕ್ತಿ’ ಯೋಜನೆ ಜಾರಿ ಮಾಡಿದ್ದು, ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ, ಈ ಕುರಿತು ಬಿಜೆಪಿ ಮಾತ್ರ ಟೀಕೆಯನ್ನು ಮುಂದುವರಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, “ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಎಟಿಎಂ ಸರ್ಕಾರದ ಎಡಬಿಡಂಗಿ ನಿರ್ಧಾರಗಳು” ಎಂದು ‘ಗೃಹಜ್ಯೋತಿ’ ಯೋಜನೆ ಬಗ್ಗೆ ಕುಹಕವಾಡಿದೆ. “ಗೃಹಜ್ಯೋತಿ ತಲೆಮೇಲೆ ಟೋಪಿ. ಎಲ್ಲರಿಗೂ ಫ್ರೀ 200 ಯುನಿಟ್ ವಿದ್ಯುತ್ ಎಂದು ಹೇಳಿದ್ದರು. ಆದರೆ, ಹೊಸ ಮನೆ ನಿರ್ಮಿಸಿಕೊಂಡವರಿಗೆ, ಬಾಡಿಗೆದಾರರಿಗೆ ಉಚಿತ ವಿದ್ಯುತ್ ಇಲ್ಲ” ಎಂದು ಕುಟುಕಿದೆ.
“ಜುಲೈ ಅಥವಾ ಆಗಸ್ಟ್ ತಿಂಗಳಿಂದ ಉಚಿತ ವಿದ್ಯುತ್ ನೀಡಲಾಗುವುದು ಎಂದಿದ್ದರು. ಜೂನ್ 17 ಮತ್ತು 18 ರಂದು ಹಾಕಿದ ಅರ್ಜಿಗಳು ಸ್ವೀಕೃತಗೊಂಡಿಲ್ಲ, ಸರ್ವರ್ ಬ್ಯೂಸಿ ಅರ್ಜಿಗಳು ಸ್ವೀಕಾರ ಆಗುತ್ತಿಲ್ಲ. ಗೃಹ ಜ್ಯೋತಿ ಕೊಡುವ ಮುನ್ನವೇ ಮತ್ತೆ ಹೆಚ್ಚುವರಿ 200 ರೂ. ವಿದ್ಯುತ್ ಬಿಲ್ ಪಾವತಿಸಬೇಕುದೆ” ಎಂದು ಟೀಕಸಿದೆ.
“ಅನ್ನಭಾಗ್ಯ ಯೋಜನೆ ಹೆಸರಿನಲ್ಲಿ ಜನರ ಕಿವಿ ಮೇಲೆ ಲಾಲ್ ಬಾಗ್ ಇಡಲಾಗಿದೆ. ಎಲ್ಲರಿಗೂ 10 ಕೆಜಿ ಅಕ್ಕಿ ಉಚಿತ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ, ಕಾಂಗ್ರೆಸ್ ಈಗ ನೀಡುತ್ತಿರುವ ಕಾರಣಗಳು 5 ಕೆಜಿ ಅಕ್ಕಿ ಎಫ್‌ಸಿಐ ಕೊಡುತ್ತಿಲ್ಲ. ಯಾವ ರಾಜ್ಯದಲ್ಲೂ ಅಕ್ಕಿ ಸಿಗುತ್ತಿಲ್ಲ. 5 ಕೆಜಿ ಕೇಂದ್ರ ಸರ್ಕಾರದ ಅಕ್ಕಿ ಜತೆ 5 ಕೆಜಿ ಅಕ್ಕಿ ಹಣ. 5 ಕೆಜಿ ಮೋದಿ ಸರ್ಕಾರದ ಅಕ್ಕಿಯಲ್ಲಿ ಎಟಿಎಂ ಸರ್ಕಾರಕ್ಕೆ 2 ಕೆಜಿ ಕಮಿಷನ್. ಪಡಿತರ ಚೀಟಿದಾರರಿಗೆ ಕೇವಲ 3 ಕೆಜಿ ಅಕ್ಕಿ ಮಾತ್ರ ವಿತರಣೆ ಮಾಡಲಾಗುತ್ತಿದೆ” ಎಂದು ಬಿಜೆಪಿ ಆರೋಪಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಪ್ರತಿಪಕ್ಷಗಳ ಸಭೆಗೆ ಹಾಜರಾಗಲಿರುವ ಮಮತಾ ಬ್ಯಾನರ್ಜಿ; ಔತಣಕೂಟಕ್ಕೆ ಗೈರು
ಜನತೆ ಹೊಟ್ಟೆ ತುಂಬಾ ಊಟ ಮಾಡಲು ಯೋಚಿಸುವಂತಾಗಿದೆ
“ರಾಜ್ಯದ ಎಟಿಎಂ ಸರ್ಕಾರದ ಆಡಳಿತದಲ್ಲಿ ಜನತೆ ಹೊಟ್ಟೆ ತುಂಬಾ ಒಂದೊಪ್ಪತ್ತಿನ ಊಟ ಮಾಡಲು ಎರೆಡೆರಡು ಬಾರಿ ಯೋಚಿಸುವಂತಾಗಿದೆ. ತರಕಾರಿ, ಹಾಲು, ದಿನಸಿ ಪದಾರ್ಥಗಳ ಬೆಲೆ ಕಾಂಗ್ರೆಸ್ ಸರ್ಕಾರದಡಿಯಲ್ಲಿ ಏರಿದೆ, ಇನ್ನೂ ಏರಲಿದೆ. ಇಷ್ಟು ಸಾಲದ್ದಕ್ಕೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈಗ ಆ ಪಟ್ಟಿಗೆ ಮೀನುಗಳ ದರವೂ ಸೇರಿದ್ದು, ಮಾಂಸಹಾರಿಗಳ ಜೇಬು ಬರಿದಾಗುತ್ತಿದೆ” ಎಂದು ಬೆಲೆ ಏರಿಕೆ ವಿರುದ್ಧ ಬಿಜೆಪಿ ಕಿಡಿ ಕಾರಿದೆ.
ಜನರು ಅವರಿಗೆ ವಿರೋಧ ಪಕ್ಷದ ಪಟ್ಟ ಕೊಟ್ಟಿದ್ದು ಅದಕ್ಕಾಗಿ ಅಲ್ಲವೇ…?