- ಗ್ಯಾರಂಟಿ ಜಾರಿ ಸಲುವಾಗಿ ಸಂಪುಟ ಸಭೆ ಕರೆದ ಸಿದ್ದರಾಮಯ್ಯ
- ಗ್ಯಾರಂಟಿ ಯೋಜನೆಗಳಲ್ಲಿ ಬಿಪಿಎಲ್ ಕುಟುಂಬಕ್ಕೆ ಆದ್ಯತೆ
ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ 5 ಗ್ಯಾರಂಟಿ ಯೋಜನೆಗಳು ಷರತ್ತುಗಳೊಂದಿಗೆ ಜಾರಿಯಾಗುವ ಸುಳಿವನ್ನು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಷರತ್ತುಗಳು ಇಲ್ಲದೆ ಸರ್ಕಾರಿ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ. ಬಿಪಿಎಲ್ ಕಾರ್ಡ್ ಇರುವವರಿಗೆ ಇದರಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ” ಎಂದು ಹೇಳಿದರು.
“ಇಂದಿನ ಸಂಪುಟ ಸಭೆಯಲ್ಲಿ ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಗ್ಯಾರಂಟಿ ಬಗ್ಗೆ ಸಿಎಂ ಹಲವು ಸಭೆ ನಡೆಸಿದ್ದಾರೆ. ಅಧಿಕಾರಿಗಳು ಹಾಗೂ ಸಚಿವರ ಜತೆಗೆ ಸಿಎಂ ಚರ್ಚಿಸಿದ್ದಾರೆ. ಇಂದಿನ ಸಂಫುಟ ಸಭೆಯಲ್ಲಿ ಎಲ್ಲಾ ಅಂತಿಮವಾಗುತ್ತೆ. ಆರ್ಥಿಕ ನೀಲನಕ್ಷೆ, ಅನುಷ್ಟಾನದ ಬಗ್ಗೆ ಚರ್ಚೆ ಮಾಡುತ್ತೇವೆ” ಎಂದರು.
ಇದೇ ವೇಳೆ ಯೋಜನೆ ಜಾರಿ ವಿಚಾರದಲ್ಲಿ ಟೀಕೆ ಮಾಡುತ್ತಿರುವ ವಿಪಕ್ಷಗಳತ್ತ ಚಾಟಿ ಬೀಸಿದ ಪ್ರಿಯಾಂಕ್ ಖರ್ಗೆ, “ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಹೀಗಾಗಿ ಟೀಕಿಸುವವರು ಮೊದಲು ನಾವೇನು ಮಾಡುತ್ತೇವೆ ಎನ್ನುವುದನ್ನು ನೋಡಿಕೊಂಡು ಆಮೇಲೆ ನಮ್ಮ ಬಗ್ಗೆ ಮಾತನಾಡಲಿ” ಎಂದರು.