ರಾಜ್ಯದಲ್ಲಿ ಜಾರಿಯಾಗುತ್ತಿರುವ ಗ್ಯಾರಂಟಿ ಯೋಜನೆಗಳು ನಾನು ರೂಪಿಸಿದ್ದ ಯೋಜನೆಗಳು. ಅವುಗಳನ್ನು ಕಾಂಗ್ರೆಸ್ನವರು ಕಾಪಿ ಮಾಡಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಚುನಾವಣೆಗೂ ಮೂರು ತಿಂಗಳ ಮುಂಚೆ ನಾನು ಪಕ್ಷವನ್ನು ಸ್ಥಾಪಿಸಿದೆ. ಆ ಸಮಯಲ್ಲಿಯೇ ಹಲವು ಯೋಜನೆಗಳನ್ನು ರೂಪಿಸಿದ್ದೆ. ಅವುಗಳು ಯಾವುದೋ ಮೂಲದಿಂದ ಸಿದ್ದರಾಮಯ್ಯ ಅವರ ಕಿವಿಗೆ ಬಿದ್ದಿವೆ. ಅವುಗಳನ್ನು ಕಾಂಗ್ರೆಸ್ನವರು ಗ್ಯಾರಂಟಿ ಯೋಜನೆಗಳನ್ನಾಗಿ, ಜಾರಿಗೆ ತರುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಚುನಾವಣೆಗೆ ನಾವು ಸಿದ್ಧತೆ ನಡೆಸುತ್ತಿದ್ದಾಗಲೇ, ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ಮಾಸಾಶನ, ನಿರುದ್ಯೋಗಿಗಳಿಗೆ ಮಾಸಾಶಾನ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆಗಳನ್ನು ಘೋಷಣೆ ಮಾಡಿದ್ದೆ. ಅವುಗಳನ್ನು ಕಾಂಗ್ರೆಸ್ನವರು ಕಾಪಿ ಮಾಡಿ, ಜಾರಿಗೆ ತರುತ್ತಿದ್ದಾರೆ” ಎಂದು ರೆಡ್ಡಿ ಹೇಳಿಕೊಂಡಿದ್ದಾರೆ.
“ರಾಜ್ಯದ ಪ್ರತಿ ಕುಟುಂಬವು ಆರ್ಥಿಕವಾಗಿ ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ನಾನಾ ಸವಲತ್ತುಗಳನ್ನು ನೀಡುತ್ತಿದೆ. ಎಲ್ಲರೂ ಅವುಗಳ ಲಾಭ ಪಡೆದುಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ ಬೋಗಾವತಿ, ತಾಲೂಕು ಪಂಚಾಯಿತಿ, ಇಒ ಲಕ್ಷ್ಮೀದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಹತ್ತಿಮರದ, ಉಪಾಧ್ಯಕ್ಷ ಗೌಸ್ಸಾಬ್, ಪ್ರಮುಖರಾದ ಸುರೇಶ ಕೊರೆ, ರೋಹಿಣಿ ಕೊಟಗಾರ್, ಮಹಾಂತಗೌಡ ಪಾಟೀಲ್, ಕಾಶೀನಾಥ ಹಂಚಿನಾಳ ಸೇರಿದಂತೆ ಹಲವರು ಇದ್ದರು.