ಗುಜರಾತ್‌ನ ಗಾಂಧಿನಗರ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ 5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಇನ್ನು ಹಾವು-ಏಣಿ ಆಟ ಅನುಭವಿಸುತ್ತಿದ್ದಾರೆ.
ಅಮಿತಾ ಶಾ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸೋನಾಲ್ ಪಟೇಲ್ ಸ್ಪರ್ಧೆಗಿಳಿದಿದ್ದರು. ಗುಜರಾತಿನ ಗಾಂಧಿನಗರವು ರಾಜಧಾನಿ ಮಾತ್ರವಲ್ಲದೆ, ಮಹತ್ವದ ರಾಜಕೀಯ ಕೇಂದ್ರವೂ ಆಗಿದೆ. ಕಳೆದ 30 ವರ್ಷಗಳಿಂದ ಇದು ಬಿಜೆಪಿಯ ಭದ್ರಕೋಟೆಯಾಗಿದೆ. ಪ್ರತಿಷ್ಠಿತ ನಾಯಕರ ಪ್ರಾತಿನಿಧ್ಯವನ್ನು ಕಂಡಿದೆ. ಅಟಲ್ ಬಿಹಾರಿ ವಾಜಪೇಯಿ, ಎಲ್‌ಕೆ ಅಡ್ವಾಣಿ ಮತ್ತು ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹವರು ಈ ಕ್ಷೇತ್ರವನ್ನು ಸಂಸತ್‌ನಲ್ಲಿ ಪ್ರತಿನಿಧಿಸಿದ್ದಾರೆ.
ಗುಜರಾತಿನ 26ರ ಪೈಕಿ 25 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. ಸೂರತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತವಾದ ಹಿನ್ನೆಲೆ ಬಿಜೆಪಿಯ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗಾಂಧಿನಗರ ಲೋಕಸಭಾ ಕ್ಷೇತ್ರದ ಮೊದಲ ಸುತ್ತಿನಿಂದಲೂ ಅಮಿತ್ ಶಾ ಮುನ್ನಡೆ ಕಾಯ್ದುಕೊಂಡು ಬಂದಿದ್ದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ ಫಲಿತಾಂಶ | ಪಂಜಾಬ್ ಮತ್ತು ಹರಿಯಾಣದಲ್ಲಿ ಬಿಜೆಪಿಗೆ ಹಿನ್ನಡೆ
ಇತ್ತ ಪೋರಬಂದರ್ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಹ ಭಾರೀ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ 2-3 ಕ್ಷೇತ್ರಗಳನ್ನು ಮುನ್ನಡೆಯನ್ನು ಹೊಂದಿದೆ.
ವಾರಣಾಸಿಯಲ್ಲಿ ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಮುನ್ನಡೆ ಸಾಧಿಸಿದ್ದರು. ಆನಂತರ, ಮೋದಿ ಮುನ್ನಡೆ ಗಳಿಸಿದ್ದಾರೆ. ಈ ಹಿಂದೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಮೋದಿಗೆ ಈ ಬಾರಿ ಶಾಕ್ ಆಗಿದೆ. ಉತ್ತರ ಪ್ರದೇಶದಲ್ಲಿ ಒಟ್ಟಾರೆ ಬಿಜೆಪಿಗೆ ಹಿನ್ನಡೆಯಾಗಿದೆ.