ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಮತದಾನವು ರಾಷ್ಟ್ರ ನಿರ್ಮಾಣದಲ್ಲಿ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
2024ರ ಮಾರ್ಚ್ 15ರಿಂದ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗದಲ್ಲಿ ಆಯುಕ್ತರಾಗಿದ್ದರು. ಕಳೆದ ನಾಲ್ಕೂವರೆ ವರ್ಷಗಳಿಂದ ಮುಖ್ಯ ಆಯುಕ್ತರಾಗಿದ್ದ ರಾಜೀವ್ ಕುಮಾರ್ ಅವರ ಅಧಿಕಾರವಧಿ ಮುಗಿದ ಬಳಿಕ, ಆ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ನೇಮಕವಾಗಿದ್ದಾರೆ. ಇನ್ನು, ನಾಲ್ಕೂವರೆ ವರ್ಷಗಳ ಕಾಲ ಚುನಾವಣಾ ಆಯೋಗವನ್ನು ಮುನ್ನಡೆಸಲಿದ್ದಾರೆ.
“ರಾಷ್ಟ್ರ ನಿರ್ಮಾಣಕ್ಕೆ ಮೊದಲ ಹೆಜ್ಜೆ ಮತದಾನ. ಆದ್ದರಿಂದ, 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯರೂ ಮತದಾರರಾಗಬೇಕು ಮತ್ತು ಮತ ಚಲಾಯಿಸಬೇಕು. ಭಾರತದ ಸಂವಿಧಾನದಲ್ಲಿ ನೀಡಲಾದ ಚುನಾವಣಾ ಕಾನೂನುಗಳು, ನಿಯಮಗಳು ಮತ್ತು ಸೂಚನೆಗಳಿಗೆ ಅನುಗುಣವಾಗಿ ಚುನಾವಣಾ ಆಯೋಗವು ಮತದಾರರೊಂದಿಗಿದೆ. ಮುಂದೆಯೂ ಇರುತ್ತದೆ” ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಜ್ಞಾನೇಶ್ ಕುಮಾರ್ ಅವರ ಬಡ್ತಿಯಿಂದ ತೆರವಾಗಿರುವ ಚುನಾವಣಾ ಆಯುಕ್ತರ ಹುದ್ದೆಗೆ ಹರಿಯಾಣ ಮುಖ್ಯ ಕಾರ್ಯದರ್ಶಿಯಾಗಿದ್ದ ವಿವೇಕ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ. ಅವರೂ ಕೂಡ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿದ್ದ ಆಯ್ಕೆ ಸಮಿತಿಯು ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಆಯುಕ್ತರ ಹುದ್ದೆಗೆ ಶಿಫಾರಸು ಮಾಡಿತ್ತು. ಶಿಫಾರಸಿನ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಆದಾಗ್ಯೂ, ಮುಖ್ಯ ಚುನಾವಣಾ ಆಯುಕ್ತರ ನೇಮಕ ಮತ್ತು ನೇಮಕ ಪ್ರಕ್ರಿಯೆಯ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಿತಿಯಲ್ಲಿ ಆಡಳಿತ ಪಕ್ಷದ ಪರವಾಗಿ ಇಬ್ಬರು ಸದಸ್ಯರಿದ್ದರೆ, ಆಯ್ಕೆ ಮತ್ತು ನೇಮಕಾತಿಯೂ ಸರ್ಕಾರ ಅಥವಾ ಆಡಳಿತ ಪಕ್ಷದ ಧೋರಣೆಗೆ ತಕ್ಕಂತೆಯೇ ಇರುತ್ತದೆ. ಹಿಂದೆ ಇದ್ದಂತೆ, ಸಮಿತಿಯಲ್ಲಿ ಪ್ರಧಾನಿ, ವಿಪಕ್ಷ ನಾಯಕ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯೇ ಇರಬೇಕೆಂದು ವಾದಿಸಿದ್ದಾರೆ.
ಸುಪ್ರೀಂ ಕೋರ್ಟ್ ಸಿಜೆಐ ಅವರನ್ನು ಹೊರಗಿಟ್ಟು, ಕೇಂದ್ರ ಸಚಿವರನ್ನು ಒಳಗೊಂಡು ಸಮಿತಿ ರಚಿಸುವ 2023ರ ತಿದ್ದುಪಡಿ ಕಾನೂನನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಫೆಬ್ರವರಿ 19ರಂದು ವಿಚಾರಣೆ ನಡೆಯಲಿದೆ. ವಿಚಾರಣೆ ಮುಗಿಯದೆಯೇ ಚುನಾವಣಾ ಆಯುಕ್ತರನ್ನು ನೇಮಿಸಬಾರದು. ಆಯ್ಕೆ ಮಾಡುವ ಸಮತಿ ಸಭೆಯನ್ನು ಮುಂದೂಡಬೇಕೆಂದು ರಾಹುಲ್ ಗಾಂಧಿ ವಾದಿಸಿದ್ದರು. ಆದಾಗ್ಯೂ, ಕೇಂದ್ರ ಸರ್ಕಾರವು ರಾತ್ರೋರಾತ್ರಿ ಚುನಾವಣಾ ಮುಖ್ಯ ಆಯುಕ್ತರನ್ನು ನೇಮಿಸಿದೆ. ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ. ಇದೀಗ, ಜ್ಞಾನೇಶ್ ಕುಮಾರ್ ಅಧಿಕಾರವನ್ನೂ ಸ್ವೀಕರಿಸಿದ್ದಾರೆ.