ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ, ಬಿಜೆಪಿ ಸಂಸದ, ರೆಸ್ಲಿಂಗ್ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ‘ಪ್ರಧಾನಿ ಮೋದಿ ಅವರು ಬ್ರಿಜ್ ಭೂಷಣ್ ಸಿಂಗ್ ಅವರನ್ನು ಏಕೆ ರಕ್ಷಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದೆ.
ಟ್ವೀಟರ್‌ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬ್ರಿಜ್ ಭೂಷಣ್ ವಿರುದ್ಧ ಮಹಿಳಾ ಕುಸ್ತಿಪಟುಗಳ ಬಲವಾದ ಆರೋಪಗಳಿದ್ದರೂ ಮೋದಿ ಸರ್ಕಾರ ಅವರನ್ನು ರಕ್ಷಿಸುತ್ತಿದೆ” ಎಂದು ಆರೋಪಿಸಿದೆ.
“ಬ್ರಿಜ್ ಭೂಷಣ್ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಆದರೂ, ಮಹಿಳೆಯರನ್ನು ಗೌರವಿಸುತ್ತೇವೆ ಎಂದು ಬಿಂಬಿಸಿಕೊಳ್ಳುವ ಮೋದಿ ಸರ್ಕಾರ ಲೈಂಗಿಕ ಶೋಷಣೆ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಪರವಾಗಿ ನಿಂತಿದೆ. ಇಂದಿಗೂ ಅದೇ ಪ್ರಶ್ನೆ ಕಾಡುತ್ತಿದೆ – ‘ಬ್ರಿಜ್ ಭೂಷಣ್ ಅನ್ನು ಪ್ರಧಾನಿ ಮೋದಿ ಏಕೆ ರಕ್ಷಿಸುತ್ತಿದ್ದಾರೆ?'” ಎಂದು ಕಾಂಗ್ರೆಸ್ ಹೇಳಿದೆ.
ಪ್ರಕರಣ ಸಂಬಂಧ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ದೆಹಲಿ ಪೊಲೀಸರ ಹೇಳಿಕೆಯನ್ನು ಆಲಿಸಿದೆ. ದೆಹಲಿ ಪೊಲೀಸರನ್ನು ಪ್ರತಿನಿಧಿಸಿದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ, “ಬ್ರಿಜ್ ಭೂಷಣ್ ಸಿಂಗ್ ಅವರು ಅವಕಾಶ ಸಿಕ್ಕಾಗೆಲ್ಲ ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಲು ಯತ್ನಿಸುತ್ತಿದ್ದರು. ಅವರ ನಡತೆಯು ಉದ್ದೇಶಪೂರ್ವಕ ಮತ್ತು ದುರುದ್ದೇಶದಿಂದ ಕೂಡಿತ್ತು” ಎಂದು ಒತ್ತಿ ಹೇಳಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್ ವಿಜೇತ ಭಾರತೀಯ ಕುಸ್ತಿಪಟುಗಳ ನೇತೃತ್ವದಲ್ಲಿ ಕುಸ್ತಿಪಟುಗಳು ಒಂದು ತಿಂಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ, ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಜೂನ್ 15ರಂದು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಆರು ಬಾರಿ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 354 (ಮಹಿಳೆಯರ ಮೇಲೆ ದೌರ್ಜನ್ಯ), 354A (ಲೈಂಗಿಕ ಕಿರುಕುಳ), 354D (ಹಿಂಬಾಲಿಸುವಿಕೆ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.