ಹರಿಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ 67 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ (ಸೆಪ್ಟೆಂಬರ್ 4) ಬಿಡುಗಡೆ ಮಾಡಿದೆ. ಮೊದಲ ಪಟ್ಟಿ ಬಿಡುಗಡೆಯಾಗುತ್ತಿಲೇ ರಾಜ್ಯ ಬಿಜೆಪಿಯ ಹಲವಾರು ಮಹಿಳಾ ನಾಯಕರು, ಕ್ಯಾಬಿನೆಟ್ ಸಚಿವರು, ಹಾಲಿ ಶಾಸಕರು ಹಾಗೂ ಒಬಿಸಿ ಸಮುದಾಯದ ನಾಯಕರು ತಮ್ಮ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ಬುಧವಾರ ಸಂಜೆಯೇ ತಮ್ಮದೇ ಪಕ್ಷದ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ.
67 ಕ್ಷೇತ್ರಗಳಿಗೆ ಪ್ರಕಟವಾಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಬರೋಬ್ಬರಿ 40 ಕ್ಷೇತ್ರಗಳಲ್ಲಿ ಹಿಂದಿನ ಅಭ್ಯರ್ಥಿಗಳು ಮತ್ತು ಹಾಲಿ ಶಾಸಕರನ್ನು ಕೈಬಿಡಲಾಗಿದೆ. ಆ ಕ್ಷೇತ್ರಗಳಲ್ಲಿ ಹೊಸಬರಿಕೆ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ 9 ಹಾಲಿ ಶಾಸಕರನ್ನು ಕೈಬಿಡಲಾಗಿದೆ. ಇನ್ನೂ, 33 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಬೇಕಿದ್ದು, ಅವರಲ್ಲಿಯೂ ಹಲವರಿಗೆ ಕೋಕ್ ನೀಡುವ ಸಾಧ್ಯತೆಗಳಿವೆ.
2014ರಿಂದ ಸತತ ಎರಡು ಅವಧಿಗಳಲ್ಲಿ ಹರಿಯಾಣದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿದೆ. ಅದಾಗ್ಯೂ, ಆಡಳಿತ ವಿರೋಧಿ ಅಲೆ ಮತ್ತು ಕಾಂಗ್ರೆಸ್‌ನಲ್ಲಿ ಪುನಾರಾವರ್ತನೆಯಾಗುತ್ತಿರುವ ಪ್ರಾಬಲ್ಯವು ಬಿಜೆಪಿಗೆ ಭಾರೀ ಸವಾಲಾಗಿ ಎದುರಾಗಿದೆ.
ಬಿಜೆಪಿಯ 10 ವರ್ಷಗಳ ಆಡಳಿತದಲ್ಲಿ ಜನರು ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಇದೇ ಅಸಮಾಧಾನದ ಕಾರಣದಿಂದಾಗಿ ಕಳೆದ ಮಾರ್ಚ್‌ನಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ಬದಲಿಸಿತು. ಮುಖ್ಯಮಂತ್ರಿಯಾಗಿದ್ದ ಮನೋಹರ್ ಲಾಲ್ ಖಟ್ಟರ್ ಅವರನ್ನು ಇಳಿಸಿ, ನಯಾಬ್ ಸಿಂಗ್ ಸೈನಿ ಅವರನ್ನು ಆ ಹುದ್ದೆಗೆ ನೇಮಿಸಿತು. ಅದಕ್ಕೂ ಮುನ್ನ, 2020-21ರಲ್ಲಿ ನಡೆದ ರೈತ ಹೋರಾಟದ ಸಮಯದಲ್ಲಿ ರೈತರ ಮೇಲೆ ಹರಿಯಾಣ ಸರ್ಕಾರ ದೌರ್ಜನ್ಯ ಎಸಗಿತ್ತು. ಇದು, ಹರಿಯಾಣದಲ್ಲಿ ಪ್ರಾಬಲ್ಯತೆ ಹೊಂದಿರುವ ಜಾಟ್ ಸಮುದಾಯವೂ ಸೇರಿದಂತೆ ರೈತ, ಕೃಷಿ ಕಾರ್ಮಿಕರು ಬಿಜೆಪಿ ವಿರುದ್ಧ ಆಕ್ರೋಶಗೊಳ್ಳುವಂತೆ ಮಾಡಿದೆ. ರಾಜ್ಯದ ಜನರು ಬಿಜೆಪಿ ವಿರುದ್ಧವಿದ್ದಾರೆ ಎಂಬುದನ್ನು ಈಗಾಗಲೇ ಕಳೆದ ಲೋಕಸಭಾ ಚುನಾವಣೆ ಸೂಚಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಎಲ್ಲ 10 ಸಂಸದ ಸ್ಥಾನಗಳನ್ನೂ ಗೆದ್ದುಕೊಂಡಿದ್ದ ಬಿಜೆಪಿ, ಈ ಬಾರಿಯ ಚುನಾವಣೆಯಲ್ಲಿ 5 ಸ್ಥಾನಗಳನ್ನು ಕಳೆದುಕೊಂಡಿದೆ. ಆ 5 ಸ್ಥಾನಗಳನ್ನು ಕಾಂಗ್ರೆಸ್ ದೋಚಿಕೊಂಡಿದೆ.
ಜೊತೆಗೆ, ಎಎಪಿ ಕೂಡ ಹರಿಯಾಣದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ವಿಧಾನಸಭಾ ಚುನಾವಣೆಗೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು, ಟಿಕೆಟ್ ಹಂಚಿಕೆಯ ಮಾತುಕತೆ ನಡೆಸುತ್ತಿದೆ. ಬಿಎಸ್‌ಪಿ ಕೂಡ ಹರಿಯಾಣದಲ್ಲಿ ತನ್ನ ನೆಲೆಯನ್ನು ಗುರುತಿಸಿಕೊಳ್ಳಲು ಐಎನ್‌ಎಲ್‌ಡಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ, ಹರಿಯಾಣದಲ್ಲಿ ಭಾರೀ ಪೈಪೋಟಿ ನಡೆಯಲಿದೆ.
ಇಂತಹ ಸಂದರ್ಭದಲ್ಲಿ ಬಿಜೆಪಿಗೆ ಆಂತರಿಕ ಬಂಡಾಯವು ಬೃಹದಾಕಾರದ ಸಮಸ್ಯೆಯಾಗಿ ಎದುರುಗೊಂಡಿದೆ. ಹರಿಯಾಣದಲ್ಲಿ ಅಕ್ಟೋಬರ್ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ಬಿಜೆಪಿ ತನ್ನೊಳಗಿನ ಆಂತರಿಕ ಬಂಡಾಯವನ್ನು ಶಮನ ಮಾಡುವಲ್ಲಿ ವಿಫಲವಾದರೆ, ಪಕ್ಷವು ಅಧಿಕಾರದಿಂದ ದೂರ ಉಳಿಯುವುದು ಬಹುತೇಕ ಖಚಿತವೆಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಅದಾಗ್ಯೂ, ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಹಲವಾರು ಹಾಲಿ ಸಚಿವ, ಶಾಸಕರು ಬಂಡಾಯ ಎದ್ದಿದ್ದಾರೆ. ಹೊಸದಾಗಿ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಿರುವುದರ ವಿರುದ್ಧ ಹಲವರು ಸಿಟ್ಟಾಗಿದ್ದಾರೆ. ಪಕ್ಷದ ಸಂಘಟನೆಗಾಗಿ ದುಡಿದ ಕಾರ್ಯಕರ್ತರು, ಮುಖಂಡರು ಬದಿಗಿಟ್ಟು, ಹೊರಗಿನವರಿಗೆ, ಹೊಸದಾಗಿ ಬಂದವರಿಗೆ ಟಿಕೆಟ್ ನೀಡಲಾಗಿದೆ ಎಂದು ಹಲವಾರು ಮುಖಂಡರು ಆರೋಪಿಸಿದ್ದಾರೆ.

ಹರಿಯಾಣ ವಿದ್ಯುತ್/ಇಂಧನ ಸಚಿವ ರಂಜಿತ್ ಸಿಂಗ್ ಚೌತಾಲಾ ಸೇರಿದಂತೆ ಹಲವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿಯೂ ಬಿಜೆಪಿ ಟಿಕೆಟ್ ನೀಡದ ಕಾರಣ ಚೌತಾಲಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ರಾನಿಯಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆದ್ದಿದ್ದರು. ಬಳಿಕ, ಬಿಜೆಪಿ ಸೇರಿ ಸಚಿವರಾಗಿದ್ದರು. ಇದೀಗ, ಮತ್ತೆ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ.
ಮಾಜಿ ಉಪಪ್ರಧಾನಿ ದೇವಿ ಲಾಲ್ ಅವರ ಪುತ್ರ ಚೌತಾಲಾ ಅವರು ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೊಷಿಸಿದ್ದಾರೆ. ರಾನಿಯಾ ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಶಿಶ್ಪಾಲ್ ಕಾಂಬೋಜ್ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ.
ಚರ್ಖಿ ದಾದ್ರಿ ಜಿಲ್ಲೆಯ ಬಧ್ರಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿಯ ಕಿಸಾನ್ ಮೋರ್ಚಾ ರಾಜ್ಯ ಘಟಕದ ಮುಖ್ಯಸ್ಥ ಸುಖವಿಂದರ್ ಶೆಯೋರಾನ್, ತಮ್ಮ ಬದಲು ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ ಎಂದು ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಕಿಸಾನ್ ಮೋರ್ಚಾ ಮತ್ತು ಬಿಜೆಪಿ ಎರಡಕ್ಕೂ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
“ಬಿಜೆಪಿ ಬೇರೆ ಯಾವುದೇ ಸ್ಥಳೀಯ ನಾಯಕರನ್ನು ಆಯ್ಕೆ ಮಾಡಿದ್ದರೆ ನಾನು ಪಕ್ಷದಲ್ಲೇ ಮುಂದುವರೆಯುತ್ತಿದ್ದೆ. ಆದರೆ, ಹೊರಗಿನವರಿಗೆ ಟಿಕೆಟ್ ನೀಡಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾನು 400 ಬೆಂಬಲಿಗರೊಂದಿಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ಶೆಯೋರಾನ್ ಹೇಳಿಕೊಂಡಿದ್ದಾರೆ.
2014ರ ವಿಧಾನಸಭಾ ಚುನಾವಣೆಯಲ್ಲಿ ಶೆಯೋರಾನ್ ಬಿಜೆಪಿ ಟಿಕೆಟ್‌ನಲ್ಲಿ ಗೆದಿದ್ದರು. ಆದರೆ, 2019ರಲ್ಲಿ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ನಾಯಕಿ ನೈನಾ ಚೌತಾಲಾ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು.
ಇನ್ನು, ಮಾಜಿ ಸಚಿವ, ಹಾಲಿ ಶಾಸಕ ಬಿಜೆಪಿಯ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ಕರಣ್ ದೇವ್ ಕಾಂಬೋಜ್ ಕೂಡ ಬಿಜೆಪಿ ಟಿಕೆಟ್ ದೊರೆಯದ ಕಾರಣ, ತನ್ನ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಅವರು, ಯಮುನಾನಗರ ಜಿಲ್ಲೆಯ ರಾಡೌರ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. 2019ರಲ್ಲಿಯೂ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆದ್ದಿದ್ದರು. ಆದರೆ, ಅಲ್ಲಿ, ಈಗ ಅವರ ಬದಲಾಗಿ, ಭಾರತೀಯ ರಾಷ್ಟ್ರೀಯ ಲೋಕದಳದ ಮಾಜಿನಾಯಕ ಶ್ಯಾಮ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ದೀನದಯಾಳ್ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಅವರು ಪ್ರತಿಪಾದಿಸಿದ ಮೂಲ ಸಿದ್ಧಾಂತವನ್ನು ಬಿಜೆಪಿ ಮರೆತಿದೆ ಎಂದು ಆರೋಪಿಸಿರುವ ಕಾಂಬೋಜ್, ರಾಜೀನಾಮೆ ನೀಡಿದ್ದಾರೆ. ಅವರು ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಏತನ್ಮಧ್ಯೆ, ಹಿಸ್ಸಾರ್ ಜಿಲ್ಲೆಯ ಉಕ್ಲಾನಾ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷವು ಬಂಡಾಯ ಎದುರಿಸುತ್ತಿದೆ. ಅಲ್ಲಿನ ಸ್ಥಳೀಯ ನಾಯಕಿ ಸೀಮಾ ಗೈಬಿಪುರ್ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಜೆಜೆಪಿ ಹಾಲಿ ಶಾಸಕ ಅನೂಪ್ ಧನಕ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಗೈಬಿಪುರ್ ರಾಜೀನಾಮೆ ನೀಡಿದ್ದಾರೆ.
ಹೊರಗಿನವರಿಗೆ ಬಿಜೆಪಿ ಟಿಕೆಟ್ ನೀಡಿರುವ ನಿರ್ಧಾರವು ಪಕ್ಷದ ಸ್ಥಳೀಯ ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ನಾವು ಪಕ್ಷ ತೊರೆದಿದ್ದೇವೆ. ಮುಂದಿನ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳುತ್ತೇವೆ ಎಂದು ಸೀಮಾ ಹೇಳಿದ್ದಾರೆ.
ಜಿಂದ್ ಜಿಲ್ಲೆಯ ಸಫಿಡಾನ್ ಶಾಸಕ, ಮಾಜಿ ಸಚಿವ ಬಚನ್ ಸಿಂಗ್ ಆರ್ಯ ಅವರಿಗೆ ಬಿಜೆಪಿ ಟಿಕೆಟ್ ನೀರಾಕಸಿದ್ದು, ಜೆಜೆಪಿಯಿಂದ ಬಿಜೆಪಿಗೆ ಬಂದ ಮಾಜಿ ಶಾಸಕ ರಾಮ್ ಕುಮಾರ್ ಗೌತಮ್ ಅವರಿಗೆ ಟಿಕೆಟ್ ನೀಡಿದೆ. ಹೀಗಾಗಿ, ಆರ್ಯ ಅವರು ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಯೋಜಿಸುತ್ತಿದ್ದಾರೆ. ಸೆ.7ರಂದು ಆರ್ಯ ಅವರು ತಮ್ಮ ಆಪ್ತರು ಮತ್ತು ಬೆಂಬಲಿಗರ ಸಭೆ ಕರೆದಿದ್ದಾರೆ. ಅಲ್ಲಿ, ಮುಂದಿನ ನಡೆಯ ಬಗ್ಗೆ ನಿರ್ಧರಿಸಲಿದ್ದಾರೆ.
ಈ ವರದಿ ಓದಿದ್ದೀರಾ?: ಜಮ್ಮು ಕಾಶ್ಮೀರ ಚುನಾವಣೆ: ಅಭ್ಯರ್ಥಿಗಳನ್ನು ಘೋಷಿಸಿ ಹಿಂತೆಗೆದುಕೊಂಡ ಬಿಜೆಪಿ
ಇನ್ನು, ಪ್ರಮುಖ ಇಬ್ಬರು ಮಹಿಳಾ ನಾಯಕಿಯರಿಗೂ ಬಿಜೆಪಿ ಟಿಕೆಟ್ ನೀಡಿಲ್ಲ. ಮಾಜಿ ಸಚಿವೆ ಕವಿತಾ ಜೈನ್ ಮತ್ತು ಕುರುಕ್ಷೇತ್ರ ಸಂಸದ, ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರ ತಾಯಿ ಸಾವಿತ್ರಿ ಜಿಂದಾಲ್ ಅವರು ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಸಾವಿತ್ರಿ ಅವರು ಹಿಸ್ಸಾರ್ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ಅಲ್ಲಿ, ಬಿಜೆಪಿ ತನ್ನ ಹಾಲಿ ಶಾಸಕ, ಸಚಿವ ಕಮಲ್ ಗುಪ್ತಾ ಅವರನ್ನು ಕಣಕ್ಕಿಳಿಸಿದೆ. ಈಗ, ಸಾವಿತ್ರಿ ಅವರು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೊಷಿಸಿದ್ದಾರೆ.
ಅಲ್ಲದೆ, ಸಾಮಾಜಿಕ ನ್ಯಾಯ, ಸಬಲೀಕರಣ, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಂತ್ಯೋದಯ (ಸೇವಾ) ಖಾತೆಯ ಸಚಿವ ಬಿಷಂಬರ್ ಸಿಂಗ್ ಬಾಲ್ಮಿಕಿ ಅವರು ಭಿವಾನಿ ಜಿಲ್ಲೆಯ ಎಸ್‌ಸಿ-ಮೀಸಲು ಕ್ಷೇತ್ರ ಬವಾನಿ ಖೇರಾದ ಹಾಲಿ ಶಾಸಕರಾಗಿದ್ದಾರೆ. ಅದರೆ, ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಕಪೂರ್ ವಾಲ್ಮೀಕಿ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ, ಅವರೂ ಕೂಡ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ.
ಕಾಂಗ್ರೆಸ್ ಸೇರಿದ ಬಿಜೆಪಿ ಶಾಸಕ
ಬುಧವಾರ ಬಿಜೆಪಿ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ, ಅಸಮಾಧಾನಗೊಂಡ ರಟಿಯಾ ಕ್ಷೇತ್ರದ ಹಾಲಿ ಶಾಸಕ ಲಕ್ಷ್ಮಣ್ ದಾಸ್ ನಾಪಾ ಅವರು ಬಿಜೆಪಿ ತೊರೆದಿದ್ದು, ಕಾಂಗ್ರೆಸ್ ಸೇರದ್ದಾರೆ.