ಹರಿಯಾಣ ವಿಧಾನಸಭಾ ಚುನಾವಣೆಯ ಸಂಪೂರ್ಣ ಫಲಿತಾಂಶ ಇನ್ನೇನು ಹೊರಬೀಳಲಿದೆ. ಆಡಳಿತಾರೂಢ ಬಿಜೆಪಿ ಈಗಾಗಲೇ 14 ಸ್ಥಾನಗಳನ್ನು ಗೆದಿದ್ದು, 36 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮೂರನೇ ಅವಧಿಗೆ ಸರ್ಕಾರ ರಚಿಸಲು ಉತ್ಸುಕವಾಗಿದೆ. ಈ ಫಲಿತಾಂಶವು ಎಲ್ಲ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳನ್ನು ಬುಡಮೇಲು ಮಾಡಿದೆ.
ರೈತ ಹೋರಾಟ, ನಿರುದ್ಯೋಗ, ಭ್ರಷ್ಟಾಚಾರ ಆರೋಪಗಳಿಂದ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಬಿಜೆಪಿ, ಸ್ವತಃ ಸೋಲನ್ನು ಒಪ್ಪಿಕೊಂಡಿತ್ತು. ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಹರಿಯಾಣದಲ್ಲಿ ಕಾಣಿಸಿಕೊಳ್ಳಲಿಲ್ಲ. ಬಿಜೆಪಿಗರು ಡಬ್ಬಲ್ ಎಂಜಿನ್ ಸರ್ಕಾರದ ಬಗ್ಗೆಯೂ ಮಾತನಾಡಲಿಲ್ಲ. ಬಿಜೆಪಿ ನಾಯಕರಿಗೇ ಹರಿಯಾಣದಲ್ಲಿ ಮತ್ತೆ ಗೆಲ್ಲುತ್ತೇವೆಂಬ ವಿಶ್ವಾಸ ಇರಲಿಲ್ಲ. ಆದರೆ, ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಕಾಂಗ್ರೆಸ್‌ನ ಓಟವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿಯ ಈ ಸಾಧನೆ ಬಿಜೆಪಿಗರಿಗೂ ಸೇರಿದಂತೆ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದೆ. ಗಮನಾರ್ಹವಾಗಿ, ಮತ ಹಂಚಿಕೆಯಲ್ಲಿ ಕಾಂಗ್ರೆಸ್ – ಬಿಜೆಪಿ ಬಹುತೇಕ ಒಂದೇ ಆಗಿವೆ. ಬಿಜೆಪಿ 39% ಮತ ಹಂಚಿಕೆ ಪಡೆದಿದ್ದರೆ, ಕಾಂಗ್ರೆಸ್ 41% ಓಟ್ ಶೇರ್ ಗಿಟ್ಟಿಸಿಕೊಂಡಿದೆ. ಬಿಜೆಪಿಗಿಂತ 2% ಹೆಚ್ಚು ಮತಗಳನ್ನು ಗಳಿಸಿದ್ದರೂ, ಹೆಚ್ಚು ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದೆ.
ಬಿಜೆಪಿಯ ಮುನ್ನಡೆ ಮತ್ತು ಕಾಂಗ್ರೆಸ್‌ನ ಮುಗ್ಗರಿಸುವಿಕೆಗೆ ಕೆಲವು ಪ್ರಮುಖ ಅಂಶಗಳು ಕಾರಣವಾಗಿವೆ. ಮೊದಲನೆಯದಾಗಿ, ಆಡಳಿತವಿರೋಧಿ ಅಲೆಯ ನಡುವೆಯೂ ಬಿಜೆಪಿ ಮತ ಹಂಚಿಕೆ ಹೆಚ್ಚಾಗಿದೆ. 2019ರಲ್ಲಿ ಬಿಜೆಪಿ ಮತಗಳಿಕೆ 36.5% ಇತ್ತು. ಇದೀಗ 39%ಕ್ಕೆ ಏರಿಕೆ ಕಂಡಿದೆ. 10 ವರ್ಷಗಳ ಕಾಲ ಅಧಿಕಾರ ನಡೆಸಿದ್ದರೂ, ಬಿಜೆಪಿ ಮತ ಹಂಚಿಕೆಯನ್ನು ಹೆಚ್ಚಿಸಿಕೊಂಡಿದೆ. ಆದಾಗ್ಯೂ, ಸಹಜವಾಗಿ, ಕಾಂಗ್ರೆಸ್‌ನ ಮತ ಹಂಚಿಕೆಯು 2019ರಲ್ಲಿ 28.1% ಇದ್ದದ್ದು, ಈಗ 40%ಕ್ಕೆ ಏರಿಕೆಯಾಗಿದೆ. ಈ ಮತಗಳು ಜೆಜೆಪಿ, ಐಎನ್‌ಎಲ್‌ಡಿ, ಬಿಎಸ್‌ಪಿ ಕಳೆದುಕೊಂಡ ಮತಗಳಾಗಿವೆ.
ಆದರೆ, ಬಿಜೆಪಿ ಮತಗಳು ಏರಿಕೆಯಾಗಿವೆ. ಬಿಜೆಪಿಗೆ ಮತ ಹಾಕುವವರನ್ನು ಗೆಲ್ಲುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಜಿಟಿ ರಸ್ತೆ ಪ್ರದೇಶ, ಫರಿದಾಬಾದ್ ಹಾಗೂ ಗುರುಗ್ರಾಮವನ್ನು ಭೇದಿಸುವಲ್ಲಿ ಕಾಂಗ್ರೆಸ್ ಎಡವಿದೆ.
ಜಾಟೇತರ ಸಮುದಾಯ ಗೆಲ್ಲುವಲ್ಲಿಯೂ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಹೆಚ್ಚಾಗಿ ಜಾಟ್ ಸಮುದಾಯವನ್ನು ಪಕ್ಷದತ್ತ ಸೆಳೆಯುವಲ್ಲಿ ಸಫಲವಾಗಿದೆ. ಆದರೆ, ಜಾಟೇತರ ಸಮುದಾಯಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಬಿಜೆಪಿಯು ಜಾಟ್ ಸಮುದಾಯವಲ್ಲದೆ ಉಳಿದ ಸಮುದಾಯಗಳನ್ನು ಗೆದ್ದುಕೊಂಡಿದೆ. ವಿಶೇಷವಾಗಿ, ಪಂಜಾಬಿ, ಒಬಿಸಿ, ಅಹಿರ್, ಬ್ರಾಹ್ಮಣರು, ರಜಪೂತರು ಹಾಗೂ ಬನಿಯಾ ಮತಗಳನ್ನು ಸೆಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಪಂಜಾಬಿಗಳ ಪ್ರಾಬಲ್ಯವಿರುವ ಜಿಟಿ ರೋಡ್ ಪ್ರದೇಶ, ಅಹಿರ್‌ಗಳು ಪ್ರಾಬಲ್ಯವಿರುವ ಅಹಿರ್ವಾಲ್ ಪ್ರದೇಶ ಹಾಗೂ ಗುಜ್ಜರ್ ಪ್ರಾಬಲ್ಯವಿರುವ ಫರಿದಾಬಾದ್‌ನ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ರಾಜ್ಯದಲ್ಲಿ ಬಿಜೆಪಿಯ ಮುಂದಾಳುಗಳು ಜಾಟ್‌ಯೇತರ ಸಮುದಾಯದವರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪಂಜಾಬಿ ಸಮುದಾಯದವರು ಮತ್ತು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಒಬಿಸಿ ‘ಸೈನಿ’ ಸಮುದಾಯದಿಂದ ಬಂದವರು. ಚುನಾವಣಾ ಪ್ರಚಾರದ ಮೇಳೆ ಬಿಜೆಪಿ ವಿರುದ್ಧ ಜಾಟ್ ಸಮುದಾಯವು ಧ್ವನಿ ಎತ್ತಿದ್ದು, ಬಿಜೆಪಿ ಪರವಾಗಿ ಜಾಟ್‌ಯೇತರ ಸಮುದಾಯಗಳ ಕ್ರೋಡೀಕರಣಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಈ ವರದಿ ಓದಿದ್ದೀರಾ?: ಮೋದಿ-ಆರ್‌ಎಸ್‌ಎಸ್ ಒಳಜಗಳ: ಕಗ್ಗಂಟಾಗಿಯೇ ಉಳಿದ ಬಿಜೆಪಿ ಅಧ್ಯಕ್ಷ ಹುದ್ದೆ!
ಕಾಂಗ್ರೆಸ್, ತನ್ನ ಗೆಲುವಿನ ಲೆಕ್ಕಾಚಾರದಲ್ಲಿ ಜಾಟ್ ಮತ್ತು ದಲಿತ ಮತಗಳ ಕ್ರೋಡೀಕರಣದ ಮೇಲೆ ಅವಲಂಬಿತವಾಗಿದೆ. ಕಾಂಗ್ರೆಸ್‌ನಲ್ಲಿ ಒಬಿಸಿ ಮತ್ತು ಪಂಜಾಬಿ ಸಮುದಾಯಗಳಿಗೆ ಸೇರಿದ ನಾಯಕರಿಲ್ಲ. ಜೊತೆಗೆ, ಈ ಸಮುದಾಯಗಳ ಮತಗಳನ್ನು ಕ್ರೋಡೀಕರಿಸುವಲ್ಲಿಯೂ ಪಕ್ಷ ವಿಫಲವಾಗಿದೆ. ಐಎನ್‌ಎಲ್‌ಡಿ-ಬಿಎಸ್‌ಪಿ ಮೈತ್ರಿಯು ಒಟ್ಟು 6% ಮತಗಳನ್ನು ಪಡೆದಿದ್ದು, ಅದರಲ್ಲಿ ಹೆಚ್ಚಿನ ಮತಗಳು ಈ ಎರಡು ಸಮುದಾಯಕ್ಕೆ ಸೇರಿದವಾಗಿವೆ. ಇದು, ಕಾಂಗ್ರೆಸ್ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಇನ್ನು, ಕಾಂಗ್ರೆಸ್ ನಾಯಕರ ನಡುವೆ ಸಮನ್ವಯದ ಕೊರತೆ ಎದ್ದು ಕಾಣಿಸಿದೆ. ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ನಲ್ಲಿದ್ದ ಒಗ್ಗಟ್ಟು ಈಗ ನಾಪತ್ತೆಯಾಗಿದೆ. ಭೂಪಿಂದರ್ ಸಿಂಗ್ ಹೂಡಾ ಮತ್ತು ಕುಮಾರಿ ಸೆಲ್ಜಾ ಅವರಂತಹ ಉನ್ನತ ನಾಯಕರ ನಡುವಿನ ಮನಸ್ತಾಪವನ್ನು ರಾಹುಲ್ ಗಾಂಧಿ ಶಮನ ಮಾಡಿದರೂ, ಅವರಿಬ್ಬರೂ ಒಟ್ಟಿಗೆ ಪ್ರಚಾರ ಮಾಡಲಿಲ್ಲ. ಇದು, ಕಳೆದ ವರ್ಷ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿದ್ದರೂ, ಅವರಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ರಾಜ್ಯವನ್ನು ಗೆದ್ದರು. ಆದರೆ, ಹರಿಯಾಣ ಚುನಾವಣೆಯಲ್ಲಿ ಅಲ್ಲಿನ ನಾಯಕರ ನಡುವೆ ಈ ಸಮನ್ವಯತೆ ಕಾಣಲಿಲ್ಲ.
ಮತ್ತೊಂದು ಸಮಸ್ಯೆ ಎಂದರೆ, ಬಂಡಾಯ ಅಭ್ಯರ್ಥಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿಯೂ ಕಾಂಗ್ರೆಸ್ ವಿಫಲವಾಗಿದೆ. ಈ ಬಂಡಾಯ ಅಭ್ಯರ್ಥಿಗಳು ಪಕ್ಷಕ್ಕೆ ಭಾರೀ ಒಡೆತ ಕೊಟ್ಟಿದ್ದಾರೆ. ಜೊತೆಗೆ, ಪಕ್ಷವು ತಾನು ಗೆಲ್ಲಲಾಗದ ಅಥವಾ ಗೆಲುವಿಗೆ ಅವಕಾಶವಿಲ್ಲದ ಕ್ಷೇತ್ರಗಳನ್ನು ತಾನಾಗಿಯೇ ಬಿಟ್ಟುಕೊಟ್ಟಿದೆ. ಇದು, ಬಿಜೆಪಿಯ ಗೆಲುವಿಗೆ ಮತ್ತಷ್ಟು ಅವಕಾಶ ಮಾಡಿಕೊಟ್ಟಿದೆ.