ಹರಿಯಾಣದಲ್ಲಿ ಅಕ್ಟೋಬರ್ 5ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದ ಚುನಾವಣೆಗೆ ಎಲ್ಲ ಪಕ್ಷಗಳೂ ಭಾರೀ ತಯಾರಿ ನಡೆಸುತ್ತಿವೆ. ಆ ರಾಜ್ಯದಲ್ಲಿನ 90 ಸ್ಥಾನಗಳ ಪೈಕಿ ಕಾಂಗ್ರೆಸ್‌ನಂತೆಯೇ ಬಿಜೆಪಿ ಕೂಡ 89 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದ ಒಂದು ಕ್ಷೇತ್ರ ಸಿರ್ಸಾದಲ್ಲಿ ಲೋಕಿತ್ ಪಕ್ಷದ (ಎಚ್‌ಎಲ್‌ಪಿ) ಮುಖ್ಯಸ್ಥ ಗೋಪಾಲ್ ಕಾಂಡಾ ಅವರನ್ನು ಬಿಜೆಪಿ ಬೆಂಬಲಿಸಿದೆ ಎಂದು ತಳಿದುಬಂದಿದೆ. ಸಿರ್ಸಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರೋಹ್ತಾಶ್ ಜಂಗ್ರಾ ಅವರು ತಮ್ಮ ಉಮೇದುವಾರಿಕೆಯನ್ನು ಸೋಮವಾರ ಹಿಂಪಡೆದುಕೊಂಡಿದ್ದಾರೆ.
ಗೋಪಾಲ್ ಕಾಂಡಾ ಅವರು ಈ ಹಿಂದೆ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಇದೀಗ, ಅವರು ಮತ್ತೆ ಅಭ್ಯರ್ಥಿಯಾಗಿ ಕಣಕ್ಕಿಳಿದ ಬೆನ್ನಲ್ಲೇ ಸಿರ್ಸಾದಲ್ಲಿ ಬಿಜೆಪಿ ತುರ್ತು ಸಭೆ ಕರೆದಿತ್ತು. ಸಭೆಯಲ್ಲಿ ಜಾಂಗ್ರಾ ಸ್ಪರ್ಧೆಯಿಂದ ಹೊರಗುಳಿಯಬೇಕೆಂದು ನಿರ್ಧರಿಸಲಾಗಿತ್ತು. “ನಾನು ನನ್ನ ನಾಮಪತ್ರವನ್ನು ಹಿಂಪಡೆದಿದ್ದೇನೆ. ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಕಾಂಗ್ರೆಸ್ ಮುಕ್ತ ಹರಿಯಾಣವನ್ನು ಖಾತ್ರಿಪಡಿಸಿಕೊಳ್ಳಬೇಕು” ಎಂದು ಜಾಂಗ್ರಾ ಹೇಳಿದ್ದಾರೆ.
ಕಾಂಡಾ ಪರವಾಗಿ ಹಿಂದೆ ಸರಿದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಾಂಗ್ರಾ, “ಗೋಪಾಲ್ ಕಾಂಡಾ ಐದು ವರ್ಷಗಳಿಂದ ನಮ್ಮನ್ನು (ಬಿಜೆಪಿ) ಬೆಂಬಲಿಸಿದ್ದಾರೆ. ಸಿರ್ಸಾದ ಅಭಿವೃದ್ಧಿಗಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದಿದ್ದಾರೆ.
ಇನ್ನು, ಆರ್‌ಎಸ್‌ಎಸ್ ಜೊತೆ ತಮ್ಮ ಕುಟುಂಬದ ದೀರ್ಘಕಾಲದ ಸಂಪರ್ಕವನ್ನು ನೆನಪಿಸಿಕೊಂಡಿರುವ ಕಾಂಡ, “ತಮ್ಮ ತಂದೆ ಮುರಳಿ ಧರ್ ಕಾಂಡ ಅವರು 1952ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಡಬ್ವಾಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ತಮ್ಮ ತಾಯಿಯೂ ಬಿಜೆಪಿ ಬೆಂಬಲಿಗರಾಗಿದ್ದರು” ಎಂದು ಹೇಳಿದ್ದಾರೆ.
ಸಿರ್ಸಾ ರಾಜಕೀಯ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ, ಮಾಜಿ ಸಂಸದ ಅಶೋಕ್ ತನ್ವಾರ್, “ನಮಗೆ ಒಂದೇ ಗುರಿಯಿದೆ. ಅದು ಮೂರನೇ ಬಾರಿಗೆ ಬಿಜೆಪಿ ಸರ್ಕಾರ ರಚಿಸುವುದು ಮತ್ತು ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸುವುದು” ಎಂದು ಹೇಳಿದ್ದಾರೆ.
ಈಗಾಗಲೇ, ಎಚ್‌ಎಲ್‌ಪಿಗೆ ಐಎನ್‌ಎಲ್‌ಡಿ ಮತ್ತು ಬಿಎಸ್‌ಪಿ ಬೆಂಬಲ ನೀಡಿವೆ. ಇದೀಗ, ಬಿಜೆಪಿಯೂ ಬೆಂಬಲ ನೀಡುವುದಾಗಿ ಘೋಷಿಸಿದೆ. ಹೀಗಾಗಿ, ಕಾಂಡಾ ಅವರಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಗೋಕುಲ್ ಸೇಟಿಯಾ ಕಣದಲ್ಲಿದ್ದಾರೆ.
ಈ ವರದಿ ಓದಿದ್ದೀರಾ?: ಸಂಘಪರಿವಾರದವರಿಂದ ‘ಗಣೇಶ ಮೂರ್ತಿ’ಯನ್ನು ರಕ್ಷಿಸಿದ ಪೊಲೀಸರು: ಸುಳ್ಳು ಸುದ್ದಿ ಹರಡಿದ ಬಿಜೆಪಿ
ಹರಿಯಾಣದಲ್ಲಿ ಬಿಜೆಪಿಯಲ್ಲಿ ಅಧಿಕಾರದಿಂದ ಹೊರಗಿಡಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್, 90 ಕ್ಷೇತ್ರಗಳ ಪೈಕಿ 89 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಮತ್ತು ಎಎಪಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿಯೂ ಕ್ಷೇತ್ರ ಹಂಚಿಕೆಗಾಗಿ ಮಾತುಕತೆ ನಡೆಸಿದ್ದವು. ಅದರೆ, ಮಾತುಕತೆ ಮುರಿದುಬಿದ್ದಿದೆ. ಸದ್ಯ, ಸಿಪಿಐ(ಎಂ) ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ 89 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ಭಿವಾಸಿ ಕ್ಷೇತ್ರವನ್ನು ಸಿಪಿಐ(ಎಂ)ಗೆ ಬಿಟ್ಟುಕೊಟ್ಟಿದೆ.