ಹರಿಯಾಣದಲ್ಲಿ ಈ ವರ್ಷ ಅಕ್ಟೋಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್‌ಎಲ್‌ಡಿ) ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ.
ಐಎನ್‌ಎಲ್‌ಡಿ ಪ್ರಧಾನ ಕಾರ್ಯದರ್ಶಿ ಅಭಯ್ ಚೌತಾಲಾ ಮತ್ತು ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಆಕಾಶ್ ಆನಂದ್ ಅವರು ಗುರುವಾರ ಸಭೆ ನಡೆಸಿದ್ದು, ಮೈತ್ರಿ ಮಾಡಿಕೊಂಡಿದ್ದಾರೆ. ಬಳಿಕ ಮಾತನಾಡಿದ ಇಬ್ಬರೂ, “ಇತರ ಸಮಾನ ಮನಸ್ಕ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳೊಂದಿಗೆ ಕೈಜೋಡಿಸುವ ಆಯ್ಕೆಗಳನ್ನು ಮೈತ್ರಿಕೂಟ ಎದುರು ನೋಡುತ್ತಿದೆ” ಎಂದು ಹೇಳಿದ್ದಾರೆ.
ಮಾಜಿ ಉಪಪ್ರಧಾನಿ ಮತ್ತು ರಾಜ್ಯದ ಹೆಚ್ಚಿನ ಪ್ರಾಬಲ್ಯವಿರುವ ಜಾಟ್ ಸಮುದಾಯದ ನಾಯಕ ಚೌಧರಿ ದೇವಿ ಲಾಲ್ ಅವರ ಮೊಮ್ಮಗ ಅಭಯ್ ಚೌತಾಲಾ ಅವರನ್ನು ಮೈತ್ರಿಕೂಟದ ಮುಖ್ಯಮಂತ್ರಿ ಮುಖವೆಂದು ಘೋಷಿಸಿದ್ದಾರೆ.
ರಾಜ್ಯದ ಒಟ್ಟು 127 ಸ್ಥಾನಗಳ ಪೈಕಿ ಐಎನ್‌ಎಲ್‌ಡಿ 53ರಲ್ಲಿ ಸ್ಪರ್ಧಿಸಲಿದೆ. ಬಿಎಸ್‌ಪಿ ಉಳಿದ 37 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ರಾಜ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೇಮಕಾತಿಯನ್ನು ತೊಡೆದುಹಾಕುವುದಾಗಿ ಎರಡೂ ಪಕ್ಷಗಳು ಭರವಸೆ ನೀಡಿವೆ. ಶಾಶ್ವತ ಕೆಲಸ, ಪ್ರತಿ ಮನೆಯ ವಿದ್ಯುತ್ ಬಿಲ್ಅನ್ನು 500 ರೂ.ಗೆ ಇಳಿಸಲು ಸೋಲಾರ್ ಪ್ಲಾಂಟ್‌ಗಳ ಸ್ಥಾಪನೆ, ಉಚಿತ ನೀರು, ತಿಂಗಳಿಗೆ 7,500 ರೂ. ವೃದ್ಧಾಪ್ಯ ವೇತನ, ಪ್ರತಿ ಮನೆಯಲ್ಲಿ ಒಬ್ಬರಿಗೆ 21,000 ರೂ. ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಿಸಿವೆ.
ಪರಿಶಿಷ್ಟ ಜಾತಿಯ ಪ್ರತಿ ಕುಟುಂಬಕ್ಕೆ 300 ಚದುರ ಅಡಿ ನಿವೇಶನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, 10ನೇ ತರಗತಿಯವರೆಗೆ ಉಚಿತ ಶಿಕ್ಷಣ ಇತ್ಯಾದಿ ಭರವಸೆಗಳನ್ನು ನೀಡಿವೆ.
ಐಎನ್‌ಎಲ್‌ಡಿಅಲ್ಲಿ ಉಂಟಾದ ಆಂತರಿಕ ಕಲಹದಿಂದಾಗಿ, ಐದು ಬಾರಿ ಮುಖ್ಯಮಂತ್ರಿ ಓಪಿ ಚೌತಾಲಾ ಅವರ ಮೊಮ್ಮಗ ದುಶ್ಯಂತ್ ಅವರು 2018ರಲ್ಲಿ ಪಕ್ಷವನ್ನು ಒಡೆದರು. ಹೊಸದಾಗಿ, ಜನನಾಯಕ್ ಜನತಾ ಪಕ್ಷವನ್ನು (ಜೆಜೆಪಿ) ರಚಿಸಿದರು. 2019ರಲ್ಲಿ ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಜೆಜೆಪಿ ಬೆಂಬಲ ನೀಡಿತ್ತು. ಆದರೆ, ಈ ವರ್ಷದ ಮಾರ್ಚ್‌ನಲ್ಲಿ ಅದು ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು.