ತಂಪು ಹವೆಗೆ ಒಗ್ಗಿ ಹೋಗಿರುವ ಬೆಂಗಳೂರಿಗರನ್ನು ಬಿರು ಬಿಸಿಲಿನ ಝಳ ಹಣಿಯತೊಡಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಹವೆಯೂ ರಂಗೇರತೊಡಗಿದೆ. ದಶಕಗಳ ಕಾಲ ಆಸ್ಪತ್ರೆಯ ವಾತಾವರಣದಲ್ಲಿ ಕೆಲಸ ಮಾಡಿದ ಡಾ ಎಂ ಸಿ ಮಂಜುನಾಥ್ ಈಗ ಬಿಜೆಪಿ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ–ಜೆಡಿಎಸ್ ಅಭ್ಯರ್ಥಿ ಡಾ. ಮಂಜುನಾಥ್ ಹಣ ಮಾಡುವ ಆಸೆ ಅಥವಾ ಅಕ್ರಮ ಆಸ್ತಿ ಉಳಿಸಿಕೊಳ್ಳುವ ಒತ್ತಡದಿಂದ ರಾಜಕಾರಣಕ್ಕೆ ಬಂದವರಲ್ಲ. ಅವರನ್ನು ಈ ಚಕ್ರವ್ಯೂಹದೊಳಗೆ ತಳ್ಳಲಾಗಿದೆ. ಜೆಡಿಎಸ್– ಬಿಜೆಪಿಯ ರಾಜಕೀಯ ತಂತ್ರಗಾರಿಕೆಯ ಬಲಿಪಶುವಾಗಿ ಮಂಜುನಾಥ್ ಗೋಚರಿಸುತ್ತಾರೆ. ಗೆದ್ದರೆ ಮೋದಿ ಸಂಪುಟದಲ್ಲಿ ಮಂತ್ರಿಗಿರಿ ಕೊಡುವ ಸಣ್ಣದೊಂದು ಭರವಸೆಯನ್ನು ತೇಲಿಬಿಡಲಾಗಿದೆ.
ಮೋದಿ ಅವರಿಗೆ ಮಂಜುನಾಥ್ ಅವರಂಥ ಖ್ಯಾತ ಹೃದ್ರೋಗ ತಜ್ಞರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡು ದೇಶದ ಆರೋಗ್ಯ ಮಂತ್ರಿಯನ್ನಾಗಿ ಮಾಡುವ ಬಯಕೆ ಇದ್ದರೆ ಅವರನ್ನು ಚುನಾವಣಾ ರಣಾಂಗಣಕ್ಕೆ ನೂಕುವ ಅಗತ್ಯ ಇರಲಿಲ್ಲ. ನಿರ್ಮಲಾ ಸೀತಾರಾಮನ್ ಅವರನ್ನು ಎರಡು ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಎರಡು ಅವಧಿಯಲ್ಲೂ ಪ್ರಮುಖ ಖಾತೆ ನೀಡಿಲ್ಲವೇ? ಮಂಜುನಾಥ್ ಅವರನ್ನೂ ಮುಂದಿನ ಅವಧಿಗೆ ರಾಜ್ಯಸಭೆಗೆ ಆಯ್ಕೆ ಮಾಡಿ ಸಜ್ಜನರೊಬ್ಬರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುವ ಎಲ್ಲ ಅವಕಾಶವೂ ಇತ್ತು. ಮುಂದೆಯೂ ಇರಲಿದೆ.
ಆದರೆ, ಮಂಜುನಾಥ್ ಅವರನ್ನು ಗೆಲ್ಲಿಸುವುದು ಬಿಜೆಪಿ –ಜೆಡಿಎಸ್ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್‌ನ ಬಲಿಷ್ಠ ಅಭ್ಯರ್ಥಿ ಡಿ ಕೆ ಸುರೇಶ್ ಅವರನ್ನು ಹೇಗಾದರೂ ಮಾಡಿ ಮಣಿಸಲು ಎರಡೂ ಪಕ್ಷಗಳು ಪಣತೊಟ್ಟಿವೆ. ಒಂದು ವೇಳೆ ಸುರೇಶ್ ಸೋತರೂ ಅವರಿಗೆ ರಾಜ್ಯ ರಾಜಕಾರಣದಲ್ಲಿ ಅವಕಾಶ ಸಿಗುವುದರಲ್ಲಿ ಅನುಮಾನವೇ ಇಲ್ಲ. ಸಹೋದರ ಡಿ ಕೆ ಶಿವಕುಮಾರ್ ಅಂತಹ ಅವಕಾಶವನ್ನು ಕೈ ಚೆಲ್ಲಲಾರರು. ರಾಜ್ಯದಲ್ಲಿ ಪಕ್ಷದ ಶಕ್ತಿ ಇನ್ನಷ್ಟು ಹೆಚ್ಚಬಹುದು. ಮಂಜುನಾಥ್ ಸೋತರೆ ಮತ್ತೆ ರಾಜ್ಯಸಭೆಯ ಸದಸ್ಯರೋ, ವಿಧಾನಪರಿಷತ್ತಿನ ಸದಸ್ಯರೋ ಆಗುತ್ತಾರಾ? ಹೇಳಲಾಗದು.
ಗೌಡರ ಪರ ಪ್ರಚಾರ ಮಾಡದ ಡಾ ಮಂಜುನಾಥ್ ಕುಟುಂಬ
ರಾಜಕೀಯ ಕುಟುಂಬದ ನಿಕಟ ಸಂಬಂಧ ಇದ್ದರೂ ಡಾ. ಮಂಜುನಾಥ್ ಯಾವತ್ತೂ ಮಾವ ಎಚ್ ಡಿ ದೇವೇಗೌಡ ಅವರ ಪರವಾಗಿಯಾಗಲಿ ಅಥವಾ ಗೌಡರ ಮಕ್ಕಳಾದ ಎಚ್ ಡಿ ಕುಮಾರಸ್ವಾಮಿ, ರೇವಣ್ಣ, ಸೊಸೆ ಅನಿತಾ, ಮೊಮ್ಮಕ್ಕಳಾದ ಪ್ರಜ್ವಲ್, ನಿಖಿಲ್ ಪರವಾಗಿ ಪ್ರಚಾರಕ್ಕೆ ಹೋದವರಲ್ಲ. ಅವರ ಪತ್ನಿ ಸ್ವತಃ ದೇವೇಗೌಡರ ಪುತ್ರಿಯಾದರೂ ಪ್ರಚಾರ ಸಭೆಗಳಿಗೆ ಹೋದವರಲ್ಲ. ಈಗ ಮಂಜುನಾಥ್ ಅವರು ನಿವೃತ್ತಿಯಾಗುವ ಹೊತ್ತಿನಲ್ಲೇ ಲೋಕಸಭಾ ಚುನಾವಣೆ ಬಂದಿದೆ. ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಜುನಾಥ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಈಗ ಪತ್ನಿ ಸಮೇತರಾಗಿ ಕ್ಷೇತ್ರಗಳಲ್ಲಿ ಚುನಾವಣಾ ಸಭೆ ನಡೆಸುತ್ತಾ, ಮತ ಭಿಕ್ಷೆಗೆ ಇಳಿದಿದ್ದಾರೆ ಮಂಜುನಾಥ್. ಕಣ್ಣಿಗೆ ಪಟ್ಟಿ ಕಟ್ಟಿ ಅಪರಿಚಿತ ಜಾಗದಲ್ಲಿ ಬಿಟ್ಟಂತಾಗಿದೆ ಅವರ ಪರಿಸ್ಥಿತಿ.
ಸಜ್ಜನರು ರಾಜಕಾರಣಿಗಳಾಗಬೇಕು. ದೇಶದ ನೀತಿ ನಿರೂಪಣೆಗಳಲ್ಲಿ ಅವರ ಭಾಗವಹಿಸುವಿಕೆ ಬಹಳ ಮುಖ್ಯ. ಆದರೆ, ರಾಜಕೀಯ ಲೆಕ್ಕಾಚಾರಗಳೇ ಬೇರೆ. ಅದೆಷ್ಟೋ ಸಜ್ಜನರು ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಹಾಗಾಗಿ ಜಾತಿ, ಅಧಿಕಾರ, ಹಣ, ಪಕ್ಷದ ಬಲವಿಲ್ಲದೇ ಯಾವ ಸಜ್ಜನಿಕೆಯೂ ಗೆಲುವಿನ ಮಾನದಂಡವಾಗದು.
ಚುನಾವಣೆ ಅಂದ್ರೆ ಪಕ್ಕಾ ರಾಜಕಾರಣ, ತಂತ್ರಗಾರಿಕೆ, ಹಣದ ಹರಿವಿನಲ್ಲೇ ನಡೆವ ಕಸರತ್ತು. ಅಷ್ಟೇ ಅಲ್ಲ ಮತದಾರರನ್ನೂ ಆಮಿಷಗಳಿಗೆ ಕೆಡವುವ ನೀತಿ ನೇಮವಿಲ್ಲದ ಆಟ. ಮಂಜುನಾಥ್ ಅವರಂಥ ʼಸಜ್ಜನʼರಿಂದ ಹಣ, ವಸ್ತು ಪಡೆಯದೇ ಮತ ಹಾಕಿ ಗೆಲ್ಲಿಸುತ್ತೇವೆ ಎಂಬುದಾಗಿ ಮತದಾರರು ಪ್ರಮಾಣ ಮಾಡುವರೇ? ಮತದಾರ ಅಷ್ಟೊಂದು ವಿವೇಕಿಯಾದ ದಿನ ನಮ್ಮ ದೇಶದ ಚುನಾವಣಾ ವ್ಯವಸ್ಥೆಯೇ ಬದಲಾಗಿಬಿಡುತ್ತದೆ. ಡಾ ಮಂಜುನಾಥ್ ಕೂಡಾ ಮತದಾರರಿಗೆ ಯಾವುದೇ ಆಮಿಷ ಒಡ್ಡದೇ, ಹಣ ಹಂಚದೇ ಮತಯಾಚಿಸುವರೇ? ಅವರನ್ನು ಶತಾಯಗತಾಯ ಗೆಲ್ಲಿಸಬೇಕು ಎಂದು ಪಣತೊಟ್ಟವರು ಇದಕ್ಕೆ ಒಪ್ಪುವರೇ?

ತಂಪು ಹವೆಗೆ ಒಗ್ಗಿ ಹೋಗಿರುವ ಬೆಂಗಳೂರಿಗರನ್ನು ಬಿರು ಬಿಸಿಲಿನ ಝಳ ಹಣಿಯತೊಡಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಹವೆಯೂ ರಂಗೇರತೊಡಗಿದೆ. ದಶಕಗಳ ಕಾಲ ಆಸ್ಪತ್ರೆಯ ವಾತಾನುಕೂಲದಲ್ಲಿ ಕೆಲಸ ಮಾಡಿದವರು ಡಾ ಎಂ ಸಿ ಮಂಜುನಾಥ್. ಹಠಾತ್ತನೆ ಸುಡು ಬಿಸಿಲ ನಡುವೆ ಮತ ಯಾಚಿಸಿಕೊಂಡು ಕ್ಷೇತ್ರದಲ್ಲಿ ಸುತ್ತಾಡುವ ಅನಿವಾರ್ಯತೆ ಒದಗಿದೆ. ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಚುನಾವಣೆಗಳ ಲೆಕ್ಕ ಇಟ್ಟವರಲ್ಲ. ಸಂಸದರಾಗಿದ್ರೂ ರಾಜ್ಯದಲ್ಲಿ ನಡೆಯುವ ಉಪಚುನಾವಣೆ, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದವರೇ. ಅವರ ಪಾಲಿಗೆ ಇದು ಮತ್ತೊಂದು ಚುನಾವಣೆ ಅಷ್ಟೇ.
ಸಜ್ಜನಿಕೆ ಗೆಲುವಿನ ಮಾನದಂಡವಾಗುತ್ತಾ?
ಹಳೆಯ ಪಳಗಿದ ರಾಜಕಾರಣಿಗಳ ನಡುವಣ ಸ್ಪರ್ಧೆಯ ಸಂದರ್ಭದಲ್ಲಿ ಕೇಳಿ ಬರುವ ಮತದಾರರ ಮಾತುಗಳೇ ಬೇರೆ. ಪಕ್ಷ ರಾಜಕಾರಣಕ್ಕೆ ಸಂಪೂರ್ಣ ಹೊರಗಿನವರಾದ ವ್ಯಕ್ತಿಯೊಬ್ಬರು ದಿಢೀರನೆ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕೆ ಜಿಗಿದಾಗ ವ್ಯಕ್ತವಾಗುವ ಅಭಿಪ್ರಾಯಗಳೇ ಬೇರೆ. ದೃಶ್ಯ ಮಾಧ್ಯಮದವರು ಮಾರುಕಟ್ಟೆ, ಹೋಟೇಲು, ಸಂತೆಗಳಿಗೆ ಹೋಗಿ ಜನರ ಬಾಯಿಗೆ ಮೈಕ್ ಹಿಡಿಯಲು ಶುರು ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರ ಅಭಿಪ್ರಾಯ ಈ ಬಾರಿ ಕೇಳುವುದಕ್ಕೆ ಮಜವಾಗಿದೆ. ಒಂದೆಡೆ ಡಿ.ಕೆ.ಸುರೇಶ್ ಒಳ್ಳೆಯ ಕೆಲಸಗಾರ ಎಂಬ ಅಭಿಪ್ರಾಯ ಇದೆ. ಅದೇನೂ ಸುಳ್ಳಲ್ಲ. ಸುರೇಶ್ ಅವರ ಕೆಲಸ ಕಾರ್ಯಗಳನ್ನು ಕೊರೋನಾ ಕಾಲದಲ್ಲಿ ರಾಜ್ಯವೇ ನೋಡಿದೆ.
ಆದರೆ, ಈ ಬಾರಿ ಅವರ ಎದುರಿಗೆ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ ಡಾ ಎಂ ಸಿ ಮಂಜುನಾಥ್ ಇದ್ದಾರೆ. ಸಾರ್ವಜನಿಕ ಬದುಕಿನಲ್ಲಿ ʼಸಜ್ಜನʼ ಹೃದಯತಜ್ಞರಾಗಿ ರೋಗಿಗಳೊಂದಿಗೆ ಹೃದಯವಂತಿಕೆಯಿಂದ ನಡೆದುಕೊಂಡವರು. ಜಯದೇವ ಆಸ್ಪತ್ರೆಯನ್ನು ಉನ್ನತ ಸ್ಥಾನಕ್ಕೇರಿಸಿದವರು ಎಂಬ ಹೆಗ್ಗಳಿಕೆ ಅವರ ಜೊತೆಗಿದೆ. ಕಾಂಗ್ರೆಸ್‌ನವರು ತಮ್ಮ ಅಭ್ಯರ್ಥಿಯನ್ನು, ಬಿಜೆಪಿ– ಜೆಡಿಎಸ್ನವರು ತಮ್ಮ ಅಭ್ಯರ್ಥಿಯನ್ನು ಹೊಗಳೋದ್ರಲ್ಲಿ ಹೊಸದೇನೂ ಇಲ್ಲ. ಆದರೆ ಮಂಜುನಾಥ್ ಕುರಿತು ಕ್ಷೇತ್ರದ ಜನ ಆಡುವ ಮಾತುಗಳನ್ನು ಕೇಳಿದಾಗ ಜನ ಅಮಾಯಕರೋ ಅಥವಾ ತಾವು ಯಾವುದೇ ಪಕ್ಷದ ಪರ ಅಲ್ಲ ಎಂದು ತೋರಿಸಿಕೊಳ್ಳುವ ತಂತ್ರವೋ ತಿಳಿಯದು. “ಅವರು ಹಾರ್ಟ್ ಡಾಕ್ಟರ್, ಅವರನ್ನು ಗೆಲ್ಲಿಸಿದರೆ ನಮಗೆ ಉಪಕಾರವಾಗುತ್ತದೆ. ನಮಗೆ ಉತ್ತಮ ಚಿಕಿತ್ಸೆ ನೀಡುತ್ತಾರೆ” ಎಂದು ಅಮಾಯಕ ಜನ ಅವರನ್ನು ವೈದ್ಯರಾಗಿಯೇ ನೋಡುತ್ತಿದ್ದಾರೆ.

ಮಂಜುನಾಥ್ ಹೆಸರಾಂತ ವೈದ್ಯರು, ಅವರಿಂದ ನಮ್ಮ ಆರೋಗ್ಯ ಸಮಸ್ಯೆಗಳಿಗೆ ಸ್ಪಂದನೆ ಸಿಗಬಹುದು ಎಂಬ ನಿರೀಕ್ಷೆ ನಿಜವಾಗದು. ಸಂಸದರಾದ ನಂತರ ಮಾಡುವ ಕೆಲಸ–ಕಾರ್ಯಗಳು, ಜವಾಬ್ದಾರಿಗಳೇ ಬೇರೆ ಇರುತ್ತವೆ. ಅದು ಪಕ್ಕಾ ರಾಜಕಾರಣಿಯ ಕೆಲಸ. ಕ್ಷೇತ್ರದ ಮತದಾರರು ಹೃದಯದ ತಪಾಸಣೆಗೋ, ಚಿಕಿತ್ಸೆಗೋ ಸಂಸದರ ಬಳಿ ಹೋಗುವುದು ಅಸಾಧ್ಯ. ಆ ಸೇವೆ ಬೇಕಿದ್ದರೆ, “ನೀವು ಚುನಾವಣೆಗೆ ಸ್ಪರ್ಧಿಸಬೇಡಿ, ನಮಗೆ ನಿಮ್ಮ ಚಿಕಿತ್ಸೆ ಅಗತ್ಯ ಇದೆ” ಎಂದೇ ಹೇಳಬೇಕಾಗುತ್ತದೆ.
ಸಂಸದ, ಶಾಸಕರ ಬಳಿ ಜನರು ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಕೊಡಲು, ಕೆಲಸ, ಪೆನ್ಷನ್ ಕೊಡಿಸಿ, ಸಹಾಯಧನ ಕೊಡಿ, ಶಸ್ತ್ರಚಿಕಿತ್ಸೆಗೆ ಹಣಕಾಸಿನ ನೆರವು ಕೊಡಿ, ಕಾಲೇಜು ಸೀಟು ಕೊಡಿಸಿ ಅಂತ ಅರ್ಜಿ ಹಿಡಿದು ಬರುವವರೇ ಹೆಚ್ಚು. ಆದರೆ, ಡಾ ಮಂಜುನಾಥ್ ಸಂಸದರಾದರೆ, ಹೃದಯದ ಕಾಯಿಲೆ ಇರುವವರೇ ಹೆಚ್ಚು ಬರುವುದರಲ್ಲಿ ಅನುಮಾನವಿಲ್ಲ. ಅವರೇ ಹೇಳಿಕೊಂಡಂತೆ ಅವರು ಮತಯಾಚನೆಗೆ ಹೋದಲ್ಲೆಲ್ಲ ಜನ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತಿದ್ದಾರಂತೆ. ಅವರ ಮಾತುಗಳನ್ನು ಆಲಿಸುತ್ತ, ಅಂದುಕೊಂಡಷ್ಟು ವೇಗದಲ್ಲಿ ಹೆಚ್ಚು ಜನರನ್ನು ತಲುಪುವುದು ಮಂಜುನಾಥ್ ಗೆ ಸಾಧ್ಯವಾಗುತ್ತಿಲ್ಲವಂತೆ. “ಇದು ವಿರೋಧಿಗಳ ತಂತ್ರವೂ ಇರಬಹುದು” ಎಂದು ಅವರು ಇತ್ತೀಚೆಗೆ ಪಕ್ಕಾ ರಾಜಕೀಯ ಹೇಳಿಕೆ ನೀಡಿದ್ದರು.
ಪ್ರಾಮಾಣಿಕತೆಯ ಸೋಗಿನ ಅನೇಕ ಐಎಎಸ್/ ಐಪಿಎಸ್ ಅಧಿಕಾರಿಗಳು, ನ್ಯಾಯಾಧೀಶರು ತಮ್ಮ ವೃತ್ತಿ ಬಿಟ್ಟು ರಾಜಕೀಯಕ್ಕೆ ಬರುತ್ತಿದ್ದಾರೆ. ಸ್ವಭಾವತಃ ಪ್ರಾಮಾಣಿಕರಾಗಿದ್ರೆ ಅವರು ಯಾವುದೇ ರಾಜಕೀಯ ಪಕ್ಷದ ಬಾಗಿಲು ತಟ್ಟುವುದಿಲ್ಲ. ಸದ್ಯ ಇಂತಹದೊಂದು ಟ್ರೆಂಡ್ ಚಾಲ್ತಿಯಲ್ಲಿದೆ. ಕೆಲವರು ವೃತ್ತಿಯಿಂದ ನಿವೃತ್ತರಾದ ನಂತರ ರಾಜಕೀಯ ಪಕ್ಷಗಳಿಗೆ ಸೇರಿದರೆ, ಕೆಲವರು ಚುನಾವಣೆಯ ಹೊಸ್ತಿಲಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ಪಕ್ಷ ಸೇರುತ್ತಿದ್ದಾರೆ. ಯಾವುದೋ ಸ್ವಾರ್ಥದಿಂದಾಗಿ ಖ್ಯಾತಿ, ಸಂಪತ್ತು ಗಳಿಸುವ ಅಥವಾ ಗಳಿಸಿದ್ದನ್ನು ಉಳಿಸುವ ಉದ್ದೇಶದಿಂದ ಬರುತ್ತಿರುವವರೇ ಹೆಚ್ಚು. ಅವರೆಲ್ಲ ಆಡಳಿತ ಪಕ್ಷದ ಧ್ವಜ ಹಿಡಿಯುತ್ತಿರುವುದು ನೋಡಿದರೆ ಸಮಾಜ ಸೇವೆ, ದೇಶಸೇವೆಯ ಉದ್ದೇಶದಿಂದ ಅಲ್ಲ ಎಂಬುದು ಸುಲಭಕ್ಕೆ ಮನವರಿಕೆಯಾಗುತ್ತದೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.