ಮುಸ್ಲಿಂ ವಿರುದ್ಧ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಬಜರಂಗದಳ ರಾಜ್ಯ ಸಂಚಾಲಕ ರಘು ಸಕಲೇಶಪುರ ಸಹಚರರು ಎಂದು ಗುರುತಿಸಿಕೊಂಡಿರುವ ಐದು ಮಂದಿಯನ್ನು ಸಕಲೇಶಪುರ ನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಜರಂಗದಳ ಸಕ್ರಿಯ ಕಾರ್ಯಕರ್ತನಾಗಿರುವ ಮತ್ತು ಬೆಳಗೋಡು ಅರೋಗ್ಯ ಕ್ಷೇಂದ್ರದಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುವ ಶ್ರೀಕಾಂತ್, ಶ್ರೀಜೀತ್, ಪ್ರತಾಪ್ ಹಾಗೂ ಇನ್ನಿಬ್ಬರನ್ನು ಬಂಧಿಸಲಾಗಿದೆ.
ಸಕಲೇಶಪುರ ತಾಲೂಕಿನ ಹಲವೆಡೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ರೌಡಿ ಶೀಟರ್ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.
ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ
‘ತರಕಾರಿ ಮತ್ತು ಮೀನು ಮಾರಾಟ ಮಾಡಲು ಹಿಂದೂಗಳ ಮನೆ ಅಂಗಳಕ್ಕೆ ಬರುವ ಜಿಹಾದಿಗಳಿಗೆ ಗುಂಡು ಹಾರಿಸಲಾಗುವುದು’ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದ. ಆ ಪ್ರತಿಭಟನೆಗೆ ಪೋಲಿಸ್ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಈ ಪ್ರತಿಭಟನೆಯಲ್ಲೂ ಕಾನೂನು ಉಲ್ಲಂಘನೆಯಾಗಿದೆ. ಪೋಲಿಸರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಸಾರ್ವಜನಿಕ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದರು.
ಘಟನೆ ವಿವರ
ಗೋ ಹತ್ಯೆ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಸಕಲೇಶಪುರ ಪಟ್ಟಣದಲ್ಲಿ ಶುಕ್ರವಾರ (ಜೂ.30) ಬಜರಂಗದಳದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಬಜರಂಗದಳ ರಾಜ್ಯ ಸಂಚಾಲಕ ರಘು, ”ತರಕಾರಿ, ಮೀನು ಮಾರಾಟ ಮಾಡಲು ಹಿಂದೂಗಳ ಮನೆಯ ಬಳಿ ಬರುವ ವ್ಯಾಪಾರಿಗಳು ಎಚ್ಚರಿಕೆಯಿಂದಿರಿ, ಇಲ್ಲಾಂದ್ರೆ ನಮ್ಮಲ್ಲಿರುವ ಕೋವಿಯೊಳಗಿನ ಗುಂಡು ಹೊರಗಡೆ ಬರುತ್ತೆ, ನಾವು ಕೂಡ ಗುಂಡು ಹಾರಿಸಬೇಕಾಗುತ್ತದೆ” ಎಂದಿದ್ದ. ಅಲ್ಲದೇ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಎಚ್ಚರಿಕೆ ನೀಡಿದ್ದ.
ಈ ಸುದ್ದಿ ಓದಿದ್ದೀರಾ? ನಾನು ಸಿದ್ದರಾಮಯ್ಯರ ಅಭಿಮಾನಿ, ಅವರ ಶಿಷ್ಯ; ಬಿಜೆಪಿ ನಾಯಕ ಎಸ್ ಟಿ ಸೋಮಶೇಖರ್ ಅಚ್ಚರಿಯ ಹೇಳಿಕೆ
ಬಳಿಕ ರಘು ವಿರುದ್ಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಮನೆಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ. ಈಗ ಆತನ ಐದು ಮಂದಿ ಸಹಚರರನ್ನು ಬಂಧಿಸಿದ್ದು, ಆರೋಪಿಯ ಪತ್ತೆಗೆ ಮೂರನೇ ದಿನವೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.