ಕೇರಳ ವಿಶ್ವವಿದ್ಯಾಲಯದ ಸೆನೆಟ್‌ಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನೇಮಿಸಿದ್ದ ನಾಲ್ವರು ಎಬಿವಿಪಿ ಸದಸ್ಯರ ನಾಮನಿರ್ದೇಶನವನ್ನು ಕೇರಳ ಹೈಕೋರ್ಟ್ ರದ್ದು ಮಾಡಿದೆ. ಬಿಜೆಪಿ ಅಜೆಂಡಾವನ್ನು ವಿಶ್ವವಿದ್ಯಾಲಯದಲ್ಲಿ ತುಂಬುವ ಉದ್ದೇಶದಿಂದ ಈ ನಾಮನಿರ್ದೇಶನ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಇದೀಗ, ನಾಮನಿರ್ದೇಶನ ರದ್ದಾಗಿದ್ದು, ರಾಜ್ಯಪಾಲರಿಗೆ ಮುಖಭಂಗವಾಗಿದೆ.
ರಾಜ್ಯಪಾಲರು ಎಬಿವಿಪಿ ಜೊತೆ ನಂಟಿನ ವಿದ್ಯಾರ್ಥಿಯನ್ನು ವಿಶ್ವವಿದ್ಯಾಲಯದ ಸೆನೆಟ್‌ಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ವಿವಾದ ಭಗಿಲೆದ್ದಿತ್ತು. ಕುಲಪತಿಯಾಗಿ, ಸೆನೆಟ್‌ಗೆ ನೇಮಕಾತಿಗಳನ್ನು ಮಾಡುವುದು ಅವರ ವಿವೇಚನೆಯಾಗಿದೆ ಎಂಬ ರಾಜ್ಯಪಾಲರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಅಧಿಕಾರದ ಯಾವುದೇ ಅನಿಯಂತ್ರಿತ ಬಳಕೆಯು ಭಾರತದ ಸಂವಿಧಾನದ 14ನೇ ಪರಿಚ್ಛೇದದಲ್ಲಿ ಪ್ರತಿಪಾದಿಸಲಾದ ‘ಸಮಾನತೆ’ ನಿಯಮವನ್ನು ಮಾತ್ರವಲ್ಲದೆ 16ನೇ ವಿಧಿಯಲ್ಲಿ ಅಂತರ್ಗತವಾಗಿರುವ ‘ತಾರತಮ್ಯ’ ನಿಯಮವನ್ನೂ ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಗವರ್ನರ್ ಸೆನೆಟ್‌ನಿಂದ ತೆಗೆದುಹಾಕಿರುವ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ(ಎಸ್‌ಎಫ್‌ಐ) ಜೊತೆ ನಂಟಿನ ನಾಲ್ವರು ವಿದ್ಯಾರ್ಥಿಗಳು ‘1974ರ ಕೇರಳ ವಿಶ್ವವಿದ್ಯಾಲಯ ಕಾಯ್ದೆಯ ಸೆಕ್ಷನ್ 17ರ’ ಅಡಿಯಲ್ಲಿ ಸಲ್ಲಿಸಿದ ಎರಡು ರಿಟ್ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಆರಿಫ್ ಮೊಹಮ್ಮದ್ ಖಾನ್ ಅವರು ನಾಮನಿರ್ದೇಶನಕ್ಕೆ ಸಾಮಾನ್ಯ ವಿಧಾನವನ್ನು ಅನುಸರಿಸಿಲ್ಲ ಮತ್ತು ಯಾವುದೇ ಅರ್ಹತೆ ಇಲ್ಲದ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೇರಳ ವಿಶ್ವವಿದ್ಯಾನಿಲಯ ಕಾಯಿದೆಯ ಸೆಕ್ಷನ್ 17ರ ಪ್ರಕಾರ ಕುಲಪತಿಗಳು ನಾಲ್ವರು ವಿದ್ಯಾರ್ಥಿಗಳನ್ನು ಸೆನೆಟ್‌ಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಹೊಂದಿದ್ದಾರೆ, ಮಾನವಿಕ, ವಿಜ್ಞಾನ, ಕ್ರೀಡೆ ಮತ್ತು ಲಲಿತಕಲೆಗಳಲ್ಲಿ ಅವರ ಅಸಾಧಾರಣ ಶೈಕ್ಷಣಿಕ ಸಾಮರ್ಥ್ಯಗಳಿಂದ ಗುರುತಿಸಿ ಅವರನ್ನು ಸೆನೆಟ್‌ಗೆ ನೇಮಕ ಮಾಡಲಾಗುತ್ತದೆ.
ವಿದ್ಯಾರ್ಥಿಗಳಾದ ಮಾಳವಿಕಾ ಉದಯನ್(ಲಲಿತಕಲೆ), ಸುಧಿ ಸದನ್(ಕ್ರೀಡೆ), ಧ್ರುವಿನ್ ಎಸ್‌ಎಲ್(ವಿಜ್ಞಾನ), ಮತ್ತು ಅಭಿಷೇಕ್ ಡಿ ನಾಯರ್(ಮಾನವೀಯ) ವಿಭಾಗದಿಂದ ರಾಜ್ಯಪಾಲರು ವಿವಿ ಸೆನೆಟ್‌ಗೆ ನಾಮನಿರ್ದೇಶನ ಮಾಡಿದ್ದಾರೆ. ಈ ಎಲ್ಲರೂ ಎಬಿವಿಪಿಯ ಸದಸ್ಯರಾಗಿದ್ದರು.
ನ್ಯಾಯಮೂರ್ತಿ ಸಿ.ಪಿ.ಮುಹಮ್ಮದ್ ನಿಯಾಸ್ ಅವರಿದ್ದ ಏಕಸದಸ್ಯ ಪೀಠ, ನಾಲ್ವರು ನಾಮನಿರ್ದೇಶಿತರ ನಾಮನಿರ್ದೇಶನವನ್ನು ಅನೂರ್ಜಿತಗೊಳಿಸಿದ್ದು, ಆರು ವಾರಗಳಲ್ಲಿ ಹೊಸ ಪಟ್ಟಿಯನ್ನು ಸಲ್ಲಿಸುವಂತೆ ರಾಜ್ಯಪಾಲರಿಗೆ ಸೂಚಿಸಿದೆ.
ಈ ಬಗ್ಗೆ ಎಸ್‌ಎಫ್‌ಐನ ಕೇರಳ ರಾಜ್ಯ ಕಾರ್ಯದರ್ಶಿ ಪಿಎಂ ಅರ್ಶೋ ಮಾತನಾಡಿದ್ದು, ನಾವು ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇವೆ, ಇದು ಕಾನೂನು ಮಾತ್ರವಲ್ಲದೆ ರಾಜ್ಯಪಾಲರಿಗೆ ರಾಜಕೀಯ ಹಿನ್ನಡೆಯೂ ಆಗಿದೆ. ಅವರು ತಮ್ಮ ಸಾಂವಿಧಾನಿಕ ಸ್ಥಾನವನ್ನು ರಾಜಕೀಯವಾಗಿ ಬಳಸಿಕೊಂಡರು ಮತ್ತು ಕೇರಳದ ಕ್ಯಾಂಪಸ್‌ಗಳಲ್ಲಿ ಆರೆಸ್ಸೆಸ್ ಅಜೆಂಡಾವನ್ನು ಜಾರಿಗೆ ತರಲು ಪ್ರಯತ್ನಿಸಿದ್ದರು, ಆದರೆ ಇದೀಗ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.