- ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಪ್ರಕರಣ
- ಮೈಸೂರಿನ ದೇವರಾಜ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು
ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ, ಹಾಲಿ ಶಾಸಕ ಡಾ. ಸಿ ಎನ್ ಅಶ್ವತ್ಥ ನಾರಾಯಣ ವಿರುದ್ಧ ದಾಖಲಾಗಿರುವ ಎಫ್ಐಆರ್‌ಗೆ ಸಂಬಂಧಿಸಿದಂತೆ ತನಿಖೆಗೆ ನಾಲ್ಕು ವಾರ ತಡೆ ನೀಡಿ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ.
ತಮ್ಮ ವಿರುದ್ಧದ ಎಫ್ಐಆರ್‌ಗೆ ತಡೆ ಕೋರಿ ಶಾಸಕ ಡಾ. ಸಿ ಎನ್ ಅಶ್ವತ್ಥ ನಾರಾಯಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕ ಸದಸ್ಯ ಪೀಠವು ವಿಚಾರಣೆ ನಡೆಸಿತು.
“ಉರಿಗೌಡ ಮತ್ತು ನಂಜೇಗೌಡ ಟಿಪ್ಪುವನ್ನು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು” ಎಂದು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿದ್ದ ಸಂಬಂಧ ಮೈಸೂರಿನಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಅಶ್ವತ್ಥ ನಾರಾಯಣ ವಿರುದ್ಧದ ತನಿಖೆಗೆ ನಾಲ್ಕು ವಾರಗಳ ತಡೆ ನೀಡಲಾಗಿದ್ದು, ನಾಲ್ಕು ವಾರಗಳ ಒಳಗೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಾಲಯವು ವಿಚಾರಣೆ ಮುಂದೂಡಿತು.
ಅಶ್ವತ್ಥ ನಾಯಾರಣ ಪರ ವಕೀಲ ಪ್ರಭುಲಿಂಗ ನಾವದಗಿ, “ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ. 17ರಂದು ಡಾ. ಬಿ ಜಿ ವಿಜಯಕುಮಾರ್ ಮತ್ತು ಆರ್ ಮೂರ್ತಿ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ ನೀಡಿದ್ದಾರೆ. ಎ. 24ರಂದು ಕವಿತಾ ಕಾಳೆ ಎಂಬವರು ಇದೇ ವಿಚಾರವಾಗಿ ದೂರು ನೀಡಿದ್ದು, ಇದಕ್ಕೂ ಪೊಲೀಸರು ಎನ್‌ಸಿಆರ್ ನೀಡಿದ್ದಾರೆ. ಆದರೆ, ಇದೇ ವಿಚಾರ ಪ್ರಸ್ತಾಪಿಸಿ ಮೇ 24ರಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ನೀಡಿರುವ ದೂರು ಆಧರಿಸಿ ಮೈಸೂರಿನ ದೇವರಾಜ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ವಿವರಿಸಿದರು.
“ದೂರಿಗೆ ಸಂಬಂಧಿಸಿದಂತೆ ಪೊಲೀಸರು ಕ್ರಮಕೈಗೊಳ್ಳದಿದ್ದಾಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಬೇಕು. ಅಶ್ವತ್ಥ ನಾರಾಯಣ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ ಎನ್ನಲಾದ ಸಭೆಯಲ್ಲಿ ಲಕ್ಷ್ಮಣ್ ಭಾಗಿಯಾಗಿಲ್ಲ. ಸಭೆಗೆ ಸಂಬಂಧಿಸಿದ ಆಡಿಯೋ, ವಿಡಿಯೋ ಅಥವಾ ಸುದ್ದಿ ತುಣುಕುಗಳನ್ನು ಹಾಜರುಪಡಿಸಲಾಗಿಲ್ಲ. ಈ ಸಂಬಂಧ ತನಿಖಾಧಿಕಾರಿ ಕಾರ್ಯಪ್ರವೃತ್ತರಾಗಲು ದಾಖಲೆಗಳನ್ನು ಹಾಜರುಪಡಿಸಬೇಕು. ಇದಕ್ಕೆ ವಿರುದ್ಧವಾಗಿ ನಿಂದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗಿ, ಸ್ಪಷ್ಟನೆ ನೀಡಲಾಗಿದೆ” ಎಂದು ಪೀಠದ ಗಮನಸೆಳೆದರು.
ಈ ಸುದ್ದಿ ಓದಿದ್ದೀರಾ? ಎಫ್‌ಐಆರ್ ರದ್ದುಕೋರಿ ಹೈಕೋರ್ಟ್‌ಗೆ ಅಶ್ವತ್ಥ ನಾರಾಯಣ ಅರ್ಜಿ ಸಲ್ಲಿಕೆ
“ಮೊದಲು ಎರಡು ಎನ್‌ಸಿಆರ್ ಮುಕ್ತಾಯಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಒದಗಿಸಬೇಕು. ಸರ್ಕಾರ ಬದಲಾದ ಮಾತ್ರಕ್ಕೆ ರಾತ್ರೋರಾತ್ರಿ ಏನು ಬದಲಾವಣೆಯಾಗಿದೆ? ಪೊಲೀಸರು ಈ ರೀತಿ ನಡೆದುಕೊಳ್ಳಲಾಗದು” ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ, “ರಾತ್ರೋರಾತ್ರಿ ಏನು ಬದಲಾಗಿದೆ ಎಂದು ನೀವು ಹೇಳುವಂತಿಲ್ಲ. ಇದು ಮರೆಮಾಚುವಿಕೆಯಾಗುತ್ತದೆ” ಎಂದು ಹೇಳಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ “ಏನೆಲ್ಲಾ ದಾಖಲೆಗಳು ಇವೆ ಎಂಬುದನ್ನು ತನಿಖಾಧಿಕಾರಿ ಪರಿಶೀಲಿಸಲಿದ್ದಾರೆ. ಆರೋಪಿಗೆ ಪೊಲೀಸರು ಯಾವುದೇ ನೋಟಿಸ್ ಜಾರಿ ಮಾಡಿಲ್ಲ” ಎಂದರು.
ವಾದ – ಪ್ರತಿವಾದ ಆಲಿಸಿದ ಪೀಠವು “ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಆರ್ ದಾಖಲಿಸಿದ ಬಳಿಕ ಮತ್ತೊಮ್ಮೆ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗದು ಎಂಬ ಅರ್ಜಿದಾರರ ಪರ ಹಿರಿಯ ವಕೀಲರ ವಾದವನ್ನು ಮೇಲ್ನೋಟಕ್ಕೆ ಒಪ್ಪಲಾಗದು. ಇದನ್ನು ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು” ಎಂದು, ತನಿಖೆಗೆ ತಡೆ ನೀಡಿ ಆದೇಶಿಸಿತು.