- ಹೆಚ್ ಡಿ ದೇವೇಗೌಡರಿಗೆ ಅಗೌರವ ತರುವ ಕೆಲಸ ಮಾಡಿಲ್ಲ
- ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಲೋಕಸಭೆಯಲ್ಲಿ ಗೆಲ್ಲಬೇಕು
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿಶ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮಾತಾಡಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ. ದೇವೇಗೌಡರ ಬಗ್ಗೆ ನರೇಂದ್ರ ಮೋದಿ ನಂಬಿಕೆ ಇಟ್ಟಿದ್ದಾರೆ” ಎಂದರು.
“ದೇವೇಗೌಡರಿಗೆ ಅಗೌರವ ತರುವ ಕೆಲಸ ಮಾಡಿಲ್ಲ. ದೇವೇಗೌಡರು ಸಣ್ಣ ಕಾರ್ಯಕರ್ತರನ್ನು ಬಿಟ್ಟು ಕೊಡಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಯಾರೂ ಭಯ ಬೀಳುವುದು ಬೇಡ. ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. ನಾನು ಅಥವಾ ಪ್ರತಾಪ್ ಸಿಂಹ ಸಂಸದನಾಗಬೇಕು ಅಂತೇನಿಲ್ಲ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು, ಅದೇ ನಮ್ಮ ಗುರಿ” ಎಂದರು.
“ಮೋದಿ ಅವರು ದೇವೇಗೌಡರ ಜೊತೆ ಮಾತಾಡಿದ್ದಾರೆ ಎಂದ ಮೇಲೆ ಎಲ್ಲ ಗೋಡೆ ಬಿದ್ದು ಹೋಯ್ತು. ದೇವೇಗೌಡರಿಗೆ ಇಡೀ ದೇಶ ಗೌರವ ನೀಡುತ್ತದೆ. ಕಾಂಗ್ರೆಸ್ ಮುಕ್ತ ಮಾಡಬೇಕು ಅಂತ ಮೋದಿ ಹೇಳಿದ್ದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲ. ಮೋದಿಯನ್ನು ಸೋಲಿಸಲು ಆಗಲ್ಲ. ದೇವೇಗೌಡರು ಸಂಪೂರ್ಣ ಬೆಂಬಲ ಮೋದಿಗೆ ನೀಡಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಚಿವ ಡಿ.ಸುಧಾಕರ್ ವಿರುದ್ಧದ ದಲಿತ ದೌರ್ಜನ್ಯ ಪ್ರಕರಣಕ್ಕೆ ಹೈಕೋರ್ಟ್ ತಡೆ
“ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಗ್ಯಾರಂಟಿಗಳಿಂದ. ಸಿದ್ದರಾಮಯ್ಯ ಅವರಿಗೆ ದೇವರಾಜ ಅರಸು ಪರಿಸ್ಥಿತಿ ಬರುವುದು ಬೇಡ. ದೇವರಾಜ ಅರಸು ಕುಟುಂಬಕ್ಕೆ ಒಂದು ಎಂಎಲ್ಸಿ ಸ್ಥಾನ ಕೊಟ್ಟಿಲ್ಲ. ಬಿ ಕೆ ಹರಿಪ್ರಸಾದ್ ಅದನ್ನೇ ಹೇಳಿದ್ದಾರೆ” ಎಂದರು.
“ರಾಜ್ಯ ಬರಗಾಲ ಎದುರಿಸುತ್ತಿದ್ದರೂ ರೈತರ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಐದು ಗ್ಯಾರಂಟಿಯಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿದೆ. ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ” ಎಂದು ಕಿಡಿಕಾರಿದರು.
ಕೆಂಪಣ್ಣ ಎಲ್ಲಿ ಇದ್ದೀರಾ?
“ಬಿಜೆಪಿ ವಿರುದ್ಧ ದಿನನಿತ್ಯ ಸುದ್ದಿಗೋಷ್ಠಿ ಮಾಡುತ್ತಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗ ಎಲ್ಲಿ ಇದ್ದೀರಾ? ಜೆಡಿಎಸ್ ಬದುಕಿದೆ. ಹೋರಾಟ ಮಾಡುತ್ತೇವೆ. ರೈತರ ಪರ ನಾವು ಹೋರಾಟ ಮಾಡುತ್ತೇವೆ. ಇದೇ 26ರಂದು ಕಲಬುರಗಿಯಿಂದ ಕೋರ್ ಕಮಿಟಿ ಪ್ರವಾಸ ಆರಂಭ ಆಗುತ್ತದೆ” ಎಂದು ಹೇಳಿದರು.
ಇಬ್ಬರೂ ಒಂದೇ ಬಾವಿಗೆ ಹಾರುವ ಉದ್ದೇಶವೇ.