ಒಂದೇ ಒಂದು ತಪ್ಪು ಸಾಬೀತಾದರೆ ರಾಜಕೀಯದಿಂದಲೇ ಹೊರಹೋಗುತ್ತೇನೆ ಎನ್ನುತ್ತಿದ್ದ ಕುಮಾರಸ್ವಾಮಿ ಅವರು ಒತ್ತುವರಿ ಮಾಡಿಕೊಂಡಿದ್ದ ಭೂಮಿ ಈಗ ಮರಳಿ ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾಗಿದೆ. ಆರೋಪ ಸಾಬೀತಾಗಿದೆ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರ?
ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಮತ್ತು ಅವರ ಸಂಬಂಧಿಗಳ ಭೂ ಒತ್ತುವರಿ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿದೆ. ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ತೋಟದ ಮನೆ ನಿರ್ಮಿಸಿಕೊಂಡಿರುವ ಎಚ್.ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳ ಅಧೀನದಲ್ಲಿ ಒಟ್ಟು 110.32 ಎಕರೆ ಭೂಮಿಯಿದೆ. ಈ ಪೈಕಿ ಸುಮಾರು ಅರ್ಧದಷ್ಟು ಭೂಮಿ ಸರ್ಕಾರದ್ದು, ಅದನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಒತ್ತುವರಿಯಾಗಿದ್ದ ಭೂಮಿಯನ್ನು ಮಂಗಳವಾರ ಅಧಿಕಾರಿಗಳು ತೆರವುಗೊಳಿಸಿ, ಸರ್ಕಾರ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಈ ಹಿಂದೆ, ಒತ್ತುವರಿ ವಿಚಾರವಾಗಿ ಹಾರಾಡಿದ್ದು, ತಮ್ಮನ್ನು ಮುಟ್ಟೋಕಾಗುತ್ತಾ ಎಂದೆಲ್ಲ ಸವಾಲು ಹಾಕಿದ್ದ ಕುಮಾರಸ್ವಾಮಿ ಅವರು ಈಗ ಮೌನವಾಗಿದ್ದಾರೆ.
ಅಂದಹಾಗೆ, ಕೇತಗಾನಹಳ್ಳಿ ಬಳಿಯ ಸರ್ವೆ ನಂ.7, 8, 9, 10, 16, 17 ಮತ್ತು 79ರಲ್ಲಿ ಇರುವ 71.3 ಗೋಮಾಳವನ್ನು ಕುಮಾರಸ್ವಾಮಿ ಮತ್ತು ಸಂಬಂಧಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಸರ್ವೇ ನಂ. 79ರ ಭೂಮಿಯನ್ನು ಸರ್ವೇ ಮಾಡದೆ, ಸರ್ವೆ ನಂ.7, 8, 9, 10, 16, 17ರಲ್ಲಿ ಮಾತ್ರವೇ ಸರ್ವೇ ಮಾಡಿದ್ದು, 14 ಎಕರೆ ಮಾತ್ರವೇ ಒತ್ತುವರಿಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 14 ಎಕರೆ ಭೂಮಿಯ ಒತ್ತುವರಿ ತೆರವುಗೊಳಿಸಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಕೂಡ, ”ದಾಖಲೆಗಳ ಪ್ರಕಾರ 71 ಎಕರೆ 30 ಗುಂಟೆ ಒತ್ತುವರಿಯಾಗಿದೆ. ಇದರಲ್ಲಿ ಎಚ್.ಡಿ ಕುಮಾರಸ್ವಾಮಿ ಅವರೇ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ, ಅವರ ಚಿಕ್ಕಮ್ಮ ಸಾವಿತ್ರಮ್ಮ, ಮದ್ದೂರಿನ ಮಾಜಿ ಶಾಸಕ ಡಿ.ಸಿ ತಮ್ಮಣ್ಣ, ಸಂಸದ ಡಾ. ಸಿ.ಎನ್ ಮಂಜುನಾಥ್, ಅನಿತಾ ಕುಮಾರಸ್ವಾಮಿ ಸೇರಿದಂತೆ ಹಲವು ಒತ್ತುವರಿಯಲ್ಲಿ ಭಾಗಿಯಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
ಸದ್ಯಕ್ಕೆ, 14 ಎಕರೆ ಭೂಮಿಯನ್ನು ಒತ್ತುವರಿಯಿಂದ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಹಿಂದೆ, ತಾವು ಒತ್ತುವರಿಯನ್ನೇ ಮಾಡಿಕೊಂಡಿಲ್ಲ. ಆ ಎಲ್ಲ ಭೂಮಿಯೂ ತಮ್ಮದೇ ಎಂದಿದ್ದ ಕುಮಾರಸ್ವಾಮಿ ಅವರೂ ಈಗ ಹೆಚ್ಚು ಮಾತನಾಡುತ್ತಿಲ್ಲ. ತಮ್ಮ ಭೂಮಿಯನ್ನು ಸರ್ಕಾರ ಕಸಿದುಕೊಂಡುಬಿಟ್ಟಿದೆ ಎಂದು ಗಟ್ಟಿದನಿಯಲ್ಲಿ ಆರೋಪಿಸುತ್ತಿಲ್ಲ.
ಕುಮಾರಸ್ವಾಮಿ ಅವರ ಮೌನ ಮತ್ತು ಅಧಿಕಾರಿಗಳ ತೆರವು ಕಾರ್ಯವು ಕುಮಾರಸ್ವಾಮಿ ಮತ್ತು ಅವರ ಸಂಬಂಧಿಗಳು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರು ಎಂಬುದನ್ನು ದೃಢಪಡಿಸುತ್ತದೆ. ಕುಮಾರಸ್ವಾಮಿ ಅವರು ಅಕ್ಷರಶಃ ಆರೋಪಿ ಎಂಬುದನ್ನು ಒತ್ತಿ ಹೇಳುತ್ತದೆ. ಕುಮಾರಸ್ವಾಮಿ ಅವರು ತಪ್ಪು ಮಾಡಿದ್ದಾರೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ.
ಇದು ಮಾತ್ರವಲ್ಲದೆ, ಬೆಂಗಳೂರಿನ ಗಂಗೇನಹಳ್ಳಿ ಡಿನೋಟಿಫಿಕೇಷ್ ಹಗರಣ ಆರೋಪ ಮತ್ತು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಬೋಗಸ್ ಕಂಪನಿಗೆ 550 ಎಕರೆ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ಗುತ್ತಿಗೆ ನೀಡಿ, ಹಗರಣ ನಡೆಸಿದ್ದಾರೆ ಎಂಬ ಆರೋಪಗಳೂ ಇವೆ. ಈ ಹಗರಣಗಳ ತನಿಖೆಯೂ ನಡೆಯುತ್ತಿದೆ.
ಜೊತೆಗೆ, 2006ರಿಂದ 20028ರವರೆಗೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು 2007ರಲ್ಲಿ ಬೆಂಗಳೂರಿನ ಹಲಗೆವಡೇರಹಳ್ಳಿಯಲ್ಲಿ ಸರ್ವೇ ನಂ. 128, 137ರಲ್ಲಿನ 2.24 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿದ್ದರು. ಆ ಭೂಮಿಯು ಖಾಸಗಿ ಬಿಲ್ಡರ್‌ಗಳಿಗೆ ದೊರೆಯುವಂತೆ ಮಾಡಿದ್ದರು ಎಂಬ ಪ್ರಕರಣವೂ ಕುಮಾರಸ್ವಾಮಿ ವಿರುದ್ಧ ಇದೆ. ತನಿಖೆಯೂ ನಡೆಯುತ್ತಿದೆ.
ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಕುಮಾರಸ್ವಾಮಿ ಅವರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಕೂಡ ಕುಮಾರಸ್ವಾಮಿ ಅವರ ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣದಲ್ಲಿ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪ್ರಕರಣವನ್ನು ಕೂಲಂಕಷ ತನಿಖೆ ನಡೆಸಬೇಕು. ವಿಚಾರಣೆಯನ್ನು ಮುಂದುವರೆಸಬೇಕು ಎಂಬ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ.
ಹೀಗಾಗಿ, ಹಾಲಿ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರ ವಿರುದ್ಧದ ಪ್ರಮುಖ ನಾಲ್ಕು ಹಗರಣಗಳು ಮತ್ತು ಪ್ರಕರಣಗಳ ತನಿಖೆ ನಡೆಯುತ್ತಿದೆ. ಮೂರು ಭಾರೀ ಹಗರಣಗಳಲ್ಲಿ ಕುಮಾರಸ್ವಾಮಿ ಅವರು ಆರೋಪಿಯಾಗಿದ್ದಾರೆ. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು, ತಮ್ಮ ಖಾಸಗಿ ಅನುಭವಕ್ಕೆ ಪಡೆದುಕೊಂಡಿದ್ದ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾರೆ.
ಈ ವರದಿ ಓದಿದ್ದೀರಾ?: ಹಗರಣಗಳ ಸುಳಿಯಲ್ಲಿ ಕೇಂದ್ರ ಸಚಿವ ಎಚ್‌ಡಿಕೆ; ರಾಜಕೀಯದಲ್ಲಿ ಭ್ರಷ್ಟಾಚಾರದ ಕಾರ್ಮೋಡ
ಇಂತಹ ಹಗರಣ-ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಮುಂದುವರೆಯಲು ಸಾಧ್ಯವೇ? ಸಣ್ಣ-ಪುಟ್ಟ ಆರೋಪಗಳು ಕೇಳಿಬಂದಾಕ್ಷಣ ಕಾಂಗ್ರೆಸ್ ಅಥವಾ ಇನ್ನಿತರ ಪಕ್ಷಗಳ ಸಚಿವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಪ್ರತಿಭಟನೆ, ಕ್ಯಾಂಪೇನ್‌ಗಳು, ಪಾದಯಾತ್ರೆಗಳನ್ನು ನಡೆಸುತ್ತದೆ. ಇತ್ತೀಚೆಗೆ, ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಆರೋಪ ಬಂದಾಗ, ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹ ಮಾಡಿತ್ತು. ಆದರೆ, ಈಗ ಕುಮಾರಸ್ವಾಮಿ ಕೂಡ 42 ಎಕರೆ ಜಮೀನು ಒತ್ತವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಅದರಲ್ಲಿ, 14 ಎಕರೆ ಭೂಮಿಯನ್ನು ಅಧಿಕಾರಿ ತೆರವುಗೊಳಿಸಿದ್ದಾರೆ. ಆದರೂ, ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ಅವರು ಪ್ರತಿಭಟಿಸುತ್ತಿಲ್ಲ. ರಾಜೀನಾಮೆ ನೀಡಬೇಕು ಎಂದು ಹೇಳುತ್ತಿಲ್ಲ. ಬದಲಾಗಿ, ಕುಮಾರಸ್ವಾಮಿ ಜತೆಗೆ ನಿಂತಿದ್ದಾರೆ.
ಹಗರಣಗಳ ಆರೋಪಿಯಾಗಿರುವ ಕುಮಾರಸ್ವಾಮಿ ಅವರು ತಾವೇ ಖುದ್ದಾಗಿ ರಾಜೀನಾಮೆ ನೀಡುತ್ತಾರೆಯೇ? ಅಥವಾ ‘ನಾ ಖಾವೂಂಗ – ನಾ ಖಾನೇದೂಂಗ’ ಎನ್ನುತ್ತಲೇ ಪ್ರಚಾರ ಪಡೆದ, ಅಧಿಕಾರಕ್ಕೆ ಬಂದ ಮೋದಿ ಅವರು ತಮ್ಮ ಸಂಪುಟದಿಂದ ಕುಮಾರಸ್ವಾಮಿ ಅವರನ್ನು ಕೈಬಿಡುತ್ತಾರೆಯೇ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ತಾವು ಕ್ಲೀನ್ ಹ್ಯಾಂಡ್, ಯಾವುದೇ ತಪ್ಪು ಮಾಡಿಲ್ಲ. ಒಂದೇ ಒಂದು ತಪ್ಪು ಸಾಬೀತಾದರೆ ರಾಜಕೀಯದಿಂದಲೇ ಹೊರಹೋಗುತ್ತೇನೆ ಎನ್ನುತ್ತಿದ್ದ ಕುಮಾರಸ್ವಾಮಿ ಅವರು ಒತ್ತುವರಿ ಮಾಡಿಕೊಂಡಿದ್ದ ಭೂಮಿ ಈಗ ಮರಳಿ ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾಗಿದೆ. ಅವರ ವಿರುದ್ದದ ಆರೋಪವೊಂದು ಸಾಬೀತಾಗಿದೆ. ಈಗ, ಕುಮಾರಸ್ವಾಮಿ ಅವರು ಯಾವಾಗ ಮಂತ್ರಿಗಿರಿಗೆ ರಾಜೀನಾಮೆ ಕೊಡುತ್ತಾರೆ ಎಂಬ ಪ್ರಶ್ನೆ ಅವರ ಮುಂದಿದೆ.
ಮುರು ಎಕರೆ ಭೂಮಿಯ ಮಾಲೀಕನ ಮಗನ ಕರ್ಮ ಕಾಂಡ ಸಾಕಷ್ಟು ಇವೆ ಇವನಿಗೆ ಮೋದಿಯ ರಕ್ಸಣೆ ಬೇರೆ ಇದೆ ಹಾಗೂ ಇವರ ಕುಟುಂಬ ಅನೈತಿಕ ಅತ್ಯಾಚಾರ ಹಾಗರಣಗಳಲ್ಲಿ ಸಿಲುಕಿದೆ ಇದೆಲ್ಲಾ ಮೋದಿ ಮತ್ತು ಅವರ ಭಕ್ತರಿಗೆ ಕಾಣಿಸುತ್ತಿಲ್ಲ