ಲೈಗಿಂಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಕೇಸ್‌ನಲ್ಲಿ ಜಾಮೀನಿನ ಮೇಲೆ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿರುವ ಎಚ್ ಡಿ ರೇವಣ್ಣಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ.
ಹೊಳೆನರಸೀಪುರದಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಜಾಮೀನು ಪಡೆಯಲು ರೇವಣ್ಣ ಮುಂದಾಗಿದ್ದು, ಬೆಂಗಳೂರಿನಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಅರ್ಜಿ ಸಲ್ಲಿಸಿದ್ದಾರೆ.
ಎಚ್ ಡಿ ರೇವಣ್ಣ ಗುರುವಾರ ಬೆಳಗ್ಗೆ ಬೆಂಗಳೂರಿನ ಜಯನಗರದ ಗಣಪತಿ ದೇವಸ್ಥಾನ, ಬಸವನಗುಡಿಯ ಗಂಗಾಧರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ನ್ಯಾಯಾಧೀಶರ ಸೂಚನೆ ಮೇರೆಗೆ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ಮಂಜೂರು ನಿರಾಕರಣೆಯಾದರೆ ಮತ್ತೆ ರೇವಣ್ಣ ಬಂಧನವಾಗುವ ಸಾಧ್ಯತೆ ಹೆಚ್ಚಿದೆ.
ಎಸ್‌ಐಟಿ ಮೇಲ್ಮನವಿ?
ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ಪಡೆದಿರುವ ರೇವಣ್ಣ ಮಂಗಳವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದೇ ಪ್ರಕರಣದಲ್ಲಿ 2ನೇ ಆರೋಪಿ ಸತೀಶ್ ಬಾಬು ವಿಚಾರಣೆ ನಡೆಸಿರುವ ಎಸ್ಐಟಿ ಮಹತ್ವದ ಸಾಕ್ಷಿ ಕಲೆ ಹಾಕಿದೆ ಎಂದು ತಿಳಿದುಬಂದಿದ್ದು, ಹೀಗಾಗಿ ರೇವಣ್ಣ ಜಾಮೀನು ರದ್ದು ಕೋರಿ ಹೈಕೋರ್ಟ್‌ಗೆ ಎಸ್‌ಐಟಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
