ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಲೋಕಸಭಾ ಸ್ಪರ್ಧೆಯ ಕಾರಣದಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆ ಇದೀಗ ರಾಜ್ಯ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆಯ ವಿಚಾರವಾಗಿದೆ. ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ಪರ್ಧೆಗೆ ಇಳಿಸಲಾಗುವುದು ಎನ್ನುವ ಸುದ್ದಿಗಳ ನಡುವೆ ಸ್ವತಃ ಕುಮಾರಸ್ವಾಮಿ ಅವರು ಇಂದು ಸ್ಪಷ್ಟನೆ ನೀಡಿದ್ದಾರೆ.
ಚನ್ನಪಟ್ಟಣ ಬಮೂಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್‌ಡಿಕೆ, ನಿಖಿಲ್ ಎರಡು ಬಾರಿ ಸೋತು ಅವನು ಅನುಭವಿಸುತ್ತಿರುವ ನೋವು ಏನೆಂದು ನನಗೆ ಮಾತ್ರ ಗೊತ್ತು. ಹೀಗಾಗಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಅವನನ್ನು ಕಣಕ್ಕಿಳಿಸುವುದಿಲ್ಲ ಎಂದು ಬಹಿರಂಗವಾಗಿ ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯುವಕನಿಗೆ ಲೈಂಗಿಕ ದೌರ್ಜನ್ಯ ಆರೋಪ : ಸೂರಜ್ ರೇವಣ್ಣ ವಿರುದ್ಧ ಎಫ್‌ಐಆರ್
ಚನ್ನಪಟ್ಟಣ ಉಪಚುನಾವಣೆಗೆ ಸಿ ಪಿ ಯೋಗೇಶ್ವರ್ ಆಗಬಹುದು. ಇಲ್ಲ ಜೆಡಿಎಸ್‌ನವರೇ ಆಗಬಹುದು, ಎನ್‌ಡಿಎ ಅಭ್ಯರ್ಥಿ ಯಾರೇ ಆದರೂ ನಾವು ಒಗ್ಗೂಡಿ ಕೆಲಸ ಮಾಡೋಣ ಎಂದರು.
ಹಾಲು ಉತ್ಪಾದಕರಿಗೆ ದೇಶಾದ್ಯಂತ ಪ್ರೋತ್ಸಾಹಧನ ಕೊಡುವಂತೆ ಪ್ರಧಾನಿ ಅವರಿಗೆ ಮನವಿ ಮಾನಾಡುತ್ತೇನೆ. ದೇಶದ ಎಲ್ಲ ರೈತರಿಗೆ 2 ರಿಂದ 3 ರೂ. ಪ್ರತಿ ಲೀಟರ್‌ಗೆ ಕೊಡುವಂತೆ ಮನವೊಲಿಸುತ್ತೇನೆ ಎಂದರು.
ಚನ್ನಪಟ್ಟಣ ಉದ್ದಾರ ಮಾಡುತ್ತೇನೆ ಎಂದು ಬಂದಿರುವವರನ್ನು ಮೊದಲು ಚನ್ನಪಟ್ಟಣ ತಾಲೂಕಿಗೆ ಬರಬೇಕಿರುವ 61 ಕೋಟಿ ಹಾಲಿನ ಪ್ರೋತ್ಸಾಹಧನ ಕೊಡಿ ಎಂದು ಕೇಳಿ ಎಂದು ಡಿ ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
