ಸಚಿವರು, ಶಾಸಕರನ್ನು ಮಧುಬಲೆಗೆ (ಹನಿಟ್ರ್ಯಾಪ್) ಬೀಳಿಸುವ ಯತ್ನ ವಿಚಾರವಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಂಗಳವಾರ ಮತ್ತಷ್ಟು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ತುಮಕೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ನನಗೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದೆ. ಎರಡು ಬಾರಿ ಬಂದಾಗ ಹುಡುಗಿಯರು ಬೇರೆ ಬೇರೆ ಆಗಿದ್ದರು. ಆದರೆ ಎರಡು ಬಾರಿಯೂ ಒಬ್ಬನೇ ಹುಡುಗ ಬಂದಿದ್ದನು” ಎಂದು ಹೇಳಿದರು.
”ಹನಿಟ್ರ್ಯಾಪ್ ಮಾಡಲು ನನ್ನ ಮನೆಗೆ ಎರಡು ಸಲ ಒಬ್ಬನೇ ಹುಡುಗ ಹುಡುಗಿಯರನ್ನು ಕರೆದುಕೊಂಡು ಬಂದಿದ್ದನು. ಆದರೆ, ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರು ಇದ್ದರು. ಎರಡನೇ ಬಾರಿ ಬಂದಾಗ ಹೈಕೋರ್ಟ್ ಲಾಯರ್ ಅಂತಾ ಹೇಳಿದ್ದಳು. ಮೊದಲ ಬಾರಿ ಬಂದಾಗ ಲಾಯರ್ ಅಂತಾ ಹೇಳಿರಲಿಲ್ಲ. ಪರ್ಸನಲ್ ಆಗಿ ಮಾತನಾಡಬೇಕು ಅಂತಾ ಹೇಳಿದ್ದಳು” ಎಂದರು.
“ಮನೆಯಲ್ಲಿ ಸಿಸಿಟಿವಿ ಇರಲಿಲ್ಲ. ಹಾಗಾಗಿ ಸಿಸಿಟಿವಿ ವಿಡಿಯೋ ನಮ್ಮ ಬಳಿ ಇಲ್ಲ. ಯಾರು ಬಂದು ಹೋಗಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇನೆ. ಅಪರಿಚಿತರು ಅಂತ ದೂರಿನಲ್ಲಿ ದಾಖಲಿಸಿದ್ದೇನೆ” ಎಂದು ಮಾಹಿತಿ ನೀಡಿದರು.
ಗೃಹ ಸಚಿವರಿಗೆ ಇಂದು ದೂರು ಸಲ್ಲಿಕೆ
”ಇಲ್ಲಿಯವರೆಗೂ ಯಾಕೆ ದೂರು ನೀಡಿಲ್ಲ ಅಂತಾ ಸಿಎಂ ಕೇಳಿದ್ದಾರೆ. ಇಂದು ದೂರು ನೀಡುತ್ತೇನೆ. ಮೂರು ಪುಟಗಳ ದೂರು ಬರೆದಿದ್ದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎಲ್ಲೇ ಇದ್ರೂ ಹುಡುಕಿಕೊಂಡು ಹೋಗಿ ದೂರು ನೀಡುತ್ತೇನೆ. ದೂರು ನೀಡಿದ ಬಳಿಕ ಎಫ್ ಐಆರ್ ಆಗುತ್ತದೆ. ಆಗ ದಾಖಲೆಗಳು ಬಹಿರಂಗವಾಗುತ್ತವೆ” ಎಂದು ತಿಳಿಸಿದರು.