ವಿರೋಧ ಪಕ್ಷದ ನಾಯಕನಾಗಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆಯೇ ಹೊರತು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೆಂದೂ ಅರ್ಜಿ ಹಾಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ವಿರೋಧ ಪಕ್ಷದ ನಾಯಕನಾಗಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಹಿರಿಯರು ನೀಡಿದ ವಿರೋಧ ಪಕ್ಷದ ನಾಯಕತ್ವದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದ್ದೇನೆ. ನಾನೇನೂ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಇದಕ್ಕಾಗಿ ನಾನಂತೂ ಅರ್ಜಿ ಹಾಕಿಲ್ಲ. ಆ ಬಗ್ಗೆ ಯೋಚಿಸಿಯೇ ಇಲ್ಲ. ಆದರೆ ಈ ರೀತಿ ಸಮಸ್ಯೆಯಾಗಿರುವುದು ನನಗೂ ನೋವು ತಂದಿದೆ. ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯಬೇಕಾಗಿತ್ತು” ಎಂದರು.
“ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. ಕರ್ನಾಟಕದಲ್ಲಿ ಒಂದೇ ಕಡೆ ಬದಲಾವಣೆಯಾಗುತ್ತಿಲ್ಲ. ಇಡೀ ದೇಶದಲ್ಲಿ ಎಲ್ಲ ಕಡೆ ಪಕ್ಷದಲ್ಲಿ ಚುನಾವಣೆ ನಡೆಯುತ್ತಿದೆ. ಇಲ್ಲಿ ಎಲ್ಲರ ಅಭಿಪ್ರಾಯ ಪಡೆಯಲಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ನರೇಗಾ ಯೋಜನೆ | 150 ಮಾನವ ದಿನಗಳಿಗೆ ಏರಿಕೆಗೆ ಸ್ಪಂದಿಸದ ಕೇಂದ್ರ ಸರ್ಕಾರ: ಸಚಿವ ಪ್ರಿಯಾಂಕ್ ಖರ್ಗೆ
“ಪಕ್ಷದಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ದೂರುವುದು ಬಹಳ ಬೇಸರ ಸಂಗತಿ. ರಾಷ್ಟ್ರೀಯ ನಾಯಕರು ನೀಡುವ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು. ಇಲ್ಲಿ ಎಲ್ಲರಿಗೂ ಅಭಿಪ್ರಾಯ ತಿಳಿಸುವ ಅವಕಾಶವಿದೆ. ಪಕ್ಷದಲ್ಲಿ ಇಂತಹ ಸಮಸ್ಯೆಗಳಿಂದಾಗಿ ಹಿನ್ನಡೆ ಉಂಟಾಗಿದೆ. ಕೆಲವೇ ದಿನಗಳಲ್ಲಿ ಇದು ಬಗೆಹರಿಯಲಿದೆ” ಎಂದರು.
“ಆರ್‌ಎಸ್‌ಎಸ್ ರಾಜಕೀಯ ಪಕ್ಷವಲ್ಲ. ನಾನು ಅಲ್ಲಿಗೆ ಹೋಗಿ ಸಲಹೆ ನೀಡಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು. ಅಂತಹ ವ್ಯವಸ್ಥೆ ಆರ್‌ಎಸ್‌ಎಸ್‌ನಲ್ಲಿ ಇಲ್ಲ. ನಾನು ಯಾರನ್ನೂ ಭೇಟಿ ಮಾಡಿಲ್ಲ. ರಾಜ್ಯಾಧ್ಯಕ್ಷರ ವಿಚಾರದಲ್ಲಿ ಪಕ್ಷದ ಹಿರಿಯ ನಾಯಕರು ಎಲ್ಲವನ್ನೂ ತೀರ್ಮಾನಿಸುತ್ತಾರೆ” ಎಂದು ತಿಳಿಸಿದರು.