ಹೃದಯಾಘಾತ ಸಂಭವಿಸಿದ ನಿಗದಿತ ಅವಧಿಯೊಳಗೆ ಚಿಕಿತ್ಸೆ ಒದಗಿಸಲು ‘ಸ್ಟೆಮಿ’ ಯೋಜನೆಯನ್ನು (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಶೀಘ್ರದಲ್ಲೇ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ವಿಶ್ವ ಹೃದಯದ ದಿನ ಇಂದು (ಸೆ.29) ವಾರ್ತಾ ಇಲಾಖೆ ಟ್ವೀಟ್ ಮಾಹಿತಿ ಹಂಚಿಕೊಂಡಿದ್ದು, “ಹೃದಯದ ಕಾಳಜಿಗೆ ಸ್ಟೆಮಿ ಯೋಜನೆ ಮೂಲಕ ರಾಜ್ಯದಾದ್ಯಂತ ಬಸ್ ನಿಲ್ದಾಣಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ “ಅಟೊಮೇಟೆಡ್ ಎಕ್ಸ್‌ಟರ್ನಲ್ ಡಿಫೈಬ್ರಿಲ್ಲೇಟರ್ಸ್” (ಎಇಡಿ) ಸಾಧನಗಳನ್ನು ಶೀಘ್ರದಲ್ಲೇ ಅಳವಡಿಸಲಿದೆ” ಎಂದು ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ, “ಸ್ವಸ್ಥ ಹೃದಯ ಆರೋಗ್ಯಯುತ ಬದುಕಿನ ಕೀಲಿಕೈ. ಆರೋಗ್ಯಕ್ಕೆ ಪುಷ್ಟಿ ನೀಡುವಂತಹ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ಮಾನಸಿಕ ಮತ್ತು ದೈಹಿಕ ಒತ್ತಡಗಳ ನಿಯಂತ್ರಣಕ್ಕಾಗಿ ಇರುವ ಸರಳ ಮಾರ್ಗಗಳನ್ನು ಅನುಸರಿಸಿ, ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಿ. ನೀವು ನಿಮ್ಮ ಹೃದಯದ ಕಾಳಜಿ ವಹಿಸಿದರೆ, ಹೃದಯ ನಿಮ್ಮ ದೇಹದ ಕಾಳಜಿ ವಹಿಸುತ್ತದೆ. ಮರೆಯದಿರಿ, ಹೃದಯ ಹಗುರಾಗಿದ್ದರೆ ಬದುಕು ಸುಂದರ” ಎಂದು ತಿಳಿಸಿದ್ದಾರೆ.
ಏನಿದು ‘ಸ್ಟೆಮಿ’ ಯೋಜನೆ
ಹೃದಯಾಘಾತ ಸಂಭವಿಸಿದ ಒಂದು ಗಂಟೆಯೊಳಗೆ ಅಗತ್ಯ ಚಿಕಿತ್ಸೆ ಒದಗಿಸಿ, ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಆರೋಗ್ಯ ಇಲಾಖೆ ರೂಪಿಸಿರುವ ಯೋಜನೆ ಹೆಸರು ಸ್ಟೆಮಿ. ಇದು ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು, ಶೀಘ್ರದಲ್ಲಿಯೇ ರಾಜ್ಯದಾದ್ಯಂತ ಜಾರಿ ಆಗಲಿದೆ.
ಇತ್ತೀಚೆಗೆ ಹಠಾತ್ ಹೃದಯಾಘಾತದಿಂದ ನಿಧನರಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆರೋಗ್ಯವಂತ ವ್ಯಕ್ತಿಗಳು ಸಹ 30-40 ವರ್ಷಗಳ ಆಸುಪಾಸಿನಲ್ಲಿಯೇ ಸಾವಿಗೀಡಾಗುವ ಪ್ರಕರಣಗಳು ವರದಿ ಆಗುತ್ತಿವೆ. ಇದಕ್ಕೆ ನಟ ಪುನೀತ್ ರಾಜ್‌ಕುಮಾರ್, ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಉದಾಹರಣೆ. ಇಂತಹ ಸಾವಿನ ಪ್ರಕರಣಗಳ ಪ್ರಮಾಣ ತಗ್ಗಿಸಲು ಮುಂದಾಗಿರುವ ಇಲಾಖೆ, ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿಯೇ ಹೃದಯ ಚಿಕಿತ್ಸೆಗೆ ಯೋಜನೆ ರೂಪಿಸಿದೆ.
ವ್ಯಕ್ತಿಗೆ ಹೃದಯಾಘಾತ ಸಂಭವಿಸಿದ ಒಂದು ಗಂಟೆ ನಿರ್ಣಾಯಕವಾಗಿರುತ್ತದೆ. ಈ ಅವಧಿಯಲ್ಲಿ ತಾಲ್ಲೂಕು ಮಟ್ಟದಲ್ಲಿಯೇ ಚಿಕಿತ್ಸೆ ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ‘ಸ್ಟೆಮಿ’ (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ 10 ಜಿಲ್ಲಾ ಆಸ್ಪತ್ರೆಗಳು ಸೇರಿ 45 ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಕಾರ್ಯಗತಗೊಳಿಸಲಾಗಿದೆ.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಘಟಕವನ್ನು ಕಾರ್ಯಾಚರಣೆಯ ಕೇಂದ್ರಗಳನ್ನಾಗಿ ಬಳಸಿಕೊಂಡು, ಸೇವೆ ನೀಡಲಾಗಿದೆ. ‘ಆಟೊಮೇಟೆಡ್ ಎಕ್ಸ್‌ಟರ್ನಲ್ ಡಿಫೈಬ್ರಿಲ್ಲೇಟರ್ಸ್ (ಎಇಡಿ)’ ಸಾಧನವು ನಿಂತುಹೋದ ಎದೆ ಬಡಿತವನ್ನು ಪುನರಾರಂಭಿಸಲು ಸಹಕಾರಿಯಾಗಲಿದೆ.