ಇಂದಿನಿಂದ 3 ಹೊಸ ಅಪರಾಧ ಕಾನೂನುಗಳು ಜಾರಿ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಕಾನೂನುಗಳ ಜಾರಿಗೆ ನಾವು ಒಂದು ಆ್ಯಪ್ ರಚಿಸಿದ್ದೇವೆ ಎಂದು ತಿಳಿಸಿದರು.
ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರುವ ಮೂರು ಹೊಸ ಕ್ರಿಮಿನಲ್ ಅಪರಾಧ ಕಾನೂನುಗಳು ಇಂದಿನಿಂದ (ಜುಲೈ 1) ಜಾರಿಗೆ ಬರಲಿವೆ. ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಳ್ಳಲಿರುವ ಕಾಯ್ದೆಗಳು. ಈ ಮೂರು ಕಾನೂನುಗಳು ಹಿಂದಿನ ಕ್ರಿಮಿನಲ್ ಕಾನೂನುಗಳಾದ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯ ಬದಲಿ ಕಾನೂನುಗಳಾಗಿವೆ.
ಬೆಂಗಳೂರಿನಲ್ಲಿ ಮಾತನಾಡಿದ ಡಾ.ಜಿ. ಪರಮೇಶ್ವರ್, ಇಂದಿನಿಂದ ಮೂರು ಹೊಸ ಕಾನೂನುಗಳು ಜಾರಿಯಾಗಿವೆ. ಕಾನೂನುಗಳ ಜಾರಿಗೆ ನಾವು ಒಂದು ಆ್ಯಪ್ ರಚಿಸಿದ್ದೇವೆ. ಇನ್ನು ಮುಂದೆ ದಾಖಲಾಗುವ ಪ್ರಕರಣಗಳಿಗೆ ನೂತನ ಕಾಯ್ದೆಗಳು ಅನ್ವಯ ಆಗಲಿದೆ. ಇದರ ಪರಿಣಾಮ ಏನು ಅಂತ ಈಗಲೇ ಹೇಳಲು ಆಗಲ್ಲ. ಸ್ವಲ್ಪ ದಿನಗಳ ನಂತರ ಇದರ ಯಶಸ್ಸಿನ ಬಗ್ಗೆ ಗೊತ್ತಾಗುತ್ತೆ. ಇಂದಿನಿಂದ ಆಚೆಗೆ ಯಾವೆಲ್ಲ ಪ್ರಕರಣಗಳು ಬರುತ್ತವೋ ಅವು ಹೊಸ ಕಾನೂನುಗಳಡಿ ದಾಖಲಾಗುತ್ತವೆ. ನಾವು ಹೊಸ ಕಾನೂನುಗಳ ಜಾರಿ ಬಗ್ಗೆ ಎಲ್ಲರಿಗೂ ತರಬೇತಿ ನೀಡಿದ್ದೇವೆ.
ಈ ಸುದ್ದಿ ಓದಿದ್ದೀರಾ? ಇಂದಿನಿಂದ ಮೂರು ಹೊಸ ಅಪರಾಧ ಕಾನೂನುಗಳು ಜಾರಿಗೆ
ಕಾನ್ಸ್ಟೇಬಲ್ನಿಂದ ಹಿಡಿದು ಎಲ್ಲರಿಗೂ ತರಬೇತಿ ನೀಡಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಆ್ಯಪ್ ಸಹ ಸಿದ್ಧಪಡಿಸಲಾಗಿದೆ. ಇಡೀ ದೇಶದಲ್ಲಿ ಮೂರು ಕಾನೂನುಗಳು ಜಾರಿಯಾಗಿವೆ. ಪ್ರತಿಕ್ರಿಯೆ ನೋಡಿಕೊಂಡು ಪರಿಷ್ಕರಣೆ ಮಾಡಬಹುದು ಎಂದು ಬೆಂಗಳೂರಿನಲ್ಲಿ ಗೃಹಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದರು.
ಇನ್ನು ಇದೇ ವೇಳೆ ವರ್ಷದಲ್ಲಿ ಮತ್ತೆ ಚುನಾವಣೆ ನಡೆಯಲಿದೆ ಎಂಬ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಸಚಿವ ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಬೊಮ್ಮಾಯಿ ಒಂದು ಮಾತನಾಡಿದರೆ, ಸಿ.ಟಿ.ರವಿ ಮತ್ತೊಂದು ರೀತಿ ಮಾತನಾಡುತ್ತಾರೆ. ಅವರಲ್ಲೇ ಹೊಂದಾಣಿಕೆ ಇಲ್ಲ. ಬಿಜೆಪಿಯವರು ನಮ್ಮ ಮೇಲೆ ಗೂಬೆ ಕೂರಿಸಬೇಕು. ಹಾಗಾಗಿ ನಮ್ಮ ಬಗ್ಗೆ ಮಾತನಾಡುತ್ತಾರೆ. ನಾವು ಜನಗಳಿಗೆ ಮಾತು ಕೊಟ್ಟಿದ್ದೇವೆ. ನಾವು ಮಾಡಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡುತ್ತಿದ್ದೇವೆ ಎಂದರು.
ವಾಲ್ಮೀಕಿ ನಿಗಮ ಹಗರಣ ಪ್ರಕರಣ ಸಂಬಂಧ ಮಾತನಾಡಿದ ಪರಮೇಶ್ವರ್, ವಾಲ್ಮೀಕಿ ಹಗರಣ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ಕೂಡ ತನಿಖೆ ನಡೆಸುತ್ತಿದ್ದಾರೆ. ಎಸ್ಐಟಿ ಕೂಡ ತನಿಖೆ ಮಾಡುತ್ತಿದ್ದಾರೆ. ತಪ್ಪು ಮಾಡಿದವರ ರಕ್ಷಣೆಗೆ ಸರ್ಕಾರ ನಿಲ್ಲುವುದಿಲ್ಲ. ತಪ್ಪು ಮಾಡಿದವರು ಯಾರೇ ಇದ್ದರೂ ಅವರಿಗೆ ಶಿಕ್ಷೆಯಾಗುತ್ತೆ. ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಯಾರೇ ಇದ್ದರೂ ಶಿಕ್ಷೆಯಾಗಲಿದೆ ಎಂದು ಹೇಳಿದರು.
