ಮೋದಿ ಮತ್ತು ಟ್ರಂಪ್ ಜನರಿಂದ ಆಯ್ಕೆಯಾದ ನಾಯಕರು. ಆದರೆ ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸದೆ ಪಲಾಯನ ಮಾಡುತ್ತಿದ್ದಾರೆ. ಇವರು ಜನನಾಯಕರೇ?
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಪ್- ಇಬ್ಬರೂ ಒಳ್ಳೆಯ ಸ್ನೇಹಿತರು. ಇಬ್ಬರೂ ದೊಡ್ಡ ದೇಶಗಳ ಪ್ರಭಾವಿ ನಾಯಕರು. ಇಬ್ಬರಲ್ಲೂ ಒಂದು ಸಮಾನ ಗುಣವಿದೆ. ಸಾಮ್ಯತೆ ಇದೆ. ಅದೇನೆಂದರೆ, ತಮ್ಮ ಮೇಲೆ ಗುರುತರ ಆಪಾದನೆಗಳು ಬಂದು, ಪ್ರತಿಪಕ್ಷಗಳಿಂದ ಪ್ರಶ್ನೆಗಳು ಎದುರಾದಾಗ- ಇಬ್ಬರೂ ಪಲಾಯನವಾದಿಗಳಾಗುತ್ತಾರೆ.
ಸದ್ಯಕ್ಕೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದೆ. ಪಹಲ್ಗಾಮ್ ಉಗ್ರ ದಾಳಿಯಿಂದ ಹಿಡಿದು ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆಯವರೆಗೆ- ಹತ್ತು ಹಲವು ಜ್ವಲಂತ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಆ ಸಮಸ್ಯೆಗಳಿಗೆ ಸಂಸತ್ತಿನ ಸಂಯಮದ ಸಂವಾದ ಪರಿಹಾರ ಒದಗಿಸಲಿದೆ. ಹಾಗಾಗಿ ಸಂಸತ್ತಿನಲ್ಲಿ ಪ್ರಶ್ನೆ ಎತ್ತಲು ಪ್ರತಿಪಕ್ಷಗಳು ಸಿದ್ಧವಾಗಿವೆ. ಅದು ಅವರ ಹಕ್ಕು ಮತ್ತು ಕರ್ತವ್ಯ. ಉತ್ತರಿಸಬೇಕಾದ್ದು ಆಳುವ ಸರ್ಕಾರದ ಜವಾಬ್ದಾರಿ. ಅದರಲ್ಲೂ ಪ್ರಧಾನಿ ಖುದ್ದು ಹಾಜರಿದ್ದು, ಪ್ರತಿಪಕ್ಷಗಳ ಪ್ರಶ್ನೆಗಳನ್ನು ಆಲಿಸಿ, ಸಂಯಮದಿಂದ ಉತ್ತರಿಸಬೇಕಾಗುತ್ತದೆ. ಪರಿಹಾರ ಕಂಡುಕೊಳ್ಳಬೇಕಾಗಿದೆ.
ದುರದೃಷ್ಟಕರ ಸಂಗತಿ ಎಂದರೆ, ಅದೇ ಸಮಯದಲ್ಲಿ ಪ್ರಧಾನಿ ಮೋದಿಯವರು ಇಂಗ್ಲೆಂಡ್ ಮತ್ತು ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಸವಾಲುಗಳಿಗೆ ಬೆನ್ನು ತೋರಿಸಿದ್ದಾರೆ. ಸಮಸ್ಯೆಗಳಿಂದ ಬಚಾವಾಗಿದ್ದಾರೆ. ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡಿದ್ದಾರೆ.
ಇದನ್ನೇ, ಮೋದಿಯವರ ಸ್ನೇಹಿತ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಾಡಿದ್ದಾರೆ.
ಸದ್ಯ ಅಮೆರಿಕದಲ್ಲಿ ಎಪ್‌ಸ್ಟೀನ್ ಫೈಲ್‌ಗಳದೇ ಸುದ್ದಿ. ಪ್ರತಿಪಕ್ಷಗಳು, ಸುದ್ದಿಮಾಧ್ಯಮಗಳು, ಸೋಷಿಯಲ್ ಮೀಡಿಯಾದಲ್ಲಿ ನಾಗರಿಕರು- ಇಡೀ ಅಮೆರಿಕವೇ ಎದ್ದುನಿಂತು ಎಪ್‌ಸ್ಟೀನ್ ಫೈಲ್ ಬಿಡುಗಡೆ ಮಾಡಿ ಎಂದು ಕೂಗುತ್ತಿದೆ.
ಇದನ್ನು ಓದಿದ್ದೀರಾ?: ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್ ಮತ್ತು ಅಮೆರಿಕ: ಏನದು ಎಪ್‌ಸ್ಟೀನ್ ಫೈಲ್ಸ್?
ಹಣಕಾಸು ಮತ್ತು ಲೈಂಗಿಕ ಹಗರಣದಲ್ಲಿ ಸಿಲುಕಿರುವ ತಮ್ಮ ಬಹುಕಾಲದ ಗೆಳೆಯ ಜೆಫ್ರಿ ಎಪ್‌ಸ್ಟೀನ್ ಜತೆಗಿನ ಟ್ರಂಪ್ ಸಂಬಂಧದ ಕುರಿತ ಚಿತ್ರಗಳು ಮತ್ತು ವಿಡಿಯೋ ತುಣುಕುಗಳನ್ನು ಮರುಪ್ರಸಾರ ಮಾಡುತ್ತ ಅಮೆರಿಕದ ಜನ ನೆನಪಿಸುತ್ತಿದ್ದಾರೆ. ಹಾಗೆಯೇ, ‘ಇದೇ ಕಾರಣಕ್ಕಾಗಿ ಎಪ್‌ಸ್ಟೀನ್ ಫೈಲ್ ಬಿಡುಗಡೆ ಮಾಡುತ್ತಿಲ್ಲ’ ಎಂದು ಟ್ರಂಪ್‌ರನ್ನು ಆರೋಪಿ ಸ್ಥಾನದಲ್ಲಿಟ್ಟು ದೂರುತ್ತಿದ್ದಾರೆ.
ವಿವಾದ ಭುಗಿಲೆದ್ದಿರುವ ಹೊತ್ತಿನಲ್ಲೇ, ಜನರ ಪ್ರಶ್ನೆಗಳಿಂದ ಪಾರಾಗಲು, ಎದುರಾಗುವ ಮುಜುಗರದಿಂದ ಬಚಾವಾಗಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗಾಲ್ಫ್ ಆಡಲು ಸ್ಕಾಟ್‌ಲೆಂಡ್‌ಗೆ ತೆರಳಿದ್ದಾರೆ.
ಅಸಲಿಗೆ ಅಮೆರಿಕ ಜನರ ಸ್ಮೃತಿಪಟಲದಿಂದ ಎಪ್‌ಸ್ಟೀನ್ ಫೈಲ್ ಮರೆಯಾಗಿತ್ತು. ಜೊತೆಗೆ ಎಪ್‌ಸ್ಟೀನ್ ಎಂಬ ಪಾತಕಿಯ ಜೊತೆಗೆ ಸಂಪರ್ಕವಿಟ್ಟುಕೊಂಡಿದ್ದವರು ಉನ್ನತ ಮಟ್ಟದ ವ್ಯಕ್ತಿಗಳಾದ ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರು, ಗಣ್ಯವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳಾದ್ದರಿಂದ, ಪ್ರಭಾವ ಬಳಸಿ ಆ ಫೈಲ್ ಹೊರಬರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಎಪ್‌ಸ್ಟೀನ್ ಫೈಲ್ ವಿಚಾರವನ್ನು ಎಳೆದು ತಂದವರು, ಜನ ಅದರ ಬಗ್ಗೆ ಮಾತನಾಡುವಂತೆ ಮಾಡಿದವರು ಟ್ರಂಪ್ ಅವರೇ. ಅಮೆರಿಕ ಚುನಾವಣೆಗೂ ಮುಂಚೆ, ಟ್ರಂಪ್, ‘ನಾವು ಅಧಿಕಾರಕ್ಕೆ ಬಂದರೆ, ಎಪ್‌ಸ್ಟೀನ್ ಫೈಲ್‌ಗಳನ್ನು ಬಿಡುಗಡೆ ಮಾಡುತ್ತೇವೆ. ಇದರಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕರಿದ್ದಾರೆ’ ಎಂದು ಆಕ್ರೋಶಭರಿತರಾಗಿ ಕೂಗಾಡಿದ್ದರು. ಚುನಾವಣೆ ನಡೆಯಿತು, ಟ್ರಂಪ್ ಗೆದ್ದರು, ಅಧ್ಯಕ್ಷರಾದರು. ಅಧಿಕಾರಕ್ಕೇರಿ ಆರು ತಿಂಗಳಾದರೂ ಎಪ್‌ಸ್ಟೀನ್ ಫೈಲ್ ಬಗ್ಗೆ ಟ್ರಂಪ್ ಉಸಿರೆತ್ತುತ್ತಿಲ್ಲ.
ಇದರಿಂದ ಬೇಸತ್ತ ಅಮೆರಿಕದ ಜನ ಈಗ ಬೀದಿಗಿಳಿದಿದ್ದಾರೆ. ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡು ಎಪ್‌ಸ್ಟೀನ್ ಮತ್ತು ಟ್ರಂಪ್ ಜೊತೆಗಿರುವ ಹಲವಾರು ಚಿತ್ರಗಳನ್ನು, ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿ, ಉತ್ತರಿಸಿ ಎನ್ನುತ್ತಿದ್ದಾರೆ.
ಬೀಸುವ ದೊಣ್ಣೆ ತಪ್ಪಿಸಿಕೊಂಡರೆ, ಸಾವಿರ ವರ್ಷ ಆಯುಸ್ಸು ಎನ್ನುವುದನ್ನು ಪ್ರಧಾನಿ ಮೋದಿಯವರಿಂದ ಕಲಿತಿರುವ ಅವರ ಸ್ನೇಹಿತ, ದೊಣ್ಣೆ ಏಟು ತಪ್ಪಿಸಿಕೊಳ್ಳಲು ಸ್ಕಾಟ್‌ಲೆಂಡ್‌ಗೆ ಹಾರಿದ್ದಾರೆ.
ಭಾರತ ಮತ್ತು ಅಮೆರಿಕ- ಎರಡೂ ದೇಶಗಳಲ್ಲಿ ಪ್ರಜಾಪ್ರಭುತ್ವವಿದೆ. ಮೋದಿ ಮತ್ತು ಟ್ರಂಪ್ ಜನರಿಂದ ಆಯ್ಕೆಯಾದ ನಾಯಕರೇ ಆಗಿದ್ದಾರೆ. ಆದರೆ ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸದೆ ಪಲಾಯನ ಮಾಡುತ್ತಿದ್ದಾರೆ.
ಇವರನ್ನು ಜನನಾಯಕರು ಎಂದು ಕರೆದರೆ, ಆ ಜನನಾಯಕ ಎಂಬ ಪದಕ್ಕೇ ಅವಮಾನ, ಅಲ್ಲವೇ?

ಲೇಖಕ, ಪತ್ರಕರ್ತ