ದೆಹಲಿಗೆ ಬರುವಂತೆ ಮಾಜಿ ಡಿಸಿಎಂ ಈಶ್ವರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಬುಲಾವ್ ಬಂದಿದ್ದು, ಈಶ್ವರಪ್ಪ ಇಂದು (ಗುರುವಾರ) ದೆಹಲಿಗೆ ಹೊರಟಿದ್ದಾರೆ. ಅವರೊಂದಿಗೆ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ಪಿ.ಸಿ.ಮೋಹನ್ ಅವರಿಗೂ ಹೈಕಮಾಂಡ್ ಬುಲಾವ್ ಬಂದಿದೆ. ಹೀಗಾಗಿ, ಈಶ್ವರಪ್ಪ ಜೊತೆಗೆ ಈ ಇಬ್ಬರೂ ಕೂಡ ದೆಹಲಿಗೆ ತೆರಳುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಈಶ್ವರಪ್ಪ, “ಹೈಕಮಾಂಡ್ ಕರೆ ಬಂದಿದೆ. ಹೀಗಾಗಿ, ದೆಹಲಿಗೆ ಹೋಗುತ್ತಿದ್ದೇನೆ. ಯಾವ ಕಾರಣಕ್ಕೆ ದೆಹಲಿಗೆ ಬರಲು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ರಾಜ್ಯಾಧ್ಯಕ್ಷ ಆಯ್ಕೆಗೆ ಹೈಕಮಾಂಡ್‌ಗೆ ಸಲಹೆ ನೀಡುವಷ್ಟು ನಾನು ದೊಡ್ಡವನಲ್ಲ. ಯಾಕೆ ಕರೆಸಿಕೊಳ್ಳುತ್ತಿದ್ದಾರೆ ಎಂಬುದು ಅಲ್ಲಿಗೆ ಹೋದ ಬಳಿಕವೇ ತಿಳಿಯಲಿದೆ” ಎಂದು ಹೇಳಿದ್ದಾರೆ.
“ಆಪರೇಷನ್ ಕಮಲ ನಡೆಸುತ್ತಿದ್ದೇವೆಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಅವರು ಪ್ರತಿದಿನ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅವರ ಶಾಸಕರಿಗೆ 50 ಕೋಟಿ ರೂ. ಕೊಡೋಕೆ ನಮಗೆ ಗ್ರಹಚಾರವೇ?” ಎಂದಿದ್ದಾರೆ.
“ಬಿಜೆಪಿಯಲ್ಲಿದ್ದ 50%ಗೂ ಹೆಚ್ಚು ಮಂದಿ ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಹೋಗಿರುವವರು ಚಿಲ್ಲರೆಪಲ್ಲರೆ ಕಾರ್ಯಕರ್ತರು. ಹೋದವರಲ್ಲಿ ಒಬ್ಬ ನಾಯಕನನ್ನು ತೋರಿಸಲಿ. ಹೋಗಿರೋರಲ್ಲಿ ಮತ್ತೆ ನಮ್ಮ ಪಕ್ಷಕ್ಕೆ ಯಾರ್‍ಯಾರು ಬರ್ತಾರೆ ಎಂಬುದನ್ನು ಮುಂದೆ ನೋಡಿ” ಎಂದು ಹೇಳಿದ್ದಾರೆ.