- ರೇವಣ್ಣ ಅವರ ಆಯ್ಕೆ ಅಸಿಂಧು ಕೋರಿ ದೇವರಾಜೇಗೌಡ ಅರ್ಜಿ
- ಮತದಾರರಿಗೆ ಕೋಳಿ ಮತ್ತು ನಗದು ಹಂಚಿರುವ ಆರೋಪ
ಶಾಸಕ ಎಚ್ ಡಿ ರೇವಣ್ಣ ಆಯ್ಕೆ ಅಸಿಂಧು ಕೋರಿ ವಕೀಲ ಜಿ.ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಸೋಮವಾರ (ಅ.30) ವಿಚಾರಣೆ ನಡೆಸಿದ ಹೈಕೋರ್ಟ್ ಮತ್ತೆ ರೇವಣ್ಣ ಅವರಿಗೆ ಸಮನ್ಸ್ ಜಾರಿ ಮಾಡುವಂತೆ ಸೂಚಿಸಿದೆ.
ಚುನಾವಣಾ ತಕರಾರು ಅರ್ಜಿಯ ನಿಯಮದಂತೆ ಸಮನ್ಸ್ ಜಾರಿ ಮಾಡಬೇಕು. ಅದರಂತೆ ಹೈಕೋರ್ಟ್ ನ್ಯಾ.ಜ್ಯೋತಿ ಮೂಲಿಮನಿ ಅವರು ಪ್ರಕ್ರಿಯೆಯಂತೆ ರೇವಣ್ಣ ಸೇರಿದಂತೆ ಇತರೆ ಅಭ್ಯರ್ಥಿಗಳಿಗೂ ಸಮನ್ಸ್ ಜಾರಿಗೆ ಸೂಚಿಸಿ ಮುಂದಿನ ವಿಚಾರಣೆ ನವೆಂಬರ್ 29ಕ್ಕೆ ನಿಗದಿಪಡಿಸಿದೆ.
ಏನಿದು ಪ್ರಕರಣ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್ ಡಿ ರೇವಣ್ಣ ಅವರ ಅವರ ಬೆಂಬಲಿಗರು ಮತದಾರರಿಗೆ ತಲಾ ಎರಡು ಕೋಳಿ ಮತ್ತು ಎರಡು ಸಾವಿರ ರೂ. ನಗದು ಹಂಚಿ ಮತ ಹಾಕಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಜಿ.ದೇವರಾಜೇಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಗೆ ಸಂಬಂಧಿಸಿದಂತೆ ರೇವಣ್ಣ ಅವರಿಗೆ ಸಮನ್ಸ್ ಜಾರಿಗೊಳಿಸಲು ಹೈಕೋರ್ಟ್ ಈ ಹಿಂದೆ ಸೂಚಿಸಿತ್ತು. ಆದರೆ ರೇವಣ್ಣ ಅವರಿಗೆ ಸಮನ್ಸ್ ಜಾರಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ವಕೀಲೆ ಪ್ರಮಿಳಾ ನೇಸರ್ಗಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಸಮನ್ಸ್ ಜಾರಿಗೆ ಮನವಿ ಮಾಡಿದ್ದರು.